ಚೀನಾದಲ್ಲಿ ಆರು ಸಾವಿರ ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ ಶ್ರೀದೇವಿ ಸಿನಿಮಾ; ಇದಕ್ಕಿದೆ ಕಾರಣ
ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಬೋನಿ ಕಪೂರ್. ಆ ಸಂದರ್ಭದಲ್ಲಿ ಅವರು ಭಾರತದಲ್ಲಿ ಇದ್ದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ.
ನಟಿ ಶ್ರಿದೇವಿ (Sridevi) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಆದರೆ, ಅವರು ಅಕಾಲಿಕ ಮರಣ ಹೊಂದಿದರು. ಈಗ ಶ್ರೀದೇವಿ ಅವರನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಫೆಬ್ರವರಿ 24ರಂದು ಅವರ ಪುಣ್ಯತಿಥಿ. ಈ ಕಾರಣಕ್ಕೆ ಅವರ ನಟನೆಯ ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ (English Vinglish) ಚೀನಾದಲ್ಲಿ 600 ಸಾವಿರ ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ. ಗೌರಿ ಶಿಂದೆ ನಿರ್ದೇಶನದ ಈ ಚಿತ್ರ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿತ್ತು.
2018ರಲ್ಲಿ ಫೆಬ್ರವರಿ 20ರಂದು ಶ್ರೀದೇವಿ ಅವರು ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಮದುವೆಯಲ್ಲಿ ಪಾಲ್ಗೊಳ್ಳೋ ಕಾರಣಕ್ಕೆ ಅವರು ವಿದೇಶಕ್ಕೆ ತೆರಳಿದ್ದರು. ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಬೋನಿ ಕಪೂರ್. ಆ ಸಂದರ್ಭದಲ್ಲಿ ಅವರು ಭಾರತದಲ್ಲಿ ಇದ್ದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಹೋಟೆಲ್ ಬಾತ್ ಟಬ್ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು. ಇದು ಇಡೀ ಕುಟುಂಬಕ್ಕೆ ಆಘಾತ ತಂದಿತ್ತು. ಶ್ರೀದೇವಿಗೆ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಹೆಸರಿನ ಮಕ್ಕಳಿದ್ದಾರೆ. ಜಾನ್ವಿ ಕಪೂರ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಖುಷಿ ಕಪೂರ್ ಬಣ್ಣದ ಲೋಕಕ್ಕೆ ಬಂದಿಲ್ಲ. ಈಗ ಶ್ರೀದೇವಿ ಅವರ ಐದನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಚೀನಾದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ರಿಲೀಸ್ ಮಾಡಲಾಗುತ್ತಿದೆ.
ಚೀನಾದಲ್ಲಿ ಭಾರತದ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತವೆ. ಆಮಿರ್ ಖಾನ್ ಅಭಿನಯದ ಸಿನಿಮಾಗಳು ಚೀನಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದವು. ಈಗ ‘ಇಂಗ್ಲಿಷ್ ವಿಂಗ್ಲಿಷ್’ ಚೀನಾ ಭಾಷೆಗೆ ಡಬ್ ಆಗಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶ್ರೀದೇವಿ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.
ಸಿನಿಮಾ ಕಥೆ ಏನು?
ಶ್ರೀದೇವಿ ಅವರು ಈ ಚಿತ್ರದಲ್ಲಿ ಶಶಿ ಹೆಸರಿನ ಪಾತ್ರ ಮಾಡಿದ್ದಾರೆ. ಶಶಿ ಮದುವೆ ಆದ ನಂತರದಲ್ಲಿ ಮನೆ ನೋಡಿಕೊಂಡಿರುತ್ತಾಳೆ. ಮಕ್ಕಳು, ಗಂಡ ಅವರ ಪ್ರಪಂಚ. ಇಂಗ್ಲಿಷ್ ಬರುವುದಿಲ್ಲ ಎಂದು ಆಕೆಯನ್ನು ಕುಟುಂಬದವರೇ ಹಂಗಿಸುತ್ತಾರೆ. ಈ ಕಾರಣಕ್ಕೆ ಆಕೆ ಇಂಗ್ಲಿಷ್ ಕಲಿಯುವ ಪ್ರಯತ್ನ ಮಾಡುತ್ತಾಳೆ. ನಂತರ ಇಂಗ್ಲಿಷ್ ಕಲಿತು ಮಾತನಾಡುತ್ತಾಳೆ. ಸಿನಿಮಾ ಕೊನೆಯಲ್ಲಿ ಆಕೆ ಅರ್ಥಪೂರ್ಣವಾಗಿ ಇಂಗ್ಲಿಷ್ ಮಾತನಾಡುತ್ತಾಳೆ. ಎಲ್ಲರೂ ಅವರ ಮಾತು ಕೇಳಿ ಚಪ್ಪಾಳೆ ತಟ್ಟುತ್ತಾರೆ. ಈ ಚಿತ್ರದ ಸಂದೇಶ ಕೇಳಿ ಎಲ್ಲರೂ ಮೆಚ್ಚಿಕೊಂಡಿದ್ದರು.
ಶ್ರೀಲಕ್ಷ್ಮಿ ಎಚ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ