Sooryavanshi: ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯುತ್ತಿರುವ ಸೂರ್ಯವಂಶಿ; ಅಕ್ಷಯ್ ನಟನೆಯ ಚಿತ್ರ ಗಳಿಸಿದ್ದೆಷ್ಟು?
Akshay Kumar: ಅಕ್ಷಯ್ ಕುಮಾರ್, ಕತ್ರೀನಾ ಕೈಫ್ ನಟನೆಯ ‘ಸೂರ್ಯವಂಶಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಮಾಡಿದ್ದು, ₹ 150 ಕೋಟಿ ಸನಿಹ ಬಂದು ನಿಂತಿದೆ. ಇದರೊಂದಿಗೆ ಕೆಲವು ದಾಖಲೆಗಳೂ ಈ ಚಿತ್ರದ ಪಾಲಾಗಿವೆ.
ಕೊರೊನಾ ಎರಡನೇ ಅಲೆಯ ಕಾರಣ ಕುಗ್ಗಿದ್ದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಪ್ರಸ್ತುತ ಬಿಡುಗಡೆಯಾಗುತ್ತಿರುವ ಸ್ಟಾರ್ ನಟರ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ನಟನೆಯ ‘ಸೂರ್ಯವಂಶಿ’ ಚಿತ್ರ ನವೆಂಬರ್ 5ರಂದು ಬಿಡುಗಡೆಯಾಗಿತ್ತು. ಪ್ರಾರಂಭದ ಮೂರು ದಿನವೂ ಚಿತ್ರ ಉತ್ತಮ ಗಳಿಕೆ ಮಾಡಿದ್ದು, ಚಿತ್ರಕ್ಕೆ ಬಿಗ್ ಪ್ಲಸ್ ಆಗಿದೆ. ಪ್ರಸ್ತುತ ₹ 150 ಕೋಟಿ ಕ್ಲಬ್ ಸನಿಹ ಬಂದು ನಿಂತಿದೆ. ಈ ಸಾಧನೆಯೊಂದಿಗೆ ಹಲವು ದಾಖಲೆಗಳನ್ನೂ ಸೂರ್ಯವಂಶಿ ಬರೆದಿದ್ದು, ಚಿತ್ರತಂಡಕ್ಕೆ ಸಂತಸ ಮೂಡಿಸಿದೆ. ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾದ ಐದನೇ ದಿನದಾಂತ್ಯಕ್ಕೆ ಸುಮಾರು ₹ 138.57 ಕೋಟಿ ಬಾಚಿಕೊಂಡಿದೆ ಎಂದು ಬಾಕ್ಸಾಫೀಸ್ ತಜ್ಞ ಮನೋಬಲ ವಿಜಯಬಾಲನ್ ವಿಶ್ಲೇಷಿಸಿದ್ದಾರೆ. ಅಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಚಿತ್ರವು ₹ 100 ಕೋಟಿ ಕ್ಲಬ್ ಸೇರಿದೆ ಎಂದು ತಿಳಿಸಿದ್ದಾರೆ.
‘ಸೂರ್ಯವಂಶಿ’ ಚಿತ್ರವು ಜಗತ್ತಿನ ಮಾರುಕಟ್ಟೆಯಲ್ಲಿ ಮೊದಲ ಮೂರು ದಿನವೂ ಸುಮಾರು ₹ 39 ಕೋಟಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ. ನಾಲ್ಕನೇ ದಿನದಂದು ಸುಮಾರು ₹ 21.89 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಒಟ್ಟಾರೆ ₹ 138.57 ಕೋಟಿ ಗಳಿಕೆ ಮಾಡಿದೆ ಎಂದು ತಿಳಿಸಲಾಗಿದೆ. ಇನ್ನು ಕೇವಲ ಭಾರತದ ಮಾರುಕಟ್ಟೆಯನ್ನು ತೆಗೆದುಕೊಂಡರೆ, ಐದನೇ ದಿನದಂತ್ಯಕ್ಕೆ ಸುಮಾರು ₹ 102 ಕೋಟಿ ಗಳಿಸಿದೆ. ಈ ಮೂಲಕ ಚಿತ್ರವು ₹ 200 ಕೋಟಿ ಕ್ಲಬ್ ಕೂಡ ಸದ್ಯದಲ್ಲೇ ಸೇರಲಿದೆ ಎಂದು ಹೇಳಲಾಗುತ್ತಿದೆ.
‘ಸೂರ್ಯವಂಶಿ’ ಚಿತ್ರದ ಒಟ್ಟಾರೆ ಬಾಕ್ಸಾಫೀಸ್ ಗಳಿಕೆ:
#Sooryavanshi WW Box Office
Day 1 – ₹ 39.50 cr Day 2 – ₹ 37.26 cr Day 3 – ₹ 39.92 cr Day 4 – ₹ 21.89 cr Total – ₹ 138.57 cr#AkshayKumar #KatrinaKaif #RanveerSingh #AjayDevgn
— Manobala Vijayabalan (@ManobalaV) November 9, 2021
‘ಸೂರ್ಯವಂಶಿ’ ಚಿತ್ರ ₹ 100 ಕೋಟಿ ಕ್ಲಬ್ ಸೇರಿರುವುದರಿಂದ ಒಟ್ಟಾರೆ ರೋಹಿತ್ ಶೆಟ್ಟಿ ನಿರ್ದೇಶನದ ಒಂಬತ್ತನೇ ಚಿತ್ರ ಆ ಕ್ಲಬ್ಗೆ ಸೇರಿದಂತಾಗಿದೆ. ಇದಲ್ಲದೇ ಈ ಚಿತ್ರ ಮತ್ತೂ ಒಂದು ದಾಖಲೆ ಬರೆದಿದ್ದು, 2020ರ ಜನವರಿಯಲ್ಲಿ ಬಿಡುಗಡೆಯಾದ ‘ತಾನ್ಹಾಜಿ’ ಚಿತ್ರದ ನಂತರ ಭಾರತೀಯ ಚಿತ್ರಮಂದಿರಗಳಲ್ಲಿ ₹ 100 ಕೋಟಿ ಗಳಿಸಿದ ಮೊದಲ ಚಿತ್ರವಾಗಿದೆ. ಈ ಮೂಲಕ ಅಕ್ಷಯ್, ಕತ್ರೀನಾ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್ ಮ್ಯಾಜಿಕ್ ಮಾಡಿದ್ದು, ದಾಖಲೆ ಬರೆದಿದೆ. ಚಿತ್ರದ ಗಳಿಕೆ ಹೀಗೇ ಮುಂದುವರೆದರೆ ಇನ್ನಷ್ಟು ದಾಖಲೆಗಳು ಇದರ ಪಾಲಾಗುವುದು ಖಚಿತ.
‘ಸೂರ್ಯವಂಶಿ’ ಚಿತ್ರವು ನೆಟ್ಫ್ಲಿಕ್ಸ್ಗೆ ಸೇಲ್ ಆಗಲಿದೆ ಎಂಬ ಗುಸುಗುಸು ಕೂಡ ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಇದರ ಕುರಿತು ಇನ್ನೂ ಸ್ಪಷ್ಟನೆ ಹೊರಬಿದ್ದಿಲ್ಲ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಭಯೋತ್ಪಾದನಾ ನಿಗ್ರಹ ದಳದ ಅಧಿಖಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರದಲ್ಲಿ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರೋಹಿತ್ ಶೆಟ್ಟಿ ನಿರ್ದೇಶನದ ಪೊಲೀಸ್ ಸರಣಿಯ ಮೂರನೇ ಚಿತ್ರವಾಗಿದೆ.
ಇದನ್ನೂ ಓದಿ:
‘100’ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್ ಅರವಿಂದ್ ಕಸುಬುದಾರಿಕೆ
‘ಫಸ್ಟ್ ನೈಟ್ನಲ್ಲಿ ಎಲ್ಲರೂ ಏನ್ ಮಾಡ್ತಾರೋ ನಾವು ಅದನ್ನೇ ಮಾಡಿದ್ದು’; ರಚಿತಾ ರಾಮ್