Akshay Kumar: ಭಾರಿ ಸೋಲಿನ ಬಳಿಕ ಮತ್ತೆ ಅದೇ ತಪ್ಪು ಮಾಡಿದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್
Akshay Kumar | Capsule Gill: ಸದ್ಯಕ್ಕೆ ಅಕ್ಷಯ್ ಕುಮಾರ್ ಅವರ ಟೈಮ್ ಚೆನ್ನಾಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಈ ಸಂದರ್ಭದಲ್ಲಿ ಅವರನ್ನು ಟ್ರೋಲಿಗರು ಟಾರ್ಗೆಟ್ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್ (Akshay Kumar) ವೃತ್ತಿಜೀವನದಲ್ಲಿ ಇದು ತುಂಬ ಮುಖ್ಯವಾದ ಕಾಲಘಟ್ಟವಾಗಿದೆ. ಒಂದೆಡೆ ದಕ್ಷಿಣ ಭಾರತದ ಸಿನಿಮಾಗಳಿಂದ ಭಾರಿ ಪೈಪೋಟಿ ಎದುರಾಗುತ್ತಿದೆ. ಇನ್ನೊಂದೆಡೆ ಹಿಂದಿಯ ಇತರೆ ಹೀರೋಗಳ ಎದುರಲ್ಲೂ ಸ್ಪರ್ಧೆ ಮಾಡಬೇಕಿದೆ. ಈ ಸಂದರ್ಭಕ್ಕೆ ಸರಿಯಾಗಿ ಅವರ ಕೆಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿವೆ. ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಆದಾಯ ಗಳಿಸಿಲ್ಲ. ಈಗ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಕ್ಯಾಪ್ಸೂಲ್ ಗಿಲ್’ (Capsule Gill) ಹೆಸರಿನ ಈ ಸಿನಿಮಾದಲ್ಲಿ ಅವರ ಲುಕ್ ಹೇಗಿರಲಿದೆ ಎಂಬುದು ಬಹಿರಂಗ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ (Troll) ಮಾಡುತ್ತಿದ್ದಾರೆ. ಅಷ್ಟಕ್ಕೂ ಅಕ್ಷಯ್ ಕುಮಾರ್ ಮಾಡಿದ ತಪ್ಪೇನು? ಇಲ್ಲಿದೆ ವಿವರ..
ಅಕ್ಷಯ್ ಕುಮಾರ್ ಅವರು ತುಂಬ ಗಡಿಬಿಡಿಯಲ್ಲಿ ಸಿನಿಮಾ ಮಾಡುತ್ತಾರೆ. 45ರಿಂದ 50 ದಿನಗಳ ಒಳಗೆ ತಮ್ಮ ಪ್ರತಿ ಚಿತ್ರದ ಶೂಟಿಂಗ್ ಮುಗಿಯಬೇಕು ಎಂದು ಅವರು ನಿರೀಕ್ಷಿಸುತ್ತಾರೆ. ಒಂದು ಸಿನಿಮಾದ ಶೂಟಿಂಗ್ ನಡುವೆ ಇನ್ನೊಂದು ಚಿತ್ರದ ಚಿತ್ರೀಕರಣದಲ್ಲೂ ಭಾಗಿ ಆಗುತ್ತಾರೆ. ಈ ರೀತಿ ಮಾಡಲು ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಅವರು ರಿಯಲ್ ಆಗಿ ಗಡ್ಡ, ಮೀಸೆ ಬಿಡುವುದಿಲ್ಲ. ಪಾತ್ರಕ್ಕೆ ಆ ರೀತಿಯ ಗೆಟಪ್ ಅಗತ್ಯವಿದ್ದರೂ ನಕಲಿ ಗಡ್ಡ-ಮೀಸೆ ಅಂಟಿಸಿಕೊಳ್ಳುತ್ತಾರೆ!
‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದ ಸೋಲಿಗೆ ಅಕ್ಷಯ್ ಕುಮಾರ್ ಅವರ ಈ ಗುಣ ಕೂಡ ಕಾರಣ ಎಂದು ಹೇಳಲಾಗಿತ್ತು. ಈಗ ಅವರು ‘ಕ್ಯಾಪ್ಸೂಲ್ ಗಿಲ್’ ಚಿತ್ರದಲ್ಲೂ ಅದೇ ತಪ್ಪು ಮಾಡಿದ್ದಾರೆ. ರಿಯಲ್ ಲೈಫ್ ಪಾತ್ರವನ್ನು ಆಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ಸಿಖ್ ವ್ಯಕ್ತಿಯ ಪಾತ್ರವನ್ನು ಅವರು ನಿಭಾಯಿಸುತ್ತಿದ್ದು, ನಕಲಿ ಗಡ್ಡ-ಮೀಸೆ ಅಂಟಿಸಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ‘ಅಕ್ಷಯ್ ಕುಮಾರ್ ಅವರು ಚೀನಾದಲ್ಲಿ ತಯಾರಾದ ನಕಲಿ ವಸ್ತು ರೀತಿ ಕಾಣುತ್ತಿದ್ದಾರೆ’ ಎಂಬಂತಹ ಕಟು ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಆಗಸ್ಟ್ 11ಕ್ಕೆ ಆಮಿರ್ ಖಾನ್ ವರ್ಸಸ್ ಅಕ್ಷಯ್ ಕುಮಾರ್; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?
‘ಸಾಮ್ರಾಟ್ ಪೃಥ್ವಿರಾಜ್’ ಒಂದು ಐತಿಹಾಸಿಕ ಕಥಾಹಂದರದ ಸಿನಿಮಾ. ಇಂಥ ಸಿನಿಮಾ ಮಾಡುವಾಗ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಅಷ್ಟು ಸಮಯವನ್ನು ನೀಡಲು ಅಕ್ಷಯ್ ಕುಮಾರ್ ಸಿದ್ಧರಿರಲಿಲ್ಲ. ಪೃಥ್ವಿರಾಜ್ ಪಾತ್ರಕ್ಕಾಗಿ ಅವರು ಅಸಲಿ ಮೀಸೆ ಬಿಡಲು ಕೂಡ ಸಿದ್ಧರಿರಲಿಲ್ಲ. ನಕಲಿ ಮೀಸೆ ಅಂಟಿಸಿಕೊಂಡು ಶೂಟಿಂಗ್ ಮಾಡಿದರು. ಇದರಿಂದ ಸಿನಿಮಾದ ದೃಶ್ಯಗಳು ನ್ಯಾಚುರಲ್ ಆಗಿ ಮೂಡಿಬಂದಿಲ್ಲ ಅಂತ ಚಿತ್ರತಂಡದವರೇ ಆರೋಪಿಸಿದ್ದಾರೆ ಎಂದು ಕೆಲವೆಡೆ ವರದಿ ಪ್ರಕಟ ಆಗಿತ್ತು.
Published On - 9:19 am, Mon, 11 July 22