ಬೇಷರತ್ ಕ್ಷಮೆ ಯಾಚಿಸಿದ ಆದಿಪುರುಷ್ ಸಂಭಾಷಣೆಕಾರ ಮನೋಜ್

Adipurush: ಆದಿಪುರುಷ್ ಸಿನಿಮಾ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೆ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಪ್ರೇಕ್ಷಕರಿಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ಬೇಷರತ್ ಕ್ಷಮೆ ಯಾಚಿಸಿದ ಆದಿಪುರುಷ್ ಸಂಭಾಷಣೆಕಾರ ಮನೋಜ್
ಆದಿಪುರುಷ್

Updated on: Jul 08, 2023 | 3:35 PM

ಬಹಳ ನಿರೀಕ್ಷೆ ಮೂಡಿಸಿದ್ದ ಆದಿಪುರುಷ್ (Adipurush) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ (Box Office) ಮಕಾಡೆ ಮಲಗಿದೆ. ಗಳಿಕೆಯಲ್ಲಿ ವಿಫಲವಾಗಿರುವುದು ಮಾತ್ರವೇ ಅಲ್ಲದೆ ಪ್ರೇಕ್ಷಕರ ನಿಂದನೆಗೂ ಕಾರಣವಾಗಿದೆ. ಆದಿಪುರುಷ್ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಹಲವರು ಆರೋಪಿಸಿದ್ದು ಸಿನಿಮಾದ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಅದರಲ್ಲಿಯೂ ಸಿನಿಮಾದ ಕೆಲವು ಸಂಭಾಷಣೆಗಳ ವಿರುದ್ಧ ತೀವ್ರ ಆಕ್ಷೇಪ ಸಹ ವ್ಯಕ್ತವಾಗಿದೆ. ಇದೀಗ ಆದಿಪುರುಷ್ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ (Manoj Muntashir) ಪ್ರೇಕ್ಷಕರ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

”ಆದಿಪುರುಷನಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಜೋಡಿಸಿದ ಕೈಗಳಿಂದ, ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಭಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ” ಎಂದು ಮನೋಜ್ ಮುಂತಶೀರ್ ಶುಕ್ಲಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆದಿಪುರುಷ್ ಸಿನಿಮಾದಲ್ಲಿ ಹನುಮಂತ ಆಡುವ ಸಂಭಾಷಣೆ, ರಾವಣ ಆಡುವ ಸಂಭಾಷಣೆಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಗ್ರಾಂಥಿಕವಲ್ಲದ ಠಪೋರಿ ಭಾಷೆಯನ್ನು ಹನುಮಂತ ಪಾತ್ರಧಾರಿಯಿಂದ ಆಡಿಸಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ರಾವಣನ ಪಾತ್ರಧಾರಿಯ ಕೆಲವು ಸಂಭಾಷಣೆಗಳ ಬಗ್ಗೆ ಹಾಗೂ ಮೇಘನಾಥನ ಕೆಲವು ಸಂಭಾಷಣೆಗಳ ಬಗ್ಗೆಯೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು.

ಇದನ್ನೂ ಓದಿ:HanuMan Movie: ‘ಆದಿಪುರುಷ್’ ಸೋತ ಬಳಿಕ ‘ಹನುಮಾನ್’ ಚಿತ್ರದ ರಿಲೀಸ್ ದಿನಾಂಕ ಘೋಷಣೆ; ನಡೆಯಲಿದೆ ಭರ್ಜರಿ ಕ್ಲ್ಯಾಶ್

ಮನೋಜ್ ಮುಂತಶೀರ್ ಶುಕ್ಲಾ ಆದಿಪುರುಷ್ ಸಿನಿಮಾಕ್ಕೆ ಸಂಭಾಷಣೆ ಬರೆದಿರುವ ಜೊತೆಗೆ ಕೆಲವು ಹಾಡುಗಳಿಗೆ ಸಾಹಿತ್ಯವನ್ನೂ ಒದಗಿಸಿದ್ದರು. ಆದಿಪುರುಷ್ ಸಿನಿಮಾದ ಸಂಭಾಷಣೆಗಳಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಮನೋಜ್​ರನ್ನು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದರಿಂದಾಗಿ ಮನೋಜ್​ಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದರು.

ಆದಿಪುರುಷ್ ಸಿನಿಮಾವು ರಾಮಾಯಣದ ಕತೆ ಆಧರಿಸಿದ್ದಾಗಿದ್ದು ಪ್ರಭಾಸ್ ರಾಮನಾಗಿ, ಸೀತೆಯಾಗಿ ಕೃತಿ ಸೆನನ್, ರಾವಣನಾಗಿ ಸೈಫ್ ಅಲಿ ಖಾನ್, ಹನುಮಂತನಾಗಿ ದೇವದತ್ತ ನಾಗರೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದರು. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು, ಟಿ-ಸೀರೀಸ್​ನ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದರು. ಭಾರಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾಕ್ಕೆ ಮೊದಲ ದಿನದಿಂದಲೂ ಋಣಾತ್ಮಕ ವಿಮರ್ಶೆಗಳೇ ಬಂದವು. ಅತಿಯಾದ ಹಾಗೂ ಕಳಪೆ ಸಿಜಿಐ ಬಳಕೆ, ರಾಮಾಯಣದ ಪಾತ್ರಗಳ ವ್ಯಕ್ತಿತ್ವ, ವರ್ತನೆ ತಿರುಚಿದ್ದು, ರಾಮಾಯಣದ ಕೆಲವು ಅಂಶಗಳನ್ನು ಬಿಟ್ಟಿದ್ದು, ಮರ್ಯಾದಾ ಪುರುಷೋತ್ತಮ ರಾಮನನ್ನು ಮಾಸ್ ಅವತಾರದಲ್ಲಿ ತೋರಿಸಿದ್ದು ಇನ್ನೂ ಹಲವು ವಿಷಯಗಳ ಬಗ್ಗೆ ಟೀಕೆಯನ್ನು ಸಿನಿಮಾ ಎದುರಿಸಿತು.

ಸಿನಿಮಾದ ವಿರುದ್ಧ ಕೆಲವು ಹಿಂದೂಪರ ಸಂಘಟನೆಗಳು, ಶ್ರೀರಾಮ ಭಕ್ತರು ಇನ್ನಿತರರು ದೂರುಗಳನ್ನು ದಾಖಲಿಸಿ ಸಿನಿಮಾದ ಬ್ಯಾನ್​ಗೆ ಒತ್ತಾಯಿಸಿದ್ದರು. ಅಲಹಾಬಾದ್ ಹೈಕೋರ್ಟ್ ಸಹ ಆದಿಪುರುಷ್ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ