ಏರುತ್ತಲೇ ಇದೆ ‘ಶೈತಾನ್​’ ಕಲೆಕ್ಷನ್​; 50 ಕೋಟಿ ರೂ. ದಾಟಿದ ಅಜಯ್​ ದೇವಗನ್​ ಸಿನಿಮಾ

|

Updated on: Mar 11, 2024 | 9:04 PM

‘ಶೈತಾನ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ನಿಂದ ಹಿಂದಿ ಚಿತ್ರರಂಗದಲ್ಲಿ ಹೊಸ ಚೈತನ್ಯ ಮೂಡಿದೆ. ಹಾರರ್​ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರು ‘ಶೈತಾನ್​’ ನೋಡಿ ಎಂಜಾಯ್​ ಮಾಡುತ್ತಿದ್ದಾರೆ. ಅಜಯ್​ ದೇವಗನ್​, ಆರ್​. ಮಾಧವನ್ ಅವರು ಈ ಸಿನಿಮಾದಲ್ಲಿ ಮುಖಾಮುಖಿ ಆಗಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.

ಏರುತ್ತಲೇ ಇದೆ ‘ಶೈತಾನ್​’ ಕಲೆಕ್ಷನ್​; 50 ಕೋಟಿ ರೂ. ದಾಟಿದ ಅಜಯ್​ ದೇವಗನ್​ ಸಿನಿಮಾ
ಆರ್​. ಮಾಧವನ್​, ಜಾನಕಿ ಬೋಡಿವಾಲಾ
Follow us on

ಸೂಪರ್​ ನ್ಯಾಚುರಲ್​ ಕಹಾನಿ ಇರುವ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ಶೈತಾನ್​’ ಸಿನಿಮಾ (Shaitan Movie) ಹೇಳಿ ಮಾಡಿಸಿದಂತಿದೆ. ವಶೀಕರಣದ ಕಥೆ ಈ ಸಿನಿಮಾದಲ್ಲಿದೆ. ಮಾರ್ಚ್​ 8ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ಮೂರು ದಿನಕ್ಕೆ ಉತ್ತಮವಾಗಿ ಕಲೆಕ್ಷನ್​ ಮಾಡಿದೆ. ದಿನದಿಂದ ದಿನಕ್ಕೆ ‘ಶೈತಾನ್​’ ಕಲೆಕ್ಷನ್​ (Shaitan Box Office Collection) ಏರಿಕೆ ಆಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್​ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅಜಯ್​ ದೇವಗನ್​ (Ajay Devgn), ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್​. ಮಾಧವನ್​ ಮುಂತಾದವರು ‘ಶೈತಾನ್​’ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ವಶೀಕರಣಕ್ಕೆ ಒಳಗಾದ ಮಗಳನ್ನು ಕಾಪಾಡಿಕೊಳ್ಳಲು ಕಷ್ಟಪಡುವ ತಂದೆ-ತಾಯಿಯ ಕಥೆಯನ್ನು ‘ಶೈತಾನ್​’ ಸಿನಿಮಾದಲ್ಲಿ ತೋರಿಸಲಾಗಿದೆ. ಆರ್​. ಮಾಧವನ್​ ಅವರು ಈ ಸಿನಿಮಾದಲ್ಲಿ ನೆಗೆಟಿವ್​ ಪಾತ್ರ ಮಾಡಿದ್ದಾರೆ. ಅಜಯ್​ ದೇವಗನ್​ ಹಾಗೂ ಜ್ಯೋತಿಕಾ ಅವರು ಗಂಡ-ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಪುತ್ರಿಯ ಪಾತ್ರದಲ್ಲಿ ಜಾನಕಿ ಬೋಡಿವಾಲಾ ನಟಿಸಿದ್ದು, ಈ ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ವಿಕಾಸ್​ ಬಹ್ಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಮಿತ್​ ತ್ರಿವೇದಿ ಅವರು ಸಂಗೀತ ನೀಡಿದ್ದಾರೆ.

ಮೊದಲ ಸಿನಿಮಾ ‘ಶೈತಾನ್​’ ಸಿನಿಮಾಗೆ 15.21 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಪ್ರೇಕ್ಷಕರು ಉತ್ತಮ ವಿಮರ್ಶೆ ನೀಡಿದರು. ಇದರಿಂದ ಎರಡನೇ ದಿನ ಸಿನಿಮಾದ ಕಲೆಕ್ಷನ್​ ಹೆಚ್ಚಿತು. 2ನೇ ದಿನವಾದ ಮಾರ್ಚ್​ 9ರಂದು ಈ ಸಿನಿಮಾ 19.18 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ ಕೂಡ ಕಲೆಕ್ಷನ್​ನಲ್ಲಿ ಏರಿಕೆ ಆಗಿದೆ. ಭಾನುವಾರ (ಮಾರ್ಚ್​ 10) ‘ಶೈತಾನ್​’ ಚಿತ್ರ 20.74 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಿಂದ ಚಿತ್ರದ ಟೋಟಲ್​ ಕಲೆಕ್ಷನ್​ 55.13 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: Shaitaan Twitter Review: ಯುವತಿಯ ವಶೀಕರಣದ ಕಥೆ ಇರುವ ‘ಶೈತಾನ್​’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟರ್​ ವಿಮರ್ಶೆ

ಅನೇಕ ಕಡೆಗಳಲ್ಲಿ ‘ಶೈತಾನ್​’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಸೋಮವಾರದ ಕಲೆಕ್ಷನ್​ ಎಷ್ಟಾಗಿದೆ ಎಂಬುದರ ಆಧಾರದ ಮೇಲೆ ಮುಂದಿನ ದಿನಗಳ ಭವಿಷ್ಯ ನಿರ್ಧಾರ ಆಗಲಿದೆ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದರಿಂದ ಉತ್ತಮ ಕಲೆಕ್ಷನ್​ ಆಗಲು ಸಹಕಾರಿ ಆಯಿತು. ಇದು ಗುಜರಾತಿ ಭಾಷೆಯ ‘ವಶ್​’ ಸಿನಿಮಾದ ಹಿಂದಿ ರಿಮೇಕ್​. ಸೆನ್ಸಾರ್​ ಮಂಡಳಿಯಿಂದ ಈ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಕ್ಲೈಮ್ಯಾಕ್ಸ್​ ನೋಡಿದ ಪ್ರೇಕ್ಷಕರು ವಾವ್​ ಎನ್ನುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಾಕ್ಸ್​ ಆಫೀಸ್​ನಲ್ಲಿ ‘ಶೈತಾನ್​’ ಆಬ್ಬರಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.