ಮೋಹನ್‌ಲಾಲ್ ಸಿನಿಮಾಗಿಂತ ಡಿಫರೆಂಟ್ ಆಗಿರಲಿದೆ ಹಿಂದಿಯ ‘ದೃಶ್ಯಂ 3’: ಅಜಯ್ ದೇವಗನ್ ಭರವಸೆ

ಮಲಯಾಳಂ ಮೂಲದ ‘ದೃಶ್ಯಂ’ ಚಿತ್ರ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ಮೊದಲ ಎರಡು ಭಾಗಗಳನ್ನು ರಿಮೇಕ್ ಮಾಡಲಾಗಿತ್ತು. ಆದರೆ ಮೂರನೇ ಭಾಗದ ವಿಷಯದಲ್ಲಿ ಹಿಂದಿ ಚಿತ್ರತಂಡ ಸ್ವತಂತ್ರ ಹಾದಿ ಹಿಡಿದಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಶುಭ ದಿನದಂದು ಚಿತ್ರವು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.

ಮೋಹನ್‌ಲಾಲ್ ಸಿನಿಮಾಗಿಂತ ಡಿಫರೆಂಟ್ ಆಗಿರಲಿದೆ ಹಿಂದಿಯ ‘ದೃಶ್ಯಂ 3’: ಅಜಯ್ ದೇವಗನ್ ಭರವಸೆ
Drishyam The Conclusion Still
Image Credit source: Star Studios

Updated on: Sep 09, 2026 | 10:09 PM

ಬಾಲಿವುಡ್‌ನ ಯಶಸ್ವಿ ಫ್ರಾಂಚೈಸಿ ‘ದೃಶ್ಯಂ’ ಸರಣಿಯ ಬಹುನಿರೀಕ್ಷಿತ ಮೂರನೇ ಹಾಗೂ ಕೊನೆಯ ಭಾಗ ‘ದೃಶ್ಯಂ: ದ ಕನ್‌ಕ್ಲೂಷನ್’ ಚಿತ್ರದ ಟ್ರೇಲರ್ ಬುಧವಾರ (ಸೆಪ್ಟೆಂಬರ್ 9) ಅದ್ದೂರಿಯಾಗಿ ಬಿಡುಗಡೆಯಾಗಿದೆ. ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ಮತ್ತೆ ಅಜಯ್ ದೇವಗನ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಯ್ ದೇವಗನ್, ಮಲಯಾಳಂನ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಚಿತ್ರಕ್ಕೂ ಮತ್ತು ತಮ್ಮ ಹಿಂದಿ ಆವೃತ್ತಿಗೂ ಯಾವುದೇ ಸಂಬಂಧವಿಲ್ಲ; ಇದು ಸಂಪೂರ್ಣವಾಗಿ ವಿಭಿನ್ನ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಯ್ ದೇವಗನ್, ‘ನಮ್ಮ ಎರಡನೇ ಭಾಗವು ಮೂಲ ಮಲಯಾಳಂ ಚಿತ್ರದಿಂದ ಪ್ರೇರಿತವಾಗಿತ್ತು. ಆದರೆ ಈ ಮೂರನೇ ಭಾಗದ ಕಥೆಯೇ ಬೇರೆ. ಮಲಯಾಳಂನ ‘ದೃಶ್ಯಂ 3’ ಹಾಗೂ ನಮ್ಮ ‘ದೃಶ್ಯಂ ದ ಕನ್‌ಕ್ಲೂಷನ್’ ಚಿತ್ರಗಳ ನಡುವೆ ಸಣ್ಣಪುಟ್ಟ ಬದಲಾವಣೆಗಳಷ್ಟೇ ಅಲ್ಲ, ಎರಡೂ ಸಂಪೂರ್ಣ ವಿಭಿನ್ನ ಚಿತ್ರಕಥೆಗಳನ್ನು ಹೊಂದಿವೆ. ದೃಶ್ಯಂ 2 ನಂತರ ಈ ಸಿನಿಮಾ ಸೆಟ್ಟೇರುತ್ತದೆಯೋ ಇಲ್ಲವೋ ಎಂಬ ಗೊಂದಲವಿತ್ತು. ಏಕೆಂದರೆ ಇದು ಕೇವಲ ಸೀಕ್ವೆಲ್ ಮಾಡಬೇಕು ಅಂತ ಬರೆಯುವ ಕಥೆಯಲ್ಲ. ಇದರಲ್ಲಿ ರೋಚಕ ಟ್ವಿಸ್ಟ್ ಹಾಗೂ ಟರ್ನ್‌ಗಳು ಇರಬೇಕಾಗುತ್ತದೆ’ ಎಂದು ವಿವರಿಸಿದ್ದಾರೆ.

ಚಿತ್ರದ ನಿರ್ದೇಶಕ ಅಭಿಷೇಕ್ ಪಾಠಕ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅಜಯ್ ದೇವಗನ್, ‘ಅಭಿಷೇಕ್ ಈ ಕಥೆಯನ್ನು ಅತ್ಯುತ್ತಮವಾಗಿ ರೂಪಿಸಿದ್ದಾರೆ. ಈ ಸಿನಿಮಾ ಮುಖಾಂತರ ಅವರ ಬೆಳವಣಿಗೆ ನಿಮಗೆ ತಿಳಿಯುತ್ತದೆ. ಮಲಯಾಳಂ ನಟ ಮೋಹನ್‌ಲಾಲ್ ಹಾಗೂ ನಿರ್ದೇಶಕ ಜೀತು ಜೋಸೆಫ್ ನಮ್ಮ ಈ ಚಿತ್ರವನ್ನು ನೋಡಬೇಕು. ಅವರಿಗೆ ನಮ್ಮ ಸಿನಿಮಾ ಇಷ್ಟವಾಗಿ ಒಪ್ಪಿಗೆ ಸಿಕ್ಕರೆ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ದೃಶ್ಯಂ 3’ ಚಿತ್ರದ ಟ್ರೇಲರ್:

Drishyam: The Conclusion | Official Trailer | Ajay Devgn, Tabu, Jaideep | Abhishek Pathak | 2 Oct

‘ದೃಶ್ಯಂ: ದ ಕನ್‌ಕ್ಲೂಷನ್’ ಚಿತ್ರದಲ್ಲಿ ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ಅಜಯ್ ದೇವಗನ್, ಮಾಜಿ ಐಜಿ ಮೀರಾ ದೇಶ್‌ಮುಖ್ ಪಾತ್ರದಲ್ಲಿ ಟಬು ಹಾಗೂ ನಂದಿನಿ ಪಾತ್ರದಲ್ಲಿ ಶ್ರಿಯಾ ಶರಣ್ ಮುಂದುವರಿದಿದ್ದಾರೆ. ರಜತ್ ಕಪೂರ್ ಕೂಡ ತಮ್ಮ ಹಳೆಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಎರಡು ಪ್ರಮುಖ ಹೊಸ ಪಾತ್ರಗಳು ಕಥೆಗೆ ಸೇರ್ಪಡೆಯಾಗಿವೆ. ನಟ ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಹೊಸ ಹಾಗೂ ಪ್ರಬಲ ಪಾತ್ರಗಳಲ್ಲಿ ವಿಜಯ್ ಸಾಲ್ಗಾಂವ್ಕರ್ ಕುಟುಂಬಕ್ಕೆ ಸವಾಲೊಡ್ಡಲಿದ್ದಾರೆ.

ಇದನ್ನೂ ಓದಿ: ಪಾನ್ ಮಸಾಲ ಜಹೀರಾತು ವಿವಾದ: ಶಾರುಖ್, ಅಜಯ್ ದೇವಗನ್ ನೀಡಿದ್ದ ಸಮರ್ಥನೆ ಏನು?

‘ಸ್ಟಾರ್ ಸ್ಟುಡಿಯೋ 18’ ಮತ್ತು ಶ್ರೇಯಾಸ್ ತಲ್ಪಡೆ ಒಡೆತನದ ಪ್ಯಾನೋರಮಾ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಅಭಿಷೇಕ್ ಪಾಠಕ್ ನಿರ್ದೇಶನದ ಜೊತೆಗೆ ಆಮಿಲ್ ಕೀಯಾನ್ ಖಾನ್ ಹಾಗೂ ಪರ್ವೀಜ್ ಶೇಖ್ ಅವರೊಂದಿಗೆ ಸೇರಿ ಚಿತ್ರಕಥೆ ಬರೆದಿದ್ದಾರೆ. ಆಲೋಕ್ ಜೈನ್, ಅಜಿತ್ ಅಂಧಾರೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us