ಗ್ಯಾಂಗ್ಸ್ಟರ್ ಸಿನಿಮಾಕ್ಕೆ ಗರ್ಲ್ಫ್ರೆಂಡ್ ಹೆಸರಿಟ್ಟು ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ಆರ್ಜಿವಿ: ಯಾವುದು ಆ ಸಿನಿಮಾ
Ram Gopal Varma: ರೌಡಿಸಂ ಕತೆಯ ಸಿನಿಮಾಕ್ಕೆ ಹಳೆಯ ಗರ್ಲ್ಫ್ರೆಂಡ್ ಹೆಸರಿಟ್ಟಿದ್ದ ರಾಮ್ ಗೋಪಾಲ್ ವರ್ಮಾ, ಸೂಪರ್-ಡೂಪರ್ ಹಿಟ್ ಆದ ಆ ಸಿನಿಮಾ ಯಾವುದು?
ಕಳೆದ ಕೆಲ ವರ್ಷಗಳಿಂದ ಸಿನಿಮಾ ಲೋಕಕ್ಕೆ ಪರಿಚಿತವಾದವರಿಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಮಹಾನ್ ನಿರ್ದೇಶಕ ಎಂದರೆ ನಕ್ಕು ಬಿಡುತ್ತಾರೆ ಆದರೆ ದಶಕಗಳಿಂದ ಸಿನಿಮಾ ಹುಚ್ಚು ಹಚ್ಚಿಸಿಕೊಂಡವರಿಗೆ ರಾಮ್ ಗೋಪಾಲ್ ವರ್ಮಾ ಶಕ್ತಿಯ ಅರಿವಿದೆ. ಅವರ ಸಿನಿಮಾಗಳ ಬಗ್ಗೆ ಅಪಾರ ಪ್ರೇಮ, ಗೌರವಗಳಿವೆ. ಈಗ ತಮ್ಮ ಪ್ರತಿಭೆ ತಾವೇ ಮರೆತು ಕೀಳು ಅಭಿರುಚಿಯ ಸಿನಿಮಾ ನಿರ್ಮಿಸಿ ಸುಖ ಕಾಣುತ್ತಿರುವ ರಾಮ್ ಗೋಪಾಲ್ ವರ್ಮಾ ಹಿಂದೊಂದು ಸಮಯದಲ್ಲಿ ಭಾರತ ಚಿತ್ರರಂಗದಲ್ಲಿ (Indian Cinema) ಸಂಚಲನ ಮೂಡಿಸಿದ್ದ ನಿರ್ದೇಶಕ. ಸೂಪರ್ ಹಿಟ್ ಸಿನಿಮಾ ಮಾಡುವುದು ಅವರ ಎಡಗೈನ ಆಟವಾಗಿತ್ತು. ಒಂದು ಸಿನಿಮಾಕ್ಕಂತೂ ತಮ್ಮ ಹಳೆ ಗರ್ಲ್ಫ್ರೆಂಡ್ (Girl Friend) ಹೆಸರಿಟ್ಟು ಸೂಪರ್-ಡೂಪರ್ ಹಿಟ್ ಮಾಡಿಸಿದ್ದರು.
ವರ್ಮಾ ನಿರ್ದೇಶಿಸಿರುವ ಹಲವು ಸಿನಿಮಾಗಳು ಇಂದು ಕ್ಲಾಸಿಕ್ ಎಂದು ಕರೆಸಿಕೊಳ್ಳುತ್ತವೆ. ಸಿನಿಮಾ ಶಾಲೆಗಳಲ್ಲಿ ಪಠ್ಯಗಳಾಗಿ ಚರ್ಚೆಯಾಗುತ್ತವೆ. ಅಂಥಹುದೇ ಒಂದು ಸಿನಿಮಾ ಸತ್ಯ. ಮನೋಜ್ ಭಾಜಪೇಯಿ, ಸೌರಭ್ ಶುಕ್ಲಾ, ಮಕರಂದ್ ದೇಶಪಾಂಡೆ ಅಂಥಹಾ ಅದ್ಭುತ ನಟರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಬಾಲಿವುಡ್ಗೆ ಹೇಳಿಕೊಟ್ಟ ಆ ಸಿನಿಮಾ ಹಿಂದಿಯ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ಬಿಡುಗಡೆ ಆಗಿ 25 ವರ್ಷವಾದ ಬೆನ್ನಲ್ಲೆ ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ ಆ ಸಿನಿಮಾದ ಹೆಸರಿನ ಹಿಂದಿನ ವಿಶೇಷಣ ಏನೆಂಬುದನ್ನು ಹೇಳಿದ್ದಾರೆ. ಮಾತ್ರವಲ್ಲದೆ ಆ ಸಿನಿಮಾದ ಕತೆ ಹೊಳೆದಿದ್ದು ಹೇಗೆ ಎಂಬುದನ್ನೂ ಸಹ ಹೇಳಿದ್ದಾರೆ.
ಇದನ್ನೂ ಓದಿ:RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?
ರಾಮ್ ಗೋಪಾಲ್ ವರ್ಮಾ ಕಾಲೇಜಿನಲ್ಲಿದ್ದಾಗ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದರಂತೆ ಆ ಹುಡುಗಿಯ ಹೆಸರು ಸತ್ಯ. ಆಕೆಯ ನೆನಪಿಗಾಗಿಯೇ ಸಿನಿಮಾಕ್ಕೆ ಸತ್ಯ ಎಂದು ಹೆಸರಿಟ್ಟರಂತೆ. ಸಿನಿಮಾದಲ್ಲಿ ನಾಯಕನ ಹೆಸರು ಸತ್ಯ ಆ ಪಾತ್ರವನ್ನು ಜೆಡಿ ಚಕ್ರವರ್ತಿ ನಟಿಸಿದ್ದಾರೆ. ನನಗೆ ಸತ್ಯ ಎಂದು ಹೆಸರಿಡುವ ಬೇರೆ ಏನೂ ಕಾರಣ ಇರಲಿಲ್ಲ, ಅವಳಿಗಾಗಿ ಆ ಹೆಸರು ಇಟ್ಟೆ. ಚಕ್ರವರ್ತಿ ಪಾತ್ರಕ್ಕೆ ಸತ್ಯ ಎಂದು ಹೆಸರಿಟ್ಟು ನಾಯಕನ ಹೆಸರಿನ ಸಿನಿಮಾ ಎಂದಾಗಿಸಿದೆ” ಎಂದಿದ್ದಾರೆ ವರ್ಮಾ. ಯೋಚಿಸಿ, ಸತ್ಯ ಸಿನಿಮಾ ಅಪ್ಪಟ ಭೂಗತ ಲೋಕದ ಕತೆಯುಳ್ಳ ಸಿನಿಮಾ ಆದರೆ ಇಟ್ಟಿದ್ದು ಪ್ರೇಯಸಿಯ ಹೆಸರು. ಸಂದರ್ಶನದಲ್ಲಿ ಹಾಜರಿದ್ದ ನಟ ಸೌರಭ್ ಶುಕ್ಲ, ಹಳೆ ಪ್ರೇಯಸಿ ಮೇಲೆ ದ್ವೇಷ ತೀರಿಸಿಕೊಳ್ಳಲು ಭೂಗತ ಲೋಕದ ಸಿನಿಮಾಕ್ಕೆ ಅವಳ ಹೆಸರಿಟ್ಟಿದ್ದಾರೆ ಎಂದು ವರ್ಮಾರ ಕಾಲು ಎಳೆದು ತಮಾಷೆ ಮಾಡಿದರು.
ಇನ್ನು ಸತ್ಯ ಸಿನಿಮಾದ ಕತೆ ಹೊಳೆದ ಬಗ್ಗೆ ಮಾತನಾಡಿದ ವರ್ಮಾ, ಆಗ ದಾವೂದ್ ಇಬ್ರಾಹಿಂ ಬಾಲಿವುಡ್ ನಟಿ ಮಂದಾಕಿನಿಯನ್ನು ಪ್ರೀತಿಸುತ್ತಿದ್ದ. ಮಂದಾಕಿನಿಯ ಪರ್ಸನಲ್ ಅಸಿಸ್ಟೆಂಟ್ ವರ್ಮಾಗೆ ಪರಿಚಯವಿದ್ದರಂತೆ. ಆತ ದಾವೂದ್ನ ಸಹಚರರನ್ನು ಭೇಟಿ ಆಗುತ್ತಿರುತ್ತಿದ್ದನಂತೆ ಮಂದಾಕಿನಿಯ ಕಾರಣಕ್ಕೆ. ಆತ ಅವರ ಬಗ್ಗೆ ಹೇಳುತ್ತಿದ್ದನಂತೆ. ಆಗ ವರ್ಮಾಗೆ ಅನಿಸಿದೆ, ಸಿನಿಮಾಗಳಲ್ಲಿಯೇ ಆಗಲಿ ನಿಜ ಜೀವನದಲ್ಲಿಯೇ ಆಗಲಿ ಖಳ, ಅಥವಾ ಡಾನ್, ಭೂಗತ ದೊರೆ ಸತ್ತಾಗಲಷ್ಟೆ ಸುದ್ದಿ ಆಗುತ್ತಾನೆ ಅವರು ಬದುಕಿದ್ದಾಗ ಅವರ ಜೀವನ ಹೇಗಿರುತ್ತದೆ ಎಂಬುದು ನಮಗೆ ಗೊತ್ತೆ ಆಗುವುದಿಲ್ಲ. ಹಾಗಾಗಿ ಅವರು ಬದುಕಿದ್ದಾಗ ಅವರ ಜೀವನ, ಕುಟುಂಬ, ಪರಸ್ಪರ ಪ್ರೇಮ ಹೇಗಿರುತ್ತದೆ ಎಂದು ಯೋಚಿಸಿ ಅದೇ ಯೋಚನೆ ಕತೆಯಾಗಿ ತಿರುಗಿ ಸತ್ಯ ಸಿನಿಮಾ ಮಾಡಿದರಂತೆ. ಆ ಸಿನಿಮಾ ಈಗ ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ