ಇಂದು ತಂತ್ರಜ್ಞಾನ (Technology) ಮುಂದುವರಿದಿದೆ. ಅದೇ ರೀತಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಮೋಸ ಹೋಗಿ ಬಿಡುತ್ತೇವೆ. ಜನಸಾಮಾನ್ಯರ ಕಥೆ ಹಾಗಿರಲಿ, ಈಗ ಖ್ಯಾತ ನಟಿಯೇ (Heroine) ಈ ರೀತಿಯ ಮೋಸಕ್ಕೆ ಒಳಗಾಗಿದ್ದಾರೆ. ಒಂದು ಜಾಲದಲ್ಲಿ ಸಿಲುಕಿ ಒಂದಲ್ಲ, ಎರಡಲ್ಲ ಬರೋಬ್ಬರಿ 4 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಬ್ಯಾಂಕ್ನಲ್ಲಿ ಹಣ ಇಟ್ಟರೆ ಸಾಮಾನ್ಯವಾಗಿ ಶೇ.3 ಬಡ್ಡಿ ಸಿಗುತ್ತದೆ. ಇನ್ನು, ಎಫ್ಡಿ ಮಾಡಿದರೆ ಶೇ.7 ಬಡ್ಡಿ ಸಿಗುತ್ತದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತೀರಿ ಎಂದಾದರೆ ಸಾಕಷ್ಟು ಅಧ್ಯಯನ ಬೇಕು. ಅನೇಕರು ಒಂದೇ ಬಾರಿಗೆ ಹೆಚ್ಚು ರಿಟರ್ನ್ ಎಲ್ಲಿ ಬರುತ್ತದೆ ಎಂಬುದನ್ನು ನೋಡುತ್ತಿರುತ್ತಾರೆ. ಈಗ ಇದೇ ರೀತಿಯ ಆಸೆಗೆ ರಿಮಿ ಸೇನ್ ಬಿದ್ದಿದ್ದಾರೆ. ಅವರಿಗೆ ರೋಣಕ್ ಜಟಿನ್ ಎಂಬಾತ ಪರಿಚಯ ಆಗಿದ್ದ. ನಂತರ ಆತನೇ ಮೋಸ ಮಾಡಿ ಹೋಗಿದ್ದಾನೆ.
ಎಲ್ಇಡಿ ಬಲ್ಬ್ಗಳ ವ್ಯವಹಾರ ಮಾಡುವುದಾಗಿ ಆತ ಹೇಳಿಕೊಂಡಿದ್ದ. ಅಲ್ಲದೆ, ಈ ಉದ್ಯಮದ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಶೇ.40 ಲಾಭ ತೆಗೆದುಕೊಡುವುದಾಗಿ ಹೇಳಿದ್ದ. ಈ ಆಸೆಗೆ ಬಿದ್ದ ರಿಮಿ ಅವರು ಕಣ್ಮುಚ್ಚಿಕೊಂಡು 4.4 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆ ಬಳಿಕ ಆತ ನಾಪತ್ತೆ ಆಗಿದ್ದಾನೆ.
‘2019ರಲ್ಲಿ ಜಿಮ್ನಲ್ಲಿ ರೋಣಕ್ ನನಗೆ ಪರಿಚಯ ಆಗಿದ್ದ. ನಂತರ ನಾವಿಬ್ಬರೂ ಗೆಳೆಯರಾದೆವು. 4.4 ಕೋಟಿ ರೂಪಾಯಿ ಹಣವನ್ನು ನನ್ನಿಂದ ತೆಗೆದುಕೊಂಡ. ಲಾಭದ ಜತೆಗೆ ಹಣ ಹಿಂದಿರುಗಿಸಲು ಒಂದು ಗಡುವು ನೀಡಿದ್ದ. ಆದರೆ, ಈಗ ಹಣವೂ ಇಲ್ಲ, ಆತ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ರಿಮಿ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಚ್ಚರಿ ಎಂದರೆ ರೋಣಕ್ ಯಾವುದೇ ಉದ್ಯಮ ಹೊಂದಿರಲಿಲ್ಲ. ನಟಿಯಿಂದ ಹಣ ಕೀಳುವುದೊಂದೇ ಆತನ ಉದ್ದೇಶ ಆಗಿತ್ತು.
ರಿಮಿ ಅವರು 2000ನೇ ಇಸವಿಯಲ್ಲಿ ಬೆಂಗಾಲಿ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆದರು. ಹಿಂದಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ 9ರ ಸ್ಪರ್ಧಿಯಾಗಿ ಅವರು ದೊಡ್ಮನೆಗೆ ತೆರಳಿದ್ದರು. ‘ಧೂಮ್’, ‘ಧೂಮ್ 2’ ಸಿನಿಮಾದಲ್ಲಿ ಸ್ವೀಟಿ ದೀಕ್ಷಿತ್ ಆಗಿ ಅವರು ಖ್ಯಾತಿ ಗಳಿಸಿದ್ದರು.
ಇದನ್ನೂ ಓದಿ: ಏಪ್ರಿಲ್ 3ಕ್ಕಾಗಿ ಕಾದಿದ್ದಾರೆ ಕೃತಿ ಶೆಟ್ಟಿ; ಇದಕ್ಕಿದೆ ಮಹತ್ವದ ಕಾರಣ
ಕಲೆಕ್ಷನ್ ವಿಚಾರದಲ್ಲಿ ‘ಬಾಹುಬಲಿ’ ದಾಖಲೆಯನ್ನೇ ಮುರಿದ ‘ಆರ್ಆರ್ಆರ್’; ರಾಜಮೌಳಿಗೆ ರಾಜಮೌಳಿಯೇ ಸಾಟಿ