ಸೋನು ಸೂದ್ (Sonu Sood) ಸಾಕಷ್ಟು ಸಾಮಾಜಿಕ ಕೆಲಸಗಳ ಜಾವಾಬ್ದಾರಿ ತೆಗೆದುಕೊಂಡಿದ್ದಾರೆ. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಅವರು ಮಾಡಿರುವ ಸೇವೆಗಳು ಒಂದೆರಡಲ್ಲ. ಆರಂಭದಲ್ಲಿ ಕೊರೊನಾ ತಂದ ಸಂಕಷ್ಟಗಳ ಬಗ್ಗೆ ಮಾತ್ರ ಅವರು ಸ್ಪಂದಿಸುತ್ತಿದ್ದರು. ಆ ಬಳಿಕ ಅವರ ಕೆಲಸದ ವ್ಯಾಪ್ತಿ ಹಿರಿದಾಯಿತು. ಎಲ್ಲ ರೀತಿಯಲ್ಲೂ ಅವರು ಸಹಾಯ ಮಾಡೋಕೆ ನಿಂತರು. ಇದು ರಾಜಕೀಯಕ್ಕೆ ಎಂಟ್ರಿ ನೀಡೋಕೆ ಅವರು ಮಾಡುತ್ತಿರುವ ಗಿಮಿಕ್ ಎಂದು ಕೆಲವರು ಹೇಳದೇ ಬಿಡಲಿಲ್ಲ. ಆದರೆ, ಇದನ್ನು ಸೋನು ಸೂದ್ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಅವರ ಸಹೋದರಿ ಮಾಳವಿಕಾ ಸೂದ್ ಅವರು ಇತ್ತೀಚೆಗೆ ಪಂಜಾಬ್ನಲ್ಲಿ ಕಾಂಗ್ರೆಸ್ ಸೇರಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Punjab Assembly Election 2022, ) ಅವರು ಸ್ಪರ್ಧಿಸುತ್ತಿದ್ದಾರೆ. ಅವರ ಪರ ಪ್ರಚಾರ ಮಾಡುವುದಿಲ್ಲ ಎಂದು ಸೋನು ಹೇಳಿದ್ದರು. ಆದರೆ, ಈಗ ಅಲ್ಲಿ ಆಗುತ್ತಿರುವುದೇ ಬೇರೆ.
ಪಂಜಾಬ್ನ ಕಾಂಗ್ರೆಸ್ ಪಕ್ಷದ ಜೊತೆಗೆ ಮಾಳವಿಕಾ ಸೂದ್ ಕೈ ಜೋಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಆದರೆ ಚುನಾವಣಾ ಪ್ರಚಾರದಲ್ಲಿ ಅವರಿಗೆ ಸೋನು ಸೂದ್ ಕಡೆಯಿಂದ ಯಾವುದೇ ಸಹಾಯ ಸಿಗುವುದಿಲ್ಲ ಎಂದು ಹೇಳಿದ್ದರು. ‘ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನನ್ನ ತಂಗಿ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಕೆಲವು ವರ್ಷಗಳಿಂದ ಆಕೆ ಪಂಜಾಬ್ನಲ್ಲಿ ವಾಸಿಸುತ್ತಿದ್ದಾಳೆ. ಜನರ ಸಮಸ್ಯೆಗಳೇನು ಎಂಬುದನ್ನು ತಿಳಿದಿದ್ದಾಳೆ. ಜನರ ಜೊತೆ ಸಂಪರ್ಕದಲ್ಲಿ ಇದ್ದುಕೊಂಡು ನೇರವಾಗಿ ಆಕೆ ಸಹಾಯ ಮಾಡುತ್ತಾಳೆ ಎಂದರೆ ಅದು ಖುಷಿಯ ವಿಚಾರ. ರಾಜಕೀಯದಲ್ಲಿ ಮುಂದುವರಿಯಬೇಕು ಎಂಬುದು ಆಕೆಯ ನಿರ್ಧಾರ. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಮಾಡುತ್ತಿರುವ ಕೆಲಸವನ್ನು ಮುಂದುವರಿಸುತ್ತೇನೆ. ಚುನಾವಣೆಯಲ್ಲಿ ತಂಗಿಯ ಪರವಾಗಿ ನಾನು ಪ್ರಚಾರ ಮಾಡುವುದಿಲ್ಲ. ಯಾಕೆಂದರೆ, ಆಕೆಯೇ ಪರಿಶ್ರಮಪಡಬೇಕು. ನಾನು ಮಾತ್ರ ಎಲ್ಲ ರಾಜಕೀಯ ಪಕ್ಷಗಳಿಂದ ದೂರ ಉಳಿದುಕೊಳ್ಳುತ್ತೇನೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನು ಸೂದ್ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ತಂಗಿಯ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ಹುಟ್ಟೂರಾದ ಮೊಗಾ ಕ್ಷೇತ್ರದಿಂದ ಮಾಳವಿಕಾ ಸ್ಪರ್ಧೆಗೆ ಇಳಿದಿದ್ದಾರೆ. ಈ ಕಾರಣಕ್ಕೆ ಸೋಮವಾರ (ಜನವರಿ 24) ಸೋನು ಅವರು ಮೊಗಾದ ಮಂಗೇವಾಲ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿ ತಂಗಿ ಪರ ಪ್ರಚಾರ ಮಾಡಿದ್ದಾರೆ. ಈ ಪ್ರಚಾರದ ವೇಳೆ ತಂಗಿ ಮಾಡಿದ ಸಹಾಯಗಳ ಬಗ್ಗೆ ಸೋನು ಅವರು ಎತ್ತಿ ಹೇಳಿದರು. ಚುನಾವಣೆಯಲ್ಲಿ ಮಾಳವಿಕಾ ಗೆದ್ದರೆ ಮೊಗಾದಲ್ಲಿರುವ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಮಾಡುತ್ತಾರೆ ಎನ್ನುವ ಭರವಸೆಯನ್ನು ಅವರು ನೀಡಿದರು. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಸೋನು ಸೂದ್ ನಡೆಯನ್ನು ಟೀಕಿಸಿದ್ದಾರೆ.
ಇತ್ತೀಚೆಗೆ ಮಾಳವಿಕಾ ಸೂದ್ ಜತೆ ಸೇರಿ ಸೋನು ಸೂದ್ ಮೊಗಾದಲ್ಲಿರುವ 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್ಗಳನ್ನು ನೀಡಿದ್ದರು. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಲಿದೆ ಎಂದು ಅವರು ಹೇಳಿದ್ದರು. ಇದು ಕೂಡ ಚುನಾವಣಾ ದೃಷ್ಟಿಯಿಂದ ನೀಡಿರುವುದು ಎಂದು ಕೆಲವರು ಟೀಕಿಸುತ್ತಿದ್ದಾರೆ.
ಇದನ್ನು ಓದಿ: ಹುಟ್ಟೂರಿನ ಮೇಲಿನ ಪ್ರೀತಿ ಮೆರೆದ ಸೋನು ಸೂದ್; ಹೆಣ್ಣುಮಕ್ಕಳಿಗೆ ಸಾವಿರ ಸೈಕಲ್ ನೀಡಿದ ರಿಯಲ್ ಹೀರೋ
ಭರವಸೆ ಈಡೇರಿಸದ ಸೋನು ಸೂದ್ಗೆ ಹೆಚ್ಚಿತು ಸಂಕಷ್ಟ; ನಟನಿಗೆ ಎರಡನೇ ಬಾರಿಗೆ ನೋಟಿಸ್