ಆಮಿರ್ ಖಾನ್ ಮಗ ಜುನೈದ್ ಖಾನ್ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ ಜೋಡಿ
ಬಾಲಿವುಡ್ನಲ್ಲಿ ನೆಪೋಟಿಸಂ ಬಗ್ಗೆ ಆಗಾಗ ಟೀಕೆ ಕೇಳಿಬರುತ್ತದೆ. ಹಾಗಿದ್ದರೂ ಕೂಡ ಸ್ಟಾರ್ ಕಲಾವಿದರ ಮಕ್ಕಳಿಗೆ ಸುಲಭವಾಗಿಯೇ ಅವಕಾಶ ಸಿಗುತ್ತಿದೆ. ಆಮಿರ್ ಖಾನ್ ಮಗ ಜುನೈದ್ ಖಾನ್ ಅವರಿಗೆ ಈಗಾಗಲೇ 3 ಸಿನಿಮಾಗಳ ಚಾನ್ಸ್ ಸಿಕ್ಕಿದೆ. ಮೊದಲ ಸಿನಿಮಾದ ಬಿಡುಗಡೆಗೂ ಮುನ್ನವೇ ಅವರಿಗೆ ಹಲವು ಅವಕಾಶಗಳು ಹರಿದುಬರುತ್ತಿವೆ.

ಹಿಂದಿ ಚಿತ್ರರಂಗದಲ್ಲಿ ಈಗ ಹೊಸ ತಲೆಮಾರಿನ ಕಲಾವಿದರು ಎಂಟ್ರಿ ನೀಡುತ್ತಿದ್ದಾರೆ. ಬಾಲಿವುಡ್ (Bollywood) ಸೆಲೆಬ್ರಿಟಿಗಳ ಮಕ್ಕಳು ಮಿಂಚಲು ಸಜ್ಜಾಗಿದ್ದಾರೆ. ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ (Junaid Khan) ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ಮೊದಲ ಸಿನಿಮಾ ಇನ್ನೂ ತೆರೆಕಾಣುವುದು ಬಾಕಿ ಇದೆ. ಅಷ್ಟರಲ್ಲಾಗಲೇ ಮೂರನೇ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ವರದಿ ಆಗಿದೆ. ಈ ಸಿನಿಮಾದಲ್ಲಿ ಅವರು ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ (Khushi Kapoor) ಜೊತೆ ನಟಿಸುತ್ತಾರೆ ಎಂದು ಸುದ್ದಿ ಆಗಿದೆ.
ಜುನೈದ್ ಖಾನ್ ಅವರು ಹಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಪಳಗಿದ್ದಾರೆ. ಈಗ ಅವರು ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. 2ನೇ ಸಿನಿಮಾದಲ್ಲಿ ಜುನೈದ್ ಖಾನ್ ಅವರು ಸಾಯಿ ಪಲ್ಲವಿ ಜೊತೆ ನಟಿಸುತ್ತಿದ್ದಾರೆ. ಆ ಸಿನಿಮಾದ ಟೈಟಲ್ ಇನ್ನೂ ಬಹಿರಂಗ ಆಗಿಲ್ಲ. ಅಷ್ಟರಲ್ಲಾಗಲೇ ಮೂರನೇ ಸಿನಿಮಾದ ಬಗ್ಗೆ ಎಗ್ಸೈಟಿಂಗ್ ಸುದ್ದಿ ಕೇಳಿಬಂದಿದೆ.
ಮೂರನೇ ಸಿನಿಮಾದಲ್ಲಿ ಜುನೈದ್ ಖಾನ್ ಅವರು ರಿಮೇಕ್ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ ‘ಲವ್ ಟುಡೇ’ ಹಿಂದಿಗೆ ರಿಮೇಕ್ ಆಗಲಿದ್ದು, ಆ ಚಿತ್ರದಲ್ಲಿ ಜುನೈದ್ ಖಾನ್ ಮತ್ತು ಖುಷಿ ಕಪೂರ್ ಅವರು ಒಟ್ಟಿಗೆ ನಟಿಸುವ ಸಾಧ್ಯತೆ ದಟ್ಟವಾಗಿದೆ. ಅದ್ವೈತ್ ಚಂದನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶೀಘ್ರದಲ್ಲೇ ಇದರ ಶೂಟಿಂಗ್ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿಳ ‘ನನ್ನ ಮಕ್ಕಳೇ ನನ್ನ ಮಾತು ಕೇಳಲ್ಲ’: ಆಮಿರ್ ಖಾನ್ ಹೀಗೆ ಹೇಳಿದ್ದು ಯಾಕೆ?
ಶ್ರೀದೇವಿ ಅವರ ಮೊದಲ ಮಗಳು ಜಾನ್ವಿ ಕಪೂರ್ ಈಗಾಗಲೇ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. 2ನೇ ಮಗಳು ಖುಷಿ ಕಪೂರ್ ಅವರು ‘ದಿ ಆರ್ಚೀಸ್’ ಸಿನಿಮಾದಲ್ಲಿ ನಟಿಸುವ ಮೂಲಕ ಖಾತೆ ತೆರೆದಿದ್ದಾರೆ. ಆ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಯಿತು. ಅವರ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಗಾಸಿಪ್ ಕೇಳಿಬರುತ್ತಿದೆ. ಜುನೈದ್ ಖಾನ್ ಮತ್ತು ಖುಷಿ ಕಪೂರ್ ಜೋಡಿಯಾದರೆ ಅಭಿಮಾನಿಗಳಿಗೆ ಖುಷಿ ಆಗಲಿದೆ. ಹಿಂದಿ ಚಿತ್ರರಂಗಲ್ಲಿ ನೆಪೋಟಿಸಂ ಕುರಿತು ಆಗಾಗ ಟೀಕೆ ಕೇಳಿಬರುತ್ತದೆ. ಆದರೂ ಸಹ ಬಾಲಿವುಡ್ನ ಸ್ಟಾರ್ ಕಲಾವಿದರ ಮಕ್ಕಳಿಗೆ ಸುಲಭವಾಗಿ ಅವಕಾಶ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.