ಬಾಲಿವುಡ್ನಲ್ಲಿ ಅಜಯ್ ದೇವಗನ್ (Ajay Devgn) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ದಕ್ಷಿಣ ಭಾರತದ ಜೊತೆಯೂ ಅವರಿಗೆ ಉತ್ತಮ ನಂಟು ಇದೆ. ಅಜಯ್ ದೇವಗನ್ ನಟಿಸಿರುವ ‘ರನ್ ವೇ 34’ ಸಿನಿಮಾ ಏಪ್ರಿಲ್ 29ರಂದು ಬಿಡುಗಡೆ ಆಗಲಿದೆ. ಹಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ತೆಲುಗಿನ ‘ಆರ್ಆರ್ಆರ್’ ಸಿನಿಮಾದಲ್ಲಿ ಅವರು ಒಂದು ಮುಖ್ಯ ಪಾತ್ರ ಮಾಡಿದ್ದರು. ರಾಮ್ ಚರಣ್ಗೆ ತಂದೆಯಾಗಿ ಕಾಣಿಸಿಕೊಂಡ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಕಥೆಗೆ ತಿರುವು ನೀಡುವಂತಹ ಪಾತ್ರವನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಕೌತುಕ ಮೂಡಿದೆ. ಅಜಯ್ ದೇವಗನ್ ನಟನೆಯ ‘ಭೋಲಾ’ (Bholaa Movie) ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಹಾಗಂತ ಈ ಸಿನಿಮಾ ಸದ್ಯದಲ್ಲೇನೂ ರಿಲೀಸ್ ಆಗುತ್ತಿಲ್ಲ. ಈ ಸಿನಿಮಾ ತೆರೆಕಾಣಲು ಇನ್ನೂ ಒಂದು ವರ್ಷ ಕಾಯಬೇಕು. ಆದರೆ ಈಗಲೇ ಬಿಡುಗಡೆ ದಿನಾಂಕವನ್ನು ಅಜಯ್ ದೇವಗನ್ ಘೋಷಿಸಿದ್ದಾರೆ. ಅವರಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. 2023ರ ಮಾ.30ರಂದು ‘ಬೋಲಾ’ ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ, ಒಂದೊಂದು ರಿಮೇಕ್ (Remake) ಸಿನಿಮಾ.
ಸಾಮಾನ್ಯವಾಗಿ ರಿಮೇಕ್ ಸಿನಿಮಾ ಮಾಡಿದಾಗ ಮೂಲ ಚಿತ್ರಕ್ಕೆ ಎಲ್ಲರೂ ಹೆಚ್ಚು ಹೊಗಳಿಕೆ ನೀಡುತ್ತಾರೆ. ಹಾಗಾಗಿ ರಿಮೇಕ್ ಎಂಬ ವಿಚಾರವನ್ನು ಹೆಚ್ಚು ಹೈಲೈಟ್ ಮಾಡಲೂ ಚಿತ್ರತಂಡದವರು ಇಷ್ಟಪಡುವುದಿಲ್ಲ. ಆದರೆ ಅಜಯ್ ದೇವಗನ್ ಅವರು ಈ ವಿಚಾರದಲ್ಲಿ ಭಿನ್ನ. ‘ಭೋಲಾ’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಲು ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇದು ತಮಿಳಿನ ಸೂಪರ್ ಹಿಟ್ ‘ಖೈದಿ’ ಸಿನಿಮಾದ ಅಧಿಕೃತ ರಿಮೇಕ್’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳು ಈಗ ದೇಶಾದ್ಯಂತ ಸದ್ದು ಮಾಡುತ್ತಿವೆ. ಸೌತ್ ಸಿನಿಮಾ ಇಂಡಸ್ಟ್ರಿಯ ಪ್ರತಿಭೆಗಳಿಗೆ ಬಾಲಿವುಡ್ ಸಲಾಂ ಎನ್ನುತ್ತಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳಿಂದ ಹಿಂದಿಗೆ ಡಬ್ ಆದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಅದೇ ರೀತಿ, ಕೆಲವು ಸಿನಿಮಾಗಳು ಹಿಂದಿಯಲ್ಲಿ ರಿಮೇಕ್ ಆಗಿ ಉತ್ತಮ ಕಮಾಯಿ ಮಾಡುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ದಕ್ಷಿಣ ಭಾರತದ ಚಿತ್ರರಂಗ ಸಖತ್ ಶೈನ್ ಆಗುತ್ತಿದೆ. ತಮಿಳುನಲ್ಲಿ ಕಾರ್ತಿ ನಟಿಸಿದ್ದ ‘ಖೈದಿ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿತ್ತು. ಈಗ ಆ ಸಿನಿಮಾವನ್ನು ಅಜಯ್ ದೇವಗನ್ ಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದಾರೆ.
Proudly announcing my next venture Bholaa, releasing on March 30th, 2023.@ADFFilms @TSeries @RelianceEnt @DreamWarriorpic #DharmendraSharma #Tabu pic.twitter.com/pcghLwHwdm
— Ajay Devgn (@ajaydevgn) April 19, 2022
ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ನಟಿ ಟಬು ಕೂಡ ಅಭಿನಯಿಸುತ್ತಿದ್ದಾರೆ. ಧರ್ಮೇಂದ್ರ ಶರ್ಮಾ ಅವರು ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅಜಯ್ ದೇವಗನ್ ಫಿಲ್ಮ್ಸ್, ಟಿ-ಸಿರೀಸ್ ಫಿಲ್ಮ್ಸ್, ರಿಲಯನ್ಸ್ ಎಂಟರ್ಟೇನ್ಮೆಂಟ್ಸ್, ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಜೊತೆಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ಹಲವು ಕಾರಣಗಳಿಗಾಗಿ ಈ ‘ಭೋಲಾ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಅಜಯ್ ದೇವಗನ್ ಅವರಿಗೆ ರಿಮೇಕ್ ಸಿನಿಮಾ ಏನೂ ಹೊಸದಲ್ಲ. ಈಗಾಗಲೇ ಅವರು ‘ದೃಶ್ಯಂ’, ಸಿಂಘಂ’, ‘ಮರ್ಯಾದಾ ರಾಮಣ್ಣ’ ಮುಂತಾದ ಸಿನಿಮಾಗಳನ್ನು ಹಿಂದಿಯಲ್ಲಿ ರಿಮೇಕ್ ಮಾಡಿ ಗೆಲುವಿನ ರುಚಿ ಕಂಡಿದ್ದಾರೆ.
ಇದನ್ನೂ ಓದಿ:
‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್ ದೇವಗನ್ಗೆ ಸಿಕ್ಕಿದ್ದೆಷ್ಟು?
‘ಶಾರುಖ್ ಮಗನ ಸಮಸ್ಯೆಗೆ ನಾನೇನು ಮಾಡಲಿ?’: ಮುಖಕ್ಕೆ ಹೊಡೆದಂತೆ ಮಾತಾಡಿದ್ರಾ ಅಜಯ್ ದೇವಗನ್?