
ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ (Dangal) ವಿಶ್ವಾದ್ಯಂತ ಅಂದಾಜು 2 ಸಾವಿರ ಕೋಟಿ ರೂಪಾಯಿ ಗಳಿಸಿತ್ತು. 2016ರಲ್ಲಿ ಬಿಡುಗಡೆ ಆದ ಆ ಚಿತ್ರಕ್ಕೆ ವಿವಿಧ ದೇಶಗಳಲ್ಲಿ ಪ್ರಶಂಸೆ ಸಿಕ್ಕಿತು. ವಿಶೇಷವಾಗಿ ಚೀನಾದ ಜನರು ಆ ಸಿನಿಮಾವನ್ನು ಸಖತ್ ಇಷ್ಟಪಟ್ಟರು. ಆದರೆ ಪಾಕಿಸ್ತಾನದಲ್ಲಿ ‘ದಂಗಲ್’ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಆಮಿರ್ ಖಾನ್ (Aamir Khan) ಅವರು ವಿವರಿಸಿದ್ದಾರೆ. ‘ದಂಗಲ್’ ಸಿನಿಮಾದಲ್ಲಿ ಇದ್ದ ಭಾರತದ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಯನ್ನು ತೆಗೆಯಬೇಕು ಎಂದು ಪಾಕಿಸ್ತಾನದ (Pakistan) ಸೆನ್ಸಾರ್ ಮಂಡಲಿ ಸೂಚಿಸಿತ್ತು. ಆದರೆ ಅದಕ್ಕೆ ಆಮಿರ್ ಖಾನ್ ಒಪ್ಪಿಕೊಳ್ಳಲಿಲ್ಲ.
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ‘ದಂಗಲ್ ಸಿನಿಮಾ ಬಿಡುಗಡೆ ಆದಾಗ ಡಿಸ್ನಿಯವರು ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದರು. ಅವರೇ ಸಿನಿಮಾ ಬಿಡುಗಡೆ ಮಾಡಿದರು. ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲು ಕೆಲವು ನಿರ್ಬಂಧ ಇದೆ ಎಂದು ತಿಳಿಸಿದರು’ ಎಂದು ಆ ಘಟನೆಯನ್ನು ಆಮಿರ್ ಖಾನ್ ನೆನಪಿಸಿಕೊಂಡಿದ್ದಾರೆ.
‘ಗೀತಾ ಪೋಗತ್ ಕುಸ್ತಿ ಗೆದ್ದಾಗ ನಮ್ಮ ರಾಷ್ಟ್ರ ಧ್ವಜ ಮೇಲಕ್ಕೆ ಹಾರುತ್ತದೆ ಹಾಗೂ ನಮ್ಮ ರಾಷ್ಟ್ರ ಗೀತೆ ಕೇಳಿಸುತ್ತದೆ. ಆ ಎರಡನ್ನೂ ನೀವು ತೆಗೆದುಹಾಕಬೇಕು, ಇಲ್ಲದಿದ್ದರೆ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ನೀಡುವುದಿಲ್ಲ ಅಂತ ಪಾಕಿಸ್ತಾನದವರು ನಮಗೆ ಹೇಳಿದ್ದರು. ಹಾಗಾದರೆ ಪಾಕಿಸ್ತಾನದಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡುವುದು ಬೇಡ ಅಂದು ನಾನು ಕೂಡಲೇ ತಿಳಿಸಿದೆ’ ಎಂದಿದ್ದಾರೆ ಆಮಿರ್ ಖಾನ್.
‘ಪಾಕಿಸ್ತಾನದಲ್ಲಿ ರಿಲೀಸ್ ಮಾಡದೇ ಇದ್ದರೆ ಬಿಸ್ನೆಸ್ಗೆ ತೊಂದರೆ ಆಗುತ್ತದೆ ಮತ್ತು ನಷ್ಟ ಆಗುತ್ತದೆ ಎಂದು ಡಿಸ್ನಿಯವರು ಹೇಳಿದರು. ಯಾರು ನಮ್ಮ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಯನ್ನು ತೆಗೆದುಹಾಕಿ ಎನ್ನುತ್ತಾರೋ ಅವರ ಜೊತೆ ನಾನು ಬಿಸ್ನೆಸ್ ಮಾಡಲ್ಲ ಅಂತ ನೇರವಾಗಿ ಹೇಳಿದೆ’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: 23 ವರ್ಷ ಕಿರಿಯ ನಟಿ ಜೊತೆ ರೊಮ್ಯಾನ್ಸ್; ಆಮಿರ್ ಖಾನ್ ಸಮರ್ಥನೆ ಏನು?
ಪಾಕಿಸ್ತಾನದಲ್ಲಿ ದಂಗಲ್ ಬಿಡುಗಡೆ ಆಗದಿದ್ದರೂ ಕೂಡ ವಿಶ್ವಾದ್ಯಂತ ಆ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಆಯಿತು. 2 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ನೈಜ ಘಟನೆ ಆಧರಿಸಿ ತಯಾರಾದ ಆ ಸಿನಿಮಾದಲ್ಲಿ ಆಮಿರ್ ಖಾನ್ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಆದರೆ ಆ ಬಳಿಕ ಆಮಿರ್ ಖಾನ್ ನಟಿಸಿದ ‘ಥಗ್ಸ್ ಆಫ್ ಹಿಂದುಸ್ತಾನ್’ ಮತ್ತು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳು ಗೆಲ್ಲಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.