‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್

‘ಲಗಾನ್’ ಸಿನಿಮಾದ ಶೂಟಿಂಗ್ ಸಮಯವನ್ನು ನಟ ಆಮಿರ್ ಖಾನ್ ಅವರು ಈಗ ನೆನಪಿಸಿಕೊಂಡಿದ್ದಾರೆ. ಪ್ರತಿ ದಿನ ಚಿತ್ರೀಕರಣಕ್ಕೆ ಹೋಗುವಾಗ ಇಂಗ್ಲಿಷ್ ಹಾಡುಗಳ ಬದಲಿಗೆ ಗಾಯತ್ರಿ ಮಂತ್ರ ಕೇಳುತ್ತಿದ್ದರು. ಅದರಿಂದಾಗಿ ಕೆಲಸದ ಮೇಲೆ ಏಕಾಗ್ರತೆ ಬರುತ್ತಿತ್ತು ಎಂದು ಆಮಿರ್ ಖಾನ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್
Aamir Khan

Updated on: Mar 15, 2026 | 2:38 PM

ಆಮಿರ್ ಖಾನ್ ನಟನೆಯ ‘ಲಗಾನ್’ (Lagaan) ಸಿನಿಮಾ ತೆರೆಕಂಡು 25 ವರ್ಷಗಳು ಕಳೆದಿವೆ. 2001ರಲ್ಲಿ ತೆರೆಕಂಡ ಈ ಇತಿಹಾಸ ನಿರ್ಮಿಸಿತ್ತು. 25 ವರ್ಷಗಳ ಪೂರೈಸಿದ ಪ್ರಯುಕ್ತ ರೆಡ್ ಲಾರಿ ಫಿಲ್ಮ್ ಫೆಸ್ಟಿವಲ್​​ನಲ್ಲಿ ಈ ಚಿತ್ರದ ಪ್ರದರ್ಶನ ಮಾಡಲಾಗಿದೆ. ಈ ವೇಳೆ ಆಮಿರ್ ಖಾನ್ (Aamir Khan) ಕೂಡ ಹಾಜರಿ ಹಾಕಿ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಲಗಾನ್’ ಚಿತ್ರದ ಶೂಟಿಂಗ್ ಸಮಯದಲ್ಲಿ, ಇಡೀ ತಂಡ ಪ್ರತಿದಿನ ಗಾಯತ್ರಿ ಮಂತ್ರ (Gayatri Mantra) ಕೇಳುತ್ತಿತ್ತು ಎಂಬುದನ್ನು ಆಮಿರ್ ಖಾನ್ ಮೆಲುಕು ಹಾಕಿದ್ದಾರೆ.

‘ಲಗಾನ್’ ಸಿನಿಮಾದಲ್ಲಿ ನಟಿಸಿದ್ದ ಅಖಿಲೇಂದ್ರ ಮಿಶ್ರಾ ಅವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಗಾಯತ್ರಿ ಮಂತ್ರವನ್ನು ಹಾಕುತ್ತಿದ್ದರು. ಈ ಬಗ್ಗೆ ಮಾತನಾಡಿದ ಆಮಿರ್, ‘ಕೆಲವರು ಇಂಗ್ಲಿಷ್ ಹಾಡುಗಳನ್ನು ಕೇಳಲು ಬಯಸುತ್ತಿದ್ದರು. ಆದರೆ ನಾನೇ ಪಟ್ಟು ಹಿಡಿದು ಗಾಯತ್ರಿ ಮಂತ್ರ ಹಾಕಿಸುತ್ತಿದ್ದೆ. ಸತತ ಆರು ತಿಂಗಳ ಕಾಲ ನಾವು ಶೂಟಿಂಗ್ ಜಾಗವನ್ನು ತಲುಪುವ ಮೊದಲು ಪ್ರತಿ ದಿನ ಈ ಮಂತ್ರವನ್ನು ಕೇಳುತ್ತಿದ್ದೆವು’ ಎಂದು ನೆನಪಿಸಿಕೊಂಡಿದ್ದಾರೆ.

ಬಸ್ಸಿನಲ್ಲಿ ಗಾಯತ್ರಿ ಮಂತ್ರ ಕೇಳುವುದರ ಹಿಂದಿನ ಉದ್ದೇಶವನ್ನು ವಿವರಿಸಿದ ಆಮಿರ್, ‘ನಾವು ಸೂರ್ಯೋದಯಕ್ಕೂ ಮುನ್ನವೇ ಶೂಟಿಂಗ್‌ಗೆ ಹೊರಡುತ್ತಿದ್ದೆವು. ಕತ್ತಲಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ಮಂತ್ರವನ್ನು ಕೇಳುವುದು ನಮಗೆ ಧ್ಯಾನಸ್ಥ ಸ್ಥಿತಿಗೆ ತಲುಪಲು ಸಹಾಯ ಮಾಡುತ್ತಿತ್ತು. ಕೆಲಸದ ಮೇಲೆ ಏಕಾಗ್ರತೆ ಬೆಳೆಸಲು ಇದು ಉಪಯುಕ್ತವಾಗಿತ್ತು’ ಎಂದಿದ್ದಾರೆ. ಚಿತ್ರದ ಕೊನೆಯ 10 ನಿಮಿಷಗಳನ್ನು ನೋಡಿದಾಗ ಇಂದಿಗೂ ತಮಗೆ ಭಾವುಕತೆ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಶುತೋಷ್ ಗೋವಾರಿಕರ್ ನಿರ್ದೇಶನದ ‘ಲಗಾನ್’ ಸಿನಿಮಾದಲ್ಲಿ ಬ್ರಿಟಿಷರ ಕಾಲದ ಕಥೆ ಇದೆ. ಕ್ರಿಕೆಟ್ ಪಂದ್ಯ ಗೆದ್ದು ಮೂರು ಪಟ್ಟು ತೆರಿಗೆಯಿಂದ ಗ್ರಾಮಸ್ಥರನ್ನು ರಕ್ಷಿಸುವ ಕಥೆಯನ್ನು ಚಿತ್ರದಲ್ಲಿ ತೋರಿಸಲಾಯಿತು. ಆರಂಭದಲ್ಲಿ ಈ ಕಥೆಯನ್ನು ಆಮಿರ್ ತಿರಸ್ಕರಿಸಿದ್ದರು! ಆದರೆ ಅವರ ತಂದೆ ತಾಹಿರ್ ಹುಸೇನ್ ಸಲಹೆಯ ಮೇರೆಗೆ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?

ಆಸ್ಕರ್‌ನ ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗಕ್ಕೆ ‘ಲಗಾನ್’ ನಾಮಿನೇಟ್ ಆಗಿತ್ತು. ಆದರೆ ಅಂತಿಮ ಹಂತಕ್ಕೆ ಆಯ್ಕೆ ಆಗಲಿಲ್ಲ. ಆಮಿರ್ ಖಾನ್ ಅವರ ಎವರ್​ಗ್ರೀನ್ ಸಿನಿಮಾಗಳಲ್ಲಿ ಈ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. 25 ವರ್ಷಗಳು ಕಳೆದರೂ ‘ಲಗಾನ್’ ಬಗ್ಗೆ ಜನರು ಮಾತನಾಡುತ್ತಲೇ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:34 pm, Sun, 15 March 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us