ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿತ್ತು. ಜೂನ್ 3ರಂದು ವಿಶ್ವಾದ್ಯಂತ ತೆರೆ ಕಂಡಿರುವ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಚಿತ್ರದ ಮೊದಲ ದಿನದ ಗಳಿಕೆಯ ವಿವರ ಹೊರಬಿದ್ದಿದೆ. ಬರೋಬ್ಬರಿ 300 ಕೋಟಿ ರೂ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನವೇ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯಬಹುದೆಂಬ ನಿರೀಕ್ಷೆ ಇತ್ತು. ಅದು ಸಾಧ್ಯವಾಗದೆ ಹೋದರೂ, ಸಿನಿಮಾವು ಉತ್ತಮ ಮೊತ್ತವನ್ನು ಗಳಿಸಿದೆ. ಬಾಕ್ಸಾಫೀಸ್ ವಿಶ್ಲೇಶಕ ತರಣ್ ಆದರ್ಶ್ ಪ್ರಕಾರ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವು ಮೊದಲ ದಿನದಂದು ಹಿಂದಿಯಲ್ಲಿ ಸುಮಾರು 10.71 ಕೋಟಿ ರೂಗಳನ್ನು ಗಳಿಕೆ ಮಾಡಿದೆ. ವೀಕೆಂಡ್ ಆಗಿರುವ ಕಾರಣ, ಶನಿವಾರ ಹಾಗೂ ಭಾನುವಾರ ಕಲೆಕ್ಷನ್ನಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.
ರಜಪೂತರ ರಾಜ ಪೃಥ್ವಿರಾಜ್ ಚೌಹಾಣ್ ಜೀವನವನ್ನು ಆಧರಿಸಿದ ಈ ಚಿತ್ರವನ್ನು ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಚಿತ್ರದ ಕತೆಯ ಕೆಲಸಕ್ಕೆ ಸುಮಾರು 18 ವರ್ಷಗಳನ್ನು ವ್ಯಯಿಸಲಾಗಿದೆ. ಸಾಕಷ್ಟು ಸಂಶೋಧನೆ ನಡೆಸಿ ಮೂಲಕ್ಕೆ ನಿಷ್ಠವಾಗಿ ಕತೆ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಸಂಜಯ್ ದತ್, ಸೋನು ಸೂದ್ ಮೊದಲಾದ ತಾರೆಯರು ಬಣ್ಣಹಚ್ಚಿದ್ದಾರೆ. ಬಾಲಿವುಡ್ನಲ್ಲಿ ಮೊದಲ ದಿನ ಹೆಚ್ಚು ಗಳಿಸಿದ ಚಿತ್ರಗಳು ಯಾವುವು ಎಂಬ ವಿವರ ಇಲ್ಲಿದೆ.
ಬಾಲಿವುಡ್ನಲ್ಲಿ ಮೊದಲ ದಿನ ಹೆಚ್ಚು ಗಳಿಕೆ ಮಾಡಿದ ಚಿತ್ರಗಳು ಯಾವುವು?
2022 ಬಾಲಿವುಡ್ಗೆ ಹೆಚ್ಚು ಸಂತಸ ನೀಡಿಲ್ಲ. ಕಾರಣ, ದಕ್ಷಿಣ ಭಾರತದ ಚಿತ್ರಗಳ ಹಿಂದಿ ಅವತರಣಿಕೆಗಳೇ ಜನರ ಮನಗೆದ್ದಿವೆ. ಬೆರಳೆಣಿಕೆಯ ಮೂಲ ಹಿಂದಿ ಚಿತ್ರಗಳನ್ನು ಹೊರತುಪಡಿಸಿ ಮತ್ತೆಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡುವಲ್ಲಿ ಹಿಂದೆ ಬಿದ್ದಿವೆ. ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನವೇ ಸುಮಾರು 53.95 ಕೋಟಿ ರೂಗಳನ್ನು ಬಾಚಿಕೊಂಡಿತ್ತು. ‘ಆರ್ಆರ್ಆರ್’ ಚಿತ್ರ 20.07 ಕೋಟಿ ಗಳಿಸಿತ್ತು.
ಇತ್ತೀಚೆಗೆ ತೆರೆಕಂಡಿದ್ದ ‘ಭೂಲ್ ಭುಲಯ್ಯ 2’ ಮೊದಲ ದಿನ ಸುಮಾರು 14.11 ಕೋಟಿ ರೂ ಗಳಿಸಿತ್ತು. ‘ಬಚ್ಚನ್ ಪಾಂಡೆ’ 13.25 ಕೋಟಿ ರೂ, ‘ಸಾಮ್ರಾಟ್ ಪೃಥ್ವಿರಾಜ್’ 10.71 ಕೋಟಿ ರೂ, ‘ಗಂಗೂಬಾಯಿ ಕಾಠಿಯಾವಾಡಿ’ 10.50 ಕೋಟಿ ರೂ ಗಳಿಸಿವೆ.
*Day 1* biz of the two event films, *dubbed in #Hindi*…
1. #KGF2: ₹ 53.95 cr
2. #RRR: ₹ 20.07 cr#Hindi version. Nett BOC. #India biz.— taran adarsh (@taran_adarsh) June 4, 2022
ಇದನ್ನೂ ಓದಿ: ‘ವಿಕ್ರಮ್’ ಚಿತ್ರಕ್ಕೆ ಭರ್ಜರಿ ಓಪನಿಂಗ್; ಮೊದಲ ದಿನ ಕಮಲ್ ಹಾಸನ್ ಸಿನಿಮಾ ಗಳಿಸಿದ್ದೆಷ್ಟು?
ಬೇರೆಲ್ಲಾ ಬಾಲಿವುಡ್ ಚಿತ್ರಗಳಿಗೆ ಹೋಲಿಸಿದರೆ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಬಜೆಟ್ ತೀರಾ ಹೆಚ್ಚು. ಹೀಗಾಗಿ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಮ್ಸ್’ ಗೆ ಚಿತ್ರಮಂದಿರಗಳ ಗಳಿಕೆಯೇ ಜೀವಾಳವಾಗಿದೆ. ಮುಂದಿನ ದಿನಗಳಲ್ಲಿ ಅಕ್ಷಯ್ ನಟನೆಯ ಚಿತ್ರ ಎಷ್ಟು ಮೊತ್ತ ಗಳಿಸಲಿದೆ ಎಂದು ಕಾದುನೋಡಬೇಕಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Sat, 4 June 22