ನಟಿ ಅದಾ ಶರ್ಮಾ (Adah Sharma) ಅವರು ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2023ರಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಆದರೆ ಈಗ ಅದೇ ತಂಡದ ಜೊತೆ ಸೇರಿ ಮಾಡಿರುವ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ (Bastar The Naxal Story) ಸಿನಿಮಾ ಹೀನಾಯವಾಗಿ ಸೋತಿದೆ. ಬಿಡುಗಡೆಯಾಗಿ 4 ದಿನಗಳು ಕಳೆದಿದ್ದರೂ ಈ ಚಿತ್ರ ಗಳಿಸಿರುವುದು ಕೇವಲ 2 ಕೋಟಿ ರೂಪಾಯಿ ಪಾತ್ರ. ಇದರಿಂದ ಚಿತ್ರತಂಡಕ್ಕೆ ತೀವ್ರ ನಿರಾಸೆ ಆಗಿದೆ. ಟ್ರೇಲರ್ ನಿರೀಕ್ಷೆ ಮೂಡಿಸಿದ್ದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಕಲೆಕ್ಷನ್ (Box Office Collection) ಮಾಡಲು ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಚಿತ್ರ ವಿಫಲವಾಗಿದೆ.
ನೈಜ ಘಟನೆಗಳನ್ನು ಆಧರಿಸಿ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಸಿನಿಮಾ ಮೂಡಿಬಂದಿದೆ. ಛತ್ತಿಸ್ಗಡದಲ್ಲಿ ನಡೆದ ನಕ್ಸಲ್ ಹೋರಾಟದ ವಿವರವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಭಾರತೀಯ ಸೈನಿಕರನ್ನು ನಕ್ಸಲರು ಹತ್ಯೆ ಮಾಡಿದ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಿದೆ. ಕೆಲವರು ಈ ಸಿನಿಮಾಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಖ್ಯಾತಿಯ ಸುದೀಪ್ತೋ ಸೇನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಅದಾ ಶರ್ಮಾ ಜೊತೆ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ 242 ಕೋಟಿ ರೂಪಾಯಿ ಗಳಿಸಿತ್ತು. ಆದರೆ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಸಿನಿಮಾದ ಕಲೆಕ್ಷನ್ ಕಳಪೆ ಆಗಿದೆ.
ಇದನ್ನೂ ಓದಿ: ‘ಬಸ್ತರ್’ ಸಿನಿಮಾ ಮೂಲಕ ವಿವಾದ ಮಾಡಿಕೊಂಡ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ
ಮಾರ್ಚ್ 15ರಂದು ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರಕ್ಕೆ 40 ಲಕ್ಷ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 75 ಲಕ್ಷ ರೂಪಾಯಿ ಗಳಿಸಿತು. ಮೂರನೇ ದಿನ 85 ಲಕ್ಷ ರೂಪಾಯಿ ಹಾಗೂ 4ನೇ ದಿನ 24 ಲಕ್ಷ ರೂಪಾಯಿ ಗಳಿಕೆ ಮಾಡಿತು. ನಾಲ್ಕು ದಿನಕ್ಕೆ ಈ ಸಿನಿಮಾ ಒಟ್ಟು 2.24 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಷ್ಟರಲ್ಲಿ ಸುಸ್ತು ಹೊಡೆದಿದೆ. 2023ರಲ್ಲಿ ‘ದಿ ಕೇರಳ ಸ್ಟೋರಿ’ ಮೂಲಕ ಭಾರಿ ಯಶಸ್ಸು ಕಂಡಿದ್ದ ನಟಿ ಅದಾ ಶರ್ಮಾ, ನಿರ್ದೇಶಕ ಸುದೀಪ್ತೋ ಸೇನ್, ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ಈಗ ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಚಿತ್ರದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.