ಮಾಡೋದು ಹಿಂದಿ ಸಿನಿಮಾ, ಆದ್ರೆ ಮರಾಠಿ ಮೇಲೆ ಪ್ರೀತಿ: ಆಮಿರ್ ಖಾನ್ ವಿರುದ್ಧ ಟೀಕೆ

ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಅಮಿರ್ ಖಾನ್ ಅವರು ‘ಇದು ಮಹಾರಾಷ್ಟ್ರ’ ಎಂದು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಗರು ಪರ ಹಾಗೂ ವಿರೋಧದ ಕಮೆಂಟ್ ಮಾಡುತ್ತಿದ್ದಾರೆ. ಆಮಿರ್ ಖಾನ್ ಅವರ ಹೇಳಿಕೆಯಿಂದ ಹಿಂದಿ ವರ್ಸಸ್ ಮರಾಠಿ ಎಂಬ ಚರ್ಚೆಗೆ ಕಿಡಿ ಹೊತ್ತಿಕೊಂಡಂತೆ ಆಗಿದೆ.

ಮಾಡೋದು ಹಿಂದಿ ಸಿನಿಮಾ, ಆದ್ರೆ ಮರಾಠಿ ಮೇಲೆ ಪ್ರೀತಿ: ಆಮಿರ್ ಖಾನ್ ವಿರುದ್ಧ ಟೀಕೆ
Aamir Khan

Updated on: Jan 16, 2026 | 3:20 PM

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರ ಹೆಸರು ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ದೇಶದ ಹಲವು ಕಡೆಗಳಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವೆ ಘರ್ಷಣೆ ನಡೆಯುತ್ತಿದೆ. ಮಹಾರಾಷ್ಟ್ರ ಕೂಡ ಇದಕ್ಕೆ ಹೊರತಾಗಿಲ್ಲ. ಮರಾಠಿ (Marathi) ಮಾತನಾಡಿಲ್ಲ ಎಂದು ಕೆಲವರು ಗಲಾಟೆ ಮಾಡಿದ ಪ್ರಕರಣಗಳು ಹಲವು ಬಾರಿ ದಾಖಲಾಗಿವೆ. ಈಗ ಆಮಿರ್ ಖಾನ್ ಅವರ ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಅದರಿಂದಾಗಿ ಮತ್ತೆ ಮರಾಠಿ ವರ್ಸಸ್ ಹಿಂದಿ (Hindi)  ಚರ್ಚೆಗೆ ಕಿಡಿ ಹೊತ್ತಿಸಿದಂತಾಗಿದೆ.

ಮುಂಬೈ ಕಾರ್ಪೋರೇಷನ್ ಚುನಾವಣೆಯಲ್ಲಿ ಆಮಿರ್ ಖಾನ್ ಅವರು ಮತ ಚಲಾಯಿಸಿದರು. ಮತ ಹಾಕಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮೊದಲು ಮರಾಠಿಯಲ್ಲಿ ಮಾತನಾಡಿದರು. ಬಳಿಕ ಹಿಂದಿಯಲ್ಲೂ ಹೇಳಿಕೆ ನೀಡುವಂತೆ ಮಾಧ್ಯಮದವರು ಮನವಿ ಮಾಡಿದರು. ಆದರೆ ಆಮಿರ್ ಖಾನ್ ಅವರು ‘ಹಿಂದಿಯಲ್ಲಿ ಹೇಳಬೇಕಾ? ಇದು ಮಹಾರಾಷ್ಟ್ರ’ ಎಂದು ಹೇಳಿದರು.

‘ನಿಮ್ಮ ಹೇಳಿಕೆ ದೆಹಲಿಯಲ್ಲಿ ಕೂಡ ಪ್ರಸಾರ ಆಗುತ್ತದೆ’ ಎಂದು ಮಾಧ್ಯಮದವರು ಹೇಳಿದ ಬಳಿಕ ಆಮಿರ್ ಖಾನ್ ಅವರು ಹಿಂದಿಯಲ್ಲಿ ಮಾತನಾಡಿದರು. ‘ಓಹ್ ದೆಹಲಿಯಲ್ಲೂ ಪ್ರಚಾರ ಆಗುತ್ತಾ? ಮತದಾನಕ್ಕೆ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಬಂದು ಮತದಾನ ಮಾಡಿ’ ಎಂದು ಆಮಿರ್ ಖಾನ್ ಹೇಳಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಆಮಿರ್ ಖಾನ್ ಅವರು ವಾಸಿಸುತ್ತಿರುವುದು ಮಹಾರಾಷ್ಟ್ರದಲ್ಲಿ. ಆದರೆ ಈವರೆಗೂ ಅವರು ಮರಾಠಿ ಸಿನಿಮಾ ಮಾಡಿಲ್ಲ. ಅವರು ಫೇಮಸ್ ಆಗಿರುವುದು, ಹಣ ಗಳಿಸಿರುವುದು ಹಿಂದಿ ಸಿನಿಮಾದಿಂದ. ಒಂದು ವೇಳೆ ಅವರಿಗೆ ಮರಾಠಿ ಮೇಲೆ ಅಷ್ಟೊಂದು ಪ್ರೀತಿ ಇರುವುದೇ ಹೌದಾದರೆ ಮರಾಠಿಯಲ್ಲೇ ಸಿನಿಮಾ ಮಾಡಲಿ. ಬರೀ ಹಿಂದಿ ಸಿನಿಮಾ ಯಾಕೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪೈರಸಿಯಿಂದಲೇ ಚೀನಾದಲ್ಲಿ ಸೂಪರ್​ಸ್ಟಾರ್ ಆದ ಆಮಿರ್ ಖಾನ್

ಇನ್ನು ಕೆಲವರು ಆಮಿರ್ ಖಾನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಆಮಿರ್ ಖಾನ್ ಅವರು ವ್ಯಂಗ್ಯವಾಗಿ ಆ ಹೇಳಿಕೆ ನೀಡಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳುವ ಬುದ್ಧಿ ಈ ಜನರಿಗೆ ಇಲ್ಲ’ ಎಂಬ ಕಮೆಂಟ್ ಬಂದಿದೆ. ಒಟ್ಟಿನಲ್ಲಿ ಆಮಿರ್ ಖಾನ್ ಅವರ ಹೇಳಿಕೆಯಿಂದ ಹಿಂದಿ ವರ್ಸಸ್ ಮರಾಠಿ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.