ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಚಿತ್ರ 2023ರ ಜನವರಿಯಲ್ಲಿ ರಿಲೀಸ್ ಆಗುವುದರಲ್ಲಿತ್ತು. ಆದರೆ ಈಗ ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಏನೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಸಿನಿಮಾದಲ್ಲಿ ಕಳಪೆ ಗ್ರಾಫಿಕ್ಸ್ ಇದೆ ಎಂದು ಸಿನಿಪ್ರಿಯರು ಕಟು ಟೀಕೆ ಮಾಡಿದ್ದಾರೆ. ಟೀಸರ್ ಬಿಡುಗಡೆ ಆದ ನಂತರ ಈ ಚಿತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಅದರಲ್ಲೂ ರಾವಣನ ಪಾತ್ರ ನೋಡಿದ ಬಹುತೇಕರು ಅಸಮಾಧಾನ ಹೊರಹಾಕಿದ್ದಾರೆ. ಸೈಫ್ ಅಲಿ ಖಾನ್ (Saif Ali Khan) ನಿರ್ವಹಿಸಿರುವ ರಾವಣನ ಪಾತ್ರದ ಗೆಟಪ್ ಬಗ್ಗೆ ತುಂಬ ಟೀಕೆ ವ್ಯಕ್ತವಾಗಿದೆ. ಅದಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ‘ಆದಿಪುರುಷ್’ (Adipurush) ತಂಡ ನಿರ್ಧರಿಸಿದೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಟೀಸರ್ ನೋಡಿ ಬಹುತೇಕರಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಆದಿಪುರುಷ್’ ಚಿತ್ರದಲ್ಲೀಗ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ರಾವಣನ ಗೆಟಪ್ ಬದಲಿಸಲು ಸರ್ಕಸ್ ನಡೆಯುತ್ತಿದೆ. ಟೀಸರ್ನಲ್ಲಿ ರಾವಣನ ಪಾತ್ರಕ್ಕೆ ಉದ್ದ ಗಡ್ಡ ಇತ್ತು. ಅದು ಅಲ್ಲಾವುದ್ದೀನ್ ಖಿಲ್ಜಿಯ ಗಡ್ಡದ ರೀತಿ ಕಾಣುತ್ತಿದೆ ಎಂದು ಟ್ರೋಲ್ ಮಾಡಲಾಗಿತ್ತು. ಆ ಗಡ್ಡಕ್ಕೀಗ ಮುಕ್ತಿ ಕೊಡಿಸಲು ನಿರ್ಧರಿಸಲಾಗಿದೆ. ಹಾಗಂತ ಸೈಫ್ ಅಲಿ ಖಾನ್ ಅವರು ಹೊಸದಾಗಿ ಶೂಟಿಂಗ್ನಲ್ಲಿ ಭಾಗಿ ಆಗುವುದಿಲ್ಲ. ಬದಲಿಗೆ, ಗ್ರಾಫಿಕ್ಸ್ ಮೂಲಕ ಅವರ ಗಡ್ಡಕ್ಕೆ ಕ್ಲೀನ್ ಶೇವ್ ಮಾಡಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆಂಜನೇಯ ಮತ್ತು ವಾನರ ಸೇನೆಯ ಲುಕ್ ಕೂಡ ಬದಲಾಗುವ ಸಂಭವ ಇದೆ. ಇದಕ್ಕೆಲ್ಲ ಗ್ರಾಫಿಕ್ಸ್ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಪ್ರೇಕ್ಷಕರಿಗೆ ಈ ಚಿತ್ರವನ್ನು ಉತ್ತಮವಾಗಿ ಕಟ್ಟಿಕೊಡಬೇಕು ಎಂಬ ಕಾರಣಕ್ಕಾಗಿ ನಿರ್ದೇಶಕ ಓಂ ರಾವತ್ ಅವರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದ್ದರ ಬಗ್ಗೆ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು.
‘ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್’ ಚಿತ್ರ ಜೂನ್ 16ರಂದು ರಿಲೀಸ್ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ ಎಂದು ಓಂ ರಾವತ್ ಪೋಸ್ಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.