ನಟ ಅಮಿತಾಭ್ ಬಚ್ಚನ್ಗೆ ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ
ಖ್ಯಾತ ನಟ ಅಮಿತಾಭ್ ಬಚ್ಚನ್ ಅವರಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿವೆ. ಈಗ ಅವರ ಮುಡಿಗೆ ಇನ್ನೊಂದು ಗರಿ ಸೇರ್ಪಡೆ ಆಗುತ್ತಿದೆ. ಏಪ್ರಿಲ್ 24ರಂದು ಅಮಿತಾಭ್ ಬಚ್ಚನ್ ಅವರಿಗೆ ‘ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಚಿತ್ರರಂಗದಲ್ಲಿ ಬಿಗ್-ಬಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..
ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ, ಆ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಬಾಲಿವುಡ್ (Bollywood) ನಟ ಅಮಿತಾಭ್ ಬಚ್ಚನ್ ಅವರಿಗೆ ಪ್ರತಿಷ್ಠಿತ ‘ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ಯನ್ನು (Lata Deenanath Mangeshkar Award) ನೀಡಿ ಗೌರವಿಸಲಾಗುತ್ತಿದೆ. ಮಂಗೇಶ್ಕರ್ ಕುಟುಂಬವು ಈ ಪ್ರಶಸ್ತಿಯನ್ನು ನೀಡುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಅಮಿತಾಭ್ ಬಚ್ಚನ್ (Amitabh Bachchan) ಅವರು ಬೀರಿದ ಪ್ರಭಾವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮೂಲಕ ಪ್ರಶಸ್ತಿ ಘೋಷಣೆ ಮಾಡಲಾಯಿತು. ಈ ಮೊದಲು ಇದೇ ಪ್ರಶಸ್ತಿ ಪಡೆದ ನರೇಂದ್ರ ಮೋದಿ ಹಾಗೂ ಗಾಯಕಿ ಆಶಾ ಭೋಂಸ್ಲೆ ಅವರ ಸಾಲಿಗೆ ಈಗ ಅಮಿತಾಭ್ ಬಚ್ಚನ್ ಸೇರ್ಪಡೆ ಆಗುತ್ತಿದ್ದಾರೆ.
‘ಭಾರತ ರತ್ನ’ ಪ್ರಶಸ್ತಿ ಪುರಸ್ಕೃತೆ, ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ‘ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ’ ನೀಡುತ್ತಿರುವ ಈ ಪ್ರಶಸ್ತಿಯು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುತ್ತದೆ. ಅಮಿತಾಬ್ ಬಚ್ಚನ್ ಅವರ ಜೊತೆಗೆ, ಅತ್ಯುತ್ತಮ ಸಾಧನೆ ಮಾಡಿದ ಹಲವಾರು ದಿಗ್ಗಜರಿಗೆ ಈ ಪ್ರಶಸ್ತಿ ಸಿಗುತ್ತಿದೆ.
ಇದನ್ನೂ ಓದಿ: ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್ ಬಿ’ ಅಮಿತಾಭ್ ಬಚ್ಚನ್
ಇದರ ಜೊತೆಗೆ ‘ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಹಿರಿಯ ಮರಾಠಿ ಸಿನಿಮಾ ಕಲಾವಿದ ಅಶೋಕ್ ಸರಾಫ್, ಮರಾಠಿ ನಟಿ ಪದ್ಮಿನಿ ಕೊಲ್ಹಾಪುರೆ, ಗಾಯಕ ರೂಪ್‌ಕುಮಾರ್ ರಾಥೋಡ್, ಮರಾಠಿ ರಂಗಭೂಮಿಯ ದಿಗ್ಗಜ ಅತುಲ್ ಪರ್ಚುರೆ ಹಾಗೂ ಖ್ಯಾತ ಲೇಖಕಿ ಮಂಜಿರಿ ಫಡ್ಕೆ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ನಟ, ನಿರ್ದೇಶಕ, ನಿರ್ಮಾಪಕ ರಣದೀಪ್ ಹೂಡಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ದೀನನಾಥ್ ಮಂಗೇಶ್ಕರ್ ನಾಟ್ಯಗೃಹದಲ್ಲಿ ಏಪ್ರಿಲ್ 24ರಂದು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಹೃದಯನಾಥ್ ಮಂಗೇಶ್ಕರ್, ಗಾಯಕಿ ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಅವರ ಪುತ್ರ ಆದಿನಾಥ್ ಮಂಗೇಶ್ಕರ್ ಹಾಜರಿದ್ದರು. ಕಳೆದ 34 ವರ್ಷಗಳಲ್ಲಿ 212 ಗಣ್ಯ ವ್ಯಕ್ತಿಗಳನ್ನು ಗೌರವಿಸಿ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.