ಚೆನ್ನೈ ಮಹಾಮಳೆ: ಬಾಲಿವುಡ್ ಸ್ಟಾರ್ ಆಮಿರ್ ಖಾನ್ ರಕ್ಷಣೆ
Aamir Khan: ತಾಯಿಯ ಚಿಕಿತ್ಸೆಗಾಗಿ ಚೆನ್ನೈಗೆ ಆಗಮಿಸಿ ತಮಿಳು ನಟರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಮಹಾ ಮಳೆಯಲ್ಲಿ ಸಿಲುಕಿದ್ದರು. ಅವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
ಚೆನ್ನೈನಲ್ಲಿ ಮಿಚಾಂಗ್ (michaung) ಚಂಡಮಾರುತದಿಂದ ಸತತ ವರ್ಷಧಾರೆಯಾಗುತ್ತಿದ್ದು, ಚೆನ್ನೈನ ನಗರ ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೂರಿದೆ. ಈಗಾಗಲೇ ಸುಮಾರು 10 ಮಂದಿ ಈ ಮಹಾಮಳೆಗೆ ಬಲಿಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಚೆನ್ನೈ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಜನ ಮನೆಗಳಲ್ಲಿ ಸಿಲುಕಿದ್ದು ಅವರನ್ನು ಬೋಟ್ಗಳ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಸಹ ಮಳೆಯಿಂದ ತೊಂದರೆಗೀಡಾಗಿದ್ದಾರೆ. ಚೆನ್ನೈಗೆ ಬಂದಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅನ್ನು ಸಹ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
ತಾಯಿಯವರಿಗೆ ಚಿಕಿತ್ಸೆ ಕೊಡಿಸಲು ಆಮಿರ್ ಖಾನ್ ಚೆನ್ನೈಗೆ ಬಂದಿದ್ದರು. ಕಳೆದ ಕೆಲವು ದಿನಗಳಿಂದಲೂ ಅವರು ಚೆನ್ನೈನಲ್ಲಿಯೇ ಇದ್ದರು. ತಮಿಳು ನಟ ವಿಷ್ಣು ವಿಶಾಲ್ ಮನೆಯಲ್ಲಿ ಆಮಿರ್ ಖಾನ್ ತಂಗಿದ್ದರು ಎನ್ನಲಾಗುತ್ತಿದೆ. ಈ ವೇಳೆ ಚೆನ್ನೈನಲ್ಲಿ ಮಹಾ ಮಳೆ ಪ್ರಾರಂಭವಾಗಿದೆ ವಿಷ್ಣು ವಿಶಾಲ್ ಅವರು ಕಾರಪಕ್ಕಂ ನಿವಾಸದಲ್ಲಿ ಆಮಿರ್ ಖಾನ್ ಇದ್ದರು. ಅಲ್ಲಿ ನೀರಿನ ಮಟ್ಟ ಬಹಳ ವೇಗದಲ್ಲಿ ಮೇಲೇರಿ, ವಿಷ್ಣು ವಿಶಾಲ್ ಮನೆಗೆ ನೀರು ನುಗ್ಗಿದೆ. ಇದರಿಂದಾಗಿ ಆಮಿರ್ ಖಾನ್ ಹಾಗೂ ವಿಷ್ಣು ವಿಶಾಲ್ರ ಕುಟುಂಬದವರು ಮನೆಯ ತಾರಸಿ ಮೇಲೆ ಸಮಯ ಕಳೆವಂತಾಗಿದೆ.
ನೀರಿನ ಮಟ್ಟ ಬಹಳ ಏರಿಕೆಯಾದ ಕಾರಣ ಆಮಿರ್ ಖಾನ್ ವಾಸವಿದ್ದ ಕಾರಪಕ್ಕಂ ನಲ್ಲಿ 24 ಗಂಟೆಗಳ ವಿದ್ಯುತ್, ಮೊಬೈಲ್ ಸಿಗ್ನಲ್ ಸಹ ಇಲ್ಲದಾಗಿತ್ತು. ತಮ್ಮ ಪರಸ್ಥಿತಿಯ ಬಗ್ಗೆ ನಟ ವಿಷ್ಣು ವಿಶಾಲ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು. ಮನೆಯ ತಾರಸಿಯ ಒಂದು ಮೂಲೆಯಲ್ಲಷ್ಟೆ ಸಿಗ್ನಲ್ ಬರುತ್ತಿದೆ ಅಲ್ಲಿ ನಿಂತು ಈ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ, ನಮಗೆ ಸಹಾಯದ ಅವಶ್ಯಕತೆ ಇದೆ ಎಂದಿದ್ದರು.
ಇದನ್ನೂ ಓದಿ:‘ನಾನು ಅಂದು ಸಾಕಷ್ಟು ಅಳುತ್ತೇನೆ’; ಮಗಳ ಮದುವೆ ಡೇಟ್ ತಿಳಿಸಿ ಭಾವುಕರಾದ ಆಮಿರ್ ಖಾನ್
ಆ ಬಳಿಕ ರಕ್ಷಣಾ ಸಿಬ್ಬಂದಿ ಬೋಟ್ಗಳೊಂದಿಗೆ ಆಗಮಿಸಿ ನಟ ವಿಷ್ಣು ವಿಶಾಲ್ ಸೇರಿದಂತೆ ಅವರ ಮನೆಯಲ್ಲಿದ್ದ ಆಮಿರ್ ಖಾನ್ ಹಾಗೂ ಅವರ ಕುಟುಂಬಸ್ಥರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಆಮಿರ್ ಖಾನ್, ವಿಷ್ಣು ವಿಶಾಲ್ ಸೇರಿದಂತೆ ಇನ್ನೂ ಕೆಲವರನ್ನು ರಕ್ಷಣಾ ಸಿಬ್ಬಂದಿ ಬೋಟ್ನಲ್ಲಿ ಕರೆದುಕೊಂಡು ಬರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಕ್ಷಣಾ ಸಿಬ್ಬಂದಿ, ತಾವು ರಕ್ಷಿಸಿದ ಆಮಿರ್ ಖಾನ್ ಅವರೊಟ್ಟಿಗೆ ತೆಗೆಸಿಕೊಂಡಿರುವ ಚಿತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈನಲ್ಲಿ ಕೆಲ ವರ್ಷಗಳಿಗೊಮ್ಮೆ ಹೀಗೆ ಮಹಾ ಮಳೆಯಿಂದ ನೆರೆ ಪರಿಸ್ಥಿತಿ ಸೃಷ್ಟಿಯಾಗುತ್ತಿರುತ್ತದೆ. ತಗ್ಗು ಪ್ರದೇಶದಲ್ಲಿ ಕಟ್ಟಿದ ಬಡಾವಣೆಗಳಿಗೆ ನೀರು ನುಗ್ಗಿ ಅಸ್ಥವ್ಯಸ್ಥವಾಗುವುದು ಸಹ ಸಾಮಾನ್ಯ ಎಂಬಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ