ಆಮಿರ್ ಖಾನ್ 3ನೇ ಮದುವೆ: ಗೌರಿ ಜತೆ ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್

ಖ್ಯಾತ ನಟ ಆಮಿರ್ ಖಾನ್ ಅವರು 3ನೇ ಮದುವೆಗೆ ಸಜ್ಜಾಗಿದ್ದಾರೆ. ಪ್ರಿಯತಮೆ ಗೌರಿ ಜೊತೆ ಮದುವೆ ಯಾವ ರೀತಿ ನಡೆಯಲಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಕೇವಲ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಆಮಿರ್ ಖಾನ್ ಮತ್ತು ಗೌರಿ ನಿರ್ಧಾರ ಮಾಡಿದ್ದಾರೆ.

ಆಮಿರ್ ಖಾನ್ 3ನೇ ಮದುವೆ: ಗೌರಿ ಜತೆ ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
Gauri Spratt, Aamir Khan

Updated on: Jun 21, 2026 | 11:22 AM

ಬಾಲಿವುಡ್‌ ನಟ ಆಮಿರ್ ಖಾನ್ (Aamir Khan) ಅವರು ವೈಯಕ್ತಿಕ ಜೀವನದ ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಮದುವೆಯ ವದಂತಿಗಳಿಗೆ ಸ್ವತಃ ಆಮಿರ್ ಖಾನ್ ಅವರೇ ತೆರೆ ಎಳೆದಿದ್ದು, ತಮ್ಮ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಜೊತೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಜೋಡಿಯ ವಿವಾಹವು ಜುಲೈ 5ರಂದು ನಡೆಯಲಿದೆ ಎಂದು ವರದಿಯಾಗಿದೆ. ಅದನ್ನು ಆಮಿರ್ ಖಾನ್ ಅವರು ಒಪ್ಪಿಕೊಂಡಿದ್ದಾರೆ.

‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆಯ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ‘ಇದು ನಮ್ಮ ಮನೆಯಲ್ಲೇ ನಡೆಯಲಿರುವ ಅತ್ಯಂತ ಸರಳವಾದ ರಿಜಿಸ್ಟರ್ ಮ್ಯಾರೇಜ್ ಆಗಿರಲಿದೆ. ಮದುವೆಯಲ್ಲಿ ಕೇವಲ ಎರಡೂ ಕುಟುಂಬದ ಸದಸ್ಯರು ಮತ್ತು ತೀರಾ ಹತ್ತಿರದ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ನಾವಿಬ್ಬರೂ ಮದುವೆಯನ್ನು ತುಂಬಾ ಸಿಂಪಲ್ ಆಗಿ ಇಟ್ಟುಕೊಳ್ಳಲು ಬಯಸಿದ್ದೇವೆ’ ಎಂದು ಹೇಳಿದ್ದಾರೆ.

ಈ ಮದುವೆಗೆ ಬಾಲಿವುಡ್‌ನ ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರಂತಹ ಆಪ್ತ ಸ್ನೇಹಿತರು ಆಗಮಿಸಲಿದ್ದಾರೆಯೇ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ಆಮಿರ್ ಖಾನ್, ‘ನಾವಿಬ್ಬರೂ ಈಗ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

61 ವರ್ಷದ ಆಮಿರ್ ಖಾನ್ ಅವರಿಗೆ ಇದು 3ನೇ ಮದುವೆ. ಅವರ ಮೊದಲ ಪತ್ನಿ ರೀನಾ ದತ್ತಾ. ಆಮಿರ್ ಮತ್ತು ರೀನಾಗೆ ಜುನೈದ್ ಖಾನ್, ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ರೀನಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಕಿರಣ್ ರಾವ್ ಅವರನ್ನು ಆಮಿರ್ ಖಾನ್ ವಿವಾಹವಾಗಿದ್ದರು. 16 ವರ್ಷಗಳ ದಾಂಪತ್ಯದ ನಂತರ ಕಿರಣ್ ರಾವ್ ಅವರಿಂದಲೂ ಬೇರ್ಪಟ್ಟ ಅವರು, 3ನೇ ಮದುವೆಯ ನಿರ್ಧಾರ ಮಾಡಿದರು. ವಿಚ್ಛೇದನದ ನಂತರವೂ ಆಮಿರ್ ಖಾನ್ ಅವರು ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಉತ್ತಮ ಸ್ನೇಹ-ಸಂಬಂಧವನ್ನು ಹೊಂದಿದ್ದಾರೆ.

ಇದನ್ನೂ ಓದಿ:ಒಂದೇ ಕಾರಿನಲ್ಲಿ ಇಬ್ಬರು ಮಾಜಿ ಪತ್ನಿಯರು, ಭಾವಿ ಪತ್ನಿ; ಆಮಿರ್ ಖಾನ್ ಜರ್ನಿ ಕಂಡು ನೆಟ್ಟಿಗರು ಶಾಕ್

ಸಿನಿಮಾಗಳ ವಿಷಯಕ್ಕೆ ಬಂದರೆ, ಆಮಿರ್ ಖಾನ್ ಅವರು ಕಳೆದ ವರ್ಷ ಆರ್‌ಎಸ್ ಪ್ರಸನ್ನ ನಿರ್ದೇಶನದ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಸ್ಪ್ಯಾನಿಷ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್ ಆಗಿತ್ತು. ಇದಲ್ಲದೆ, ರಜನಿಕಾಂತ್ ನಟನೆಯ ‘ಕೂಲಿ’ ಮತ್ತು ‘ಹ್ಯಾಪಿ ಪಟೇಲ್’ ಚಿತ್ರಗಳಲ್ಲಿ ಆಮಿರ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಈಗ ಮದುವೆಯ ಸಲುವಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us