ಆಮಿರ್ ಖಾನ್ ಅನ್ನು ಒಂದೇ ದಿನದಲ್ಲಿ ಬಡವನನ್ನಾಗಿ ಮಾಡುವ ಶಕ್ತಿ ಆ ಒಬ್ಬ ವ್ಯಕ್ತಿಗಿದೆ

Aamir Khan: ಬಾಲಿವುಡ್​ನ ಸ್ಟಾರ್ ನಟ ಆಮಿರ್ ಖಾನ್. ನಟ ಆಗಿರುವ ಜೊತೆಗೆ ನಿರ್ಮಾಪಕ ಮತ್ತು ಹೂಡಿಕೆದಾರ ಸಹ ಆಗಿದ್ದಾರೆ ಆಮಿರ್ ಖಾನ್. ನಟ ಆಮಿರ್, ಇತ್ತೀಚೆಗೆ ಪಾಡ್​ಕಾಸ್ಟ್ ಒಂದರಲ್ಲಿ ಭಾಗವಹಿಸಿದ್ದು, ತಮ್ಮ ಹಣಕಾಸು ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ ತಮ್ಮನ್ನು ಒಂದೇ ದಿನದಲ್ಲಿ ಬಡವನನ್ನಾಗಿ ಮಾಡುವ ಶಕ್ತಿ ಇರುವ ವ್ಯಕ್ತಿಯನ್ನು ಹೆಸರಿಸಿದ್ದಾರೆ.

ಆಮಿರ್ ಖಾನ್ ಅನ್ನು ಒಂದೇ ದಿನದಲ್ಲಿ ಬಡವನನ್ನಾಗಿ ಮಾಡುವ ಶಕ್ತಿ ಆ ಒಬ್ಬ ವ್ಯಕ್ತಿಗಿದೆ
Aamir Khan

Updated on: Jun 05, 2025 | 1:01 PM

ಆಮಿರ್ ಖಾನ್ (Aamir Khan), ಬಾಲಿವುಡ್​ನ ಬಲು ದೊಡ್ಡ ಸ್ಟಾರ್. ಇನ್ನಿಬ್ಬರು ಖಾನ್​ಗಳ ರೀತಿ ಕೇವಲ ಕಮರ್ಶಿಯಲ್ ಸಿನಿಮಾಗಳನ್ನು ಮಾಡದೆ ಒಳ್ಳೆಯ ಸಿನಿಮಾ ನೀಡುವ ತುಡಿತ ಇರುವ ನಿಜವಾದ ಸಿನಿಮಾ ಪ್ರೇಮಿ ಆಮಿರ್ ಖಾನ್. ಒಳ್ಳೆಯ ಸಿನಿಮಾ ನೀಡುವ ಪ್ರಯತ್ನದಲ್ಲಿ ಹಲವು ಬಾರಿ ಕೈ ಸುಟ್ಟುಕೊಂಡಿದ್ದು ಸಹ ಇದೆ ಆಮಿರ್ ಖಾನ್. ಭಾರಿ ನಿರೀಕ್ಷೆ ಇಟ್ಟು, ಭಾರಿ ಬಜೆಟ್ ಹಾಕಿ ಮಾಡಿದ್ದ ಅವರ ಈ ಹಿಂದಿನ ಸಿನಿಮಾ ಫ್ಲಾಪ್ ಸಹ ಆಯ್ತು. ಹಾಗೆಂದು ಆಮಿರ್ ಖಾನ್ ಇತರೆ ಖಾನ್​ಗಳಿಗಿಂತಲೂ ಕಡಿಮೆ ಶ್ರೀಮಂತರೇನಲ್ಲ. ಸ್ವಂತ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ಇತರೆ ಉದ್ಯಮಗಳನ್ನು ಸಹ ಅವರು ಹೊಂದಿದ್ದಾರೆ. ಆದರೆ ಸ್ವತಃ ಆಮಿರ್ ಖಾನ್ ಹೇಳಿಕೊಂಡಿರುವಂತೆ ಒಬ್ಬ ವ್ಯಕ್ತಿಗೆ ಮಾತ್ರ ಒಂದೇ ಕ್ಷಣದಲ್ಲಿ ತಮ್ಮನ್ನು ಬಿಕಾರಿ ಮಾಡಲು ಸಾಧ್ಯವಿದೆಯಂತೆ.

ಇತ್ತೀಚೆಗೆ ಪಾಡ್​ಕಾಸ್ಟ್​ ಒಂದರಲ್ಲಿ ಭಾಗವಹಿಸಿದ್ದ ಆಮಿರ್ ಖಾನ್ ತಮ್ಮ ಜೀವನದ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆಮಿರ್ ಖಾನ್ ತಮ್ಮ ಹಣಕಾಸು ಸ್ಥಿತಿಯ ಬಗ್ಗೆಯೂ ಪಾಡ್​ಕಾಸ್ಟ್​​ನಲ್ಲಿ ಮಾತನಾಡಿದ್ದಾರೆ. ‘ನನ್ನ ಬಳಿ ಎಷ್ಟು ಹಣ ಇದೆ ಎಂಬುದು ನನಗೆ ಗೊತ್ತಿಲ್ಲ, ನನ್ನ ಹಣ ಎಲ್ಲೆಲ್ಲಿ ಹೂಡಿಕೆ ಆಗಿದೆ ಎಂಬುದು ಸಹ ನನಗೆ ಗೊತ್ತಿಲ್ಲ. ನಾನು ಈಗ ಲಾಭದಲ್ಲಿದ್ದೇನೆಯೇ, ನಷ್ಟದಲ್ಲಿದ್ದೇನೆಯೇ, ನನ್ನ ಸಾಲಗಳು ಎಷ್ಟಿವೆ ಇದ್ಯಾವುದೂ ಸಹ ನನಗೆ ಗೊತ್ತಿಲ್ಲ’ ಎಂದಿದ್ದಾರೆ ಆಮಿರ್ ಖಾನ್.

‘ಆದರೆ ನನ್ನ ಬಳಿ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ಬಿಮಲ್ ಪಾರೇಖ್. ಆತ ಒಂದು ರೀತಿ ನನ್ನ ಮಲತಾಯಿ ಇದ್ದಂತೆ. ನನ್ನ ತಾಯಿ ಹೌದು, ನನ್ನನ್ನು ಸಾಕಷ್ಟು ಕೇರ್ ಮಾಡುತ್ತಾನೆ ಆದರೆ ಮಲತಾಯಿಯೂ ಹೌದು ಏಕೆಂದರೆ ನನಗೆ ಸಾಕಷ್ಟು ಹಿಂಸೆ ಕೊಡುತ್ತಾನೆ. ಸದಾ ನನ್ನ ಮೇಲೆ ಕಣ್ಣಿಡುತ್ತಾನೆ, ಬೈಯ್ಯುತ್ತಿರುತ್ತಾನೆ. ಆತ ನನ್ನ ಸಿಎ ನನ್ನ ಎಲ್ಲ ಆರ್ಥಿಕ ವಿಷಯಗಳನ್ನು ಆತನೇ ನೋಡಿಕೊಳ್ಳುತ್ತಾನೆ. ನನ್ನ ವೃತ್ತಿಯ ಆರಂಭದಿಂದಲೂ ಆತ ನನ್ನ ಜೊತೆಗೆ ಇದ್ದಾನೆ. ಆತ ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ನನ್ನನ್ನು ಬಿಕಾರಿ ಮಾಡಿಬಿಡಬಹುದು, ನಾನು ಅವನ್ನನು ತಡೆಯಲು ಸಹ ಸಾಧ್ಯವಿಲ್ಲ’ ಎಂದಿದ್ದಾರೆ ಆಮಿರ್ ಖಾನ್.

ಇದನ್ನೂ ಓದಿ:ಬರೀ ರಿಮೇಕ್ ಮಾಡ್ತೀರಿ ಎಂಬ ಟೀಕೆಗೆ ಖಡಕ್ ಉತ್ತರ ನೀಡಿದ ಆಮಿರ್ ಖಾನ್

ನಟ ಆಮಿರ್ ಖಾನ್ ಅವರ ಎಲ್ಲ ಹಣಕಾಸು ವ್ಯವಹಾರವನ್ನು ಬಿಮಲ್ ಪಾರೇಖ್ ನೋಡಿಕೊಳ್ಳುತ್ತಾರೆ. ಆಮಿರ್ ಅವರ ಎಲ್ಲ ಹೂಡಿಕೆಗಳನ್ನು ನಿರ್ವಹಿಸುತ್ತಿರುವುದು ಸಹ ಅವರೇ. ಹಾಗಾಗಿ ಆಮಿರ್ ಖಾನ್ ಅವರ ಎಲ್ಲ ಮಾಹಿತಿಯೂ ಅವರ ಬಳಿ ಇದೆ. ಆದರೆ ಆಮಿರ್ ಖಾನ್​ಗೆ ಬಿಮಲ್ ಪಾರೇಖ್ ಮೇಲೆ ಬಹಳ ನಂಬಿಕೆ. ಬಿಮಲ್ ಅವರನ್ನು ಸ್ವಂತ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಆಮಿರ್ ಖಾನ್. ದಶಕಗಳಿಂದಲೂ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಆಮಿರ್ ಖಾನ್ ಪ್ರಸ್ತುತ ‘ಸಿತಾರೆ ಜಮೀನ್ ಪರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ವಿಶೇಷ ಚೇತನ ವ್ಯಕ್ತಿಗಳಿಗೆ ಬಾಸ್ಕೆಟ್ ಬಾಲ್ ಆಟ ಕಲಿಸಿ ಅವರು ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಕಪ್ ಗೆಲ್ಲುವಂತೆ ಮಾಡುವ ಬಾಸ್ಕೆಟ್ ಬಾಲ್ ಕೋಚ್​ನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಜೆನಿಲಿಯಾ ಡಿ ಸೋಜಾ ನಟಿಸಿದ್ದಾರೆ. ಸಿನಿಮಾಕ್ಕೆ ಆಮಿರ್ ಖಾನ್ ಅವರೇ ಬಂಡವಾಳ ತೊಡಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Thu, 5 June 25