ಪ್ರಭಾಸ್ ಸಿನಿಮಾಗಳೆಂದರೆ ಅದ್ದೂರಿತನ ಇರಲೇಬೇಕು. ಅದೇ ರೀತಿ, ಗುಣಮಟ್ಟವನ್ನು ಕೂಡ ಪ್ರೇಕ್ಷಕರು ಬಯಸುತ್ತಾರೆ. ‘ಬಾಹುಬಲಿ’ ನಂತರ ಪ್ರಭಾಸ್ ಪಡೆದಿರುವ ಇಮೇಜ್ ಅಂಥದ್ದು. ಅವರ ಪ್ರತಿ ಸಿನಿಮಾದ ಮೇಲೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ದೊಡ್ಡ ಕ್ಯಾನ್ವಾಸ್ನಲ್ಲಿ ನಿರ್ಮಾಣ ಆಗುತ್ತಿರುವ ‘ಆದಿಪುರುಷ್’ ಸಿನಿಮಾ ಕೂಡ ಈ ಮಾತಿಗೆ ಹೊರತಾಗಿಲ್ಲ. ಈ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ಅವರು ಬಂಡವಾಳ ಹೂಡುತ್ತಿದ್ದಾರೆ. ಹಾಗಿದ್ದರೂ ಕೂಡ ಕಳಪೆ ವಿಎಫ್ಎಕ್ಸ್ ಇದೆ ಎಂಬ ಕಾರಣಕ್ಕೆ ನೆಟ್ಟಿಗರು ‘ಆದಿಪುರುಷ್’ ಚಿತ್ರದ ಟ್ರೇಲರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ವಿಎಫ್ಎಕ್ಸ್ ಕಂಪನಿಯಾದ ‘ಎನ್ವೈ ವಿಎಫ್ಎಕ್ಸ್ವಾಲಾ’ ಕಡೆಯಿಂದ ಒಂದು ಸ್ಪಷ್ಟನೆ ನೀಡಲಾಗಿದೆ.
ಕಳಪೆ ಗ್ರಾಫಿಕ್ಸ್ ವಿಚಾರಕ್ಕೆ ‘ಆದಿಪುರುಷ್’ ಚಿತ್ರದ ಟೀಸರ್ ಭಾರಿ ಟೀಕೆಗೆ ಒಳಗಾದ ಬಳಿಕ ಅನೇಕ ಮಾಧ್ಯಮದವರು ‘ಎನ್ವೈ ವಿಎಫ್ಎಕ್ಸ್ವಾಲಾ’ ಸಂಸ್ಥೆಗೆ ಕರೆ ಮಾಡಿ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದ್ದಾರೆ. ಹಾಗಾಗಿ ಟ್ವಿಟರ್ ಮೂಲಕವೇ ಬಹಿರಂಗವಾಗಿ ಸ್ಪಷ್ಟನೆ ನೀಡಿದೆ ಈ ಸಂಸ್ಥೆ. ‘ಆದಿಪುರುಷ್’ ಚಿತ್ರಕ್ಕೆ ತಾವು ವಿಎಫ್ಎಕ್ಸ್ ಕೆಲಸ ಮಾಡಿಲ್ಲ ಎಂದು ಈ ಕಂಪನಿ ಹೇಳಿಕೊಂಡಿದೆ.
ಈ ಹಿಂದೆ ‘ಎನ್ವೈ ವಿಎಫ್ಎಕ್ಸ್ವಾಲಾ’ ಸಂಸ್ಥೆಯ ಸಹ-ಸಂಸ್ಥಾಪಕ ಪ್ರಸಾದ್ ಸುತಾರ್ ಅವರು ‘ಆದಿಪುರುಷ್’ ಚಿತ್ರದ ಅನೇಕ ಪೋಸ್ಟರ್ಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಇದೇ ಕಂಪನಿ ಕಡೆಯಿಂದ ಈಗ ಈ ರೀತಿ ಸ್ಪಷ್ಟನೆ ಸಿಕ್ಕಿರುವುದು ಗೊಂದಲಕ್ಕೆ ಕಾರಣ ಆಗಿದೆ. ಈ ಕುರಿತು ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಅವರು ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ಸೀತೆಯಾಗಿ ಕೃತಿ ಸನೋನ್ ನಟಿಸುತ್ತಿದ್ದಾರೆ. ರಾವಣನ ಪಾತ್ರ ಅಲ್ಲಾವುದ್ದೀನ್ ಖಿಲ್ಜಿ ರೀತಿ ಇದೆ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ ದೃಶ್ಯಗಳ ರೀತಿಯೇ ‘ಆದಿಪುರುಷ್’ ಟೀಸರ್ನಲ್ಲಿ ಕೆಲವು ಶಾಟ್ಸ್ ಇವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
‘ADIPURUSH’ CG/SPECIAL EFFECTS: NY VFXWALA ISSUES CLARIFICATION… OFFICIAL STATEMENT…#Adipurush #NYVFXwala pic.twitter.com/pZlPqENUIR
— taran adarsh (@taran_adarsh) October 3, 2022
ಅಕ್ಟೋಬರ್ 2ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ‘ಆದಿಪುರುಷ್’ ಚಿತ್ರದ ಟೀಸರ್ ರಿಲೀಸ್ ಮಾಡಲಾಯ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ಚಿತ್ರತಂಡ ನಿರೀಕ್ಷಿಸಿತ್ತು. ಆದರೆ ಜನರು ಬಗೆಬಗೆಯಲ್ಲಿ ಟೀಕೆ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ತಲೆ ಬಿಸಿ ಶುರುವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.