ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಸುಮಾರು 3 ದಶಕಗಳಿಂದ ಬಣ್ಣದ ಲೋಕದಲ್ಲಿದ್ದಾರೆ. ಅವರು ನಟನೆ ಮೂಲಕ, ಸೌಂದರ್ಯದ ಮೂಲಕ ಪ್ರಪಂಚದಾದ್ಯಂತ ಇರುವ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಐಶ್ವರ್ಯಾ ರೈ ಅವರು 1994ರಲ್ಲಿ ‘ವಿಶ್ವ ಸುಂದರಿ’ (Miss World) ಪಟ್ಟವನ್ನು ಪಡೆದುಕೊಂಡರು. ಅಂದಿನಿಂದ ಐಶ್ವರ್ಯಾ (Aishwarya Rai) ಹಿಂತಿರುಗಿ ನೋಡಲೇ ಇಲ್ಲ. ಐಶ್ವರ್ಯಾ ಇಂದು (ನವೆಂಬರ್ 1) 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿಶ್ವ ಸುಂದರಿ ಆದಾಗ ಅವರ ವಯಸ್ಸು ಕೇವಲ 21. ಕೇವಲ ಸೌಂದರ್ಯದ ಮೇಲೆ ವಿಶ್ವ ಸುಂದರಿ ಪಟ್ಟ ನೀಡುವುದಿಲ್ಲ. ಅಲ್ಲಿ ಕೇಳಿದ ಪ್ರಶ್ನೆಗೆ ಅವರು ಯಾವ ರೀತಿ ಉತ್ತರಿಸಿದರು ಎಂಬುದು ಕೂಡ ಮುಖ್ಯವಾಗುತ್ತದೆ.
ಸ್ಪರ್ಧೆಯ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ‘ಮಿಸ್ ವರ್ಲ್ಡ್ ಆದವರು ಮೈಗೂಡಿಸಿಕೊಳ್ಳಬೇಕಾದ ಗುಣಗಳು ಯಾವವು’ ಎಂದು ಐಶ್ವರ್ಯಾ ಅವರನ್ನು ಕೇಳಲಾಯಿತು. ಅವರು ಈ ಪ್ರಶ್ನೆಗೆ ಸರಳವಾದ ಮತ್ತು ಆಳವಾದ ಉತ್ತರವನ್ನು ನೀಡಿದರು ಮತ್ತು ಎಲ್ಲರ ಮನ ಗೆದ್ದರು.
ಇದನ್ನೂ ಓದಿ: ಐಶ್ವರ್ಯ ರೈಯಂತೆ ಕಾಣುವ ಹಾಗೂ ಈ ವಿಶ್ವ ಸುಂದರಿಯನ್ನು ಅನುಕರಿಸುವ ಸ್ತ್ರೀಯೊಬ್ಬರು ಪಾಕಿಸ್ತಾನದಲ್ಲಿದ್ದಾರೆ!
‘ನಾವು ನೋಡಿದ ಎಲ್ಲ ವಿಶ್ವ ಸುಂದರಿಯರಿಗೂ ಸಹಾನುಭೂತಿ ಇತ್ತು. ದೊಡ್ಡವರಿಗೆ ಮಾತ್ರವಲ್ಲದೆ ಏನೂ ಇಲ್ಲದವರಿಗೂ ಸಹಾನುಭೂತಿ ತೋರಿದ್ದರು. ರಾಷ್ಟ್ರೀಯತೆ ಮತ್ತು ಬಣ್ಣವನ್ನು ಮೀರಿ ನೋಡುವ ಜನರನ್ನು ನಾವು ನೋಡಿದ್ದೇವೆ. ನಾವು ಅವುಗಳನ್ನು ಮೀರಿ ಎಲ್ಲ ವಿಚಾರಗಳನ್ನು ನೋಡಬೇಕು. ಆಗ ಮಾತ್ರ ನಿಜವಾದ ವಿಶ್ವ ಸುಂದರಿ ನಿಜವಾದ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ’ ಎಂದಿದ್ದರು ಐಶ್ವರ್ಯಾ ರೈ.
ಐಶ್ವರ್ಯಾ ರೈ ಬಚ್ಚನ್ 1973ರ ನವೆಂಬರ್ 1ರಂದು ಮಂಗಳೂರಿನಲ್ಲಿ ಜನಿಸಿದರು. ಆ ಬಳಿಕ ಅವರು ಕುಟುಂಬದ ಜೊತೆ ಮುಂಬೈಗೆ ಶಿಫ್ಟ್ ಆದರು. ಅವರು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳಿದ್ದಾಳೆ.
ಇದನ್ನೂ ಓದಿ: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಾಣಿಯಂತೆ ಮಿಂಚಿದ ವಿಶ್ವ ಸುಂದರಿ
ಐಶ್ವರ್ಯಾ ರೈ ಅವರು 1994ರಲ್ಲಿ ವಿಶ್ವ ಸುಂದರಿ ಆದರು. ಆ ಬಳಿಕ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಬಂದವು. ಆದರೆ, ಅವರು ಆತುರಪಟ್ಟು ಸಿನಿಮಾ ಮಾಡಲಿಲ್ಲ. ಅವರು ಸ್ವಲ್ಪ ಸಮಯ ತೆಗೆದುಕೊಂಡರು. 1997ರಲ್ಲಿ ಅವರ ನಟನೆಯ ಮೊದಲ ಸಿನಿಮಾ ರಿಲೀಸ್ ಆಯಿತು. ‘ಇರುವರ್’ ಅವರ ನಟನೆಯ ಮೊದಲ ಚಿತ್ರ. ಆ ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಮದುವೆ ಬಳಿಕ ಸಿನಿಮಾ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಿದ್ದಾರೆ. ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್ 2’ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.