ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಬಿಟೌನ್ನ ಉಳಿದ ತಾರೆಯರಿಗಿಂತ ಬಹಳ ಭಿನ್ನ. ಸಾಲು-ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುವ ಅವರು, ವರ್ಷಕ್ಕೆ ಕನಿಷ್ಠ ಎರಡು ಮೂರು ಚಿತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ. ಇದೇ ಕಾರಣಕ್ಕೆ ನಿರ್ಮಾಪಕರಿಗೂ ಅಕ್ಷಯ್ ಎಂದರೆ ಅಚ್ಚುಮೆಚ್ಚು. ಹಾಗಂತ ಅಕ್ಷಯ್ ನಟನೆಯ ಚಿತ್ರಗಳು ಕಡಿಮೆ ಬಜೆಟ್ ಚಿತ್ರಗಳೇನಲ್ಲ. ಬಿಗ್ ಬಜೆಟ್ನ, ದೊಡ್ಡ ತಾರಾಗಣದ ಚಿತ್ರಗಳಲ್ಲೇ ಅವರು ನಟಿಸುತ್ತಾರೆ. ಅಷ್ಟೇ ಅಲ್ಲ, ದೊಡ್ಡ ಮಟ್ಟದ ಸಂಭಾವನೆಯನ್ನೂ ಪಡೆಯುತ್ತಾರೆ. ಹೀಗಿದ್ದರೂ ಅವರು ಬೇರೆಲ್ಲಾ ಕಲಾವಿದರಿಗಿಂದ ಬಹುಬೇಗ ಸಿನಿಮಾವನ್ನು ಮುಗಿಸುತ್ತಾರೆ. ಕೊರೊನಾ ನಂತರದಲ್ಲಿ ಅಕ್ಷಯ್ ಸಿನಿಮಾಗಳ ವೇಗ ಮೊದಲಿಗಿಂತ ತುಸು ತಗ್ಗಿತ್ತು. ಆದರೆ ಇದೀಗ ಅವರು ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಚಿತ್ರಮಂದಿರಗಳ ಲಭ್ಯತೆ ಕಡಿಮೆಯಿದ್ದರೂ ಇತ್ತೀಚೆಗೆ ‘ಬೆಲ್ ಬಾಟಂ’ ಚಿತ್ರ ತೆರೆಗೆ ಬಂದಿತ್ತು. ಗಮನ ಸೆಳೆದಿದ್ದ ಈ ಚಿತ್ರ ನಂತರ ಒಟಿಟಿಯಲ್ಲಿ ಗುರುತಿಸಿಕೊಂಡಿತು. ಚಿತ್ರಮಂದಿರಗಳ ಲಭ್ಯತೆ ಸರಿಯಾದ ನಂತರ ಅಕ್ಷಯ್, ಕತ್ರಿನಾ ನಟಿಸಿದ್ದ ‘ಸೂರ್ಯವಂಶಿ’ ನವೆಂಬರ್ನಲ್ಲಿ ತೆರೆಗೆ ಬಂತು. ಅದು ಬಾಕ್ಸಾಫೀಸ್ನಲ್ಲಿ ದೊಡ್ಡ ದಾಖಲೆ ಬರೆಯಿತು. ಇದೀಗ ನಾಲ್ಕು ತಿಂಗಳ ಅಂತರದಲ್ಲಿ ಹೊಸ ಚಿತ್ರ ‘ಬಚ್ಚನ್ ಪಾಂಡೆ’ (Bachchhan Paandey) ರಿಲೀಸ್ಗೆ ಅಕ್ಷಯ್ ತಯಾರಾಗಿದ್ದಾರೆ.
ರಿಲೀಸ್ ಆಯ್ತು ಬಚ್ಚನ್ ಪಾಂಡೆ ಟ್ರೈಲರ್:
ಸಾಲುಸಾಲು ಚಿತ್ರಗಳನ್ನು ಮಾಡಿದರೂ ಅಕ್ಷಯ್ ಪಾತ್ರಗಳ ಆಯ್ಕೆಯಲ್ಲಿ ಭಿನ್ನತೆಯನ್ನು ಕಾಯ್ದುಕೊಳ್ಳುತ್ತಾರೆ. ಐತಿಹಾಸಿಕ ಚಿತ್ರಗಳು, ಪೊಲೀಸ್ ಪಾತ್ರಗಳು, ಬಯೋಪಿಕ್, ಕಾಮಿಡಿ ಚಿತ್ರಗಳು.. ಹೀಗೆ ಅಕ್ಷಯ್ ತಮ್ಮ ವಿಭಿನ್ನ ಬಗೆಯ ಚಿತ್ರಗಳ ಮೂಲಕ ವಿವಿಧ ವರ್ಗದ ಪ್ರೇಕ್ಷಕರನ್ನು ತಲುಪುತ್ತಾರೆ. ಇದೀಗ ಅವರ ಹೊಸ ಚಿತ್ರ ‘ಬಚ್ಚನ್ ಪಾಂಡೆ’ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
3.41 ನಿಮಿಷಗಳ ದೀರ್ಘ ಟ್ರೈಲರ್ಅನ್ನು ‘ಬಚ್ಚನ್ ಪಾಂಡೆ’ ತಂಡ ರಿಲೀಸ್ ಮಾಡಿದೆ. ಅಕ್ಷಯ್ ಕುಮಾರ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದ ತಾರಾ ನಟರ ದಂಡೇ ಚಿತ್ರದಲ್ಲಿದೆ. ಅಕ್ಷಯ್ ಕುಮಾರ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಸಿಕೊಂಡಿದ್ದು, ಗ್ಯಾಂಗ್ಸ್ಟರ್ ಆಗಿ ಅಬ್ಬರಿಸಿದ್ದಾರೆ. ಅಕ್ಷಯ್ ಗೆಟಪ್ ವಿಶೇಷವಾಗಿದೆ ಎನ್ನುವುದನ್ನು ಅವರ ಕಣ್ಣುಗಳನ್ನು ನೋಡಿಯೇ ತಿಳಿಯಬಹುದು.
ಚಿತ್ರದ ಟ್ರೈಲರ್ ಇಲ್ಲಿದೆ:
ಜಿಗರ್ಥಂಡ ರಿಮೇಕ್ ‘ಬಚ್ಚನ್ ಪಾಂಡೆ’:
ದಕ್ಷಿಣದ ಚಿತ್ರಗಳು ಬಾಲಿವುಡ್ನಲ್ಲಿ ರಿಮೇಕ್ ಆಗುವುದು ವಿಶೇಷವೇನಲ್ಲ. ಈ ಮೊದಲು ಬಚ್ಚನ್ ಪಾಂಡೆ ‘ವೀರಂ’ ಚಿತ್ರದ ರಿಮೇಕ್ ಎನ್ನಲಾಗಿತ್ತು. ಆದರೆ ನಂತರದಲ್ಲಿ ಇದು ‘ಜಿಗರ್ಥಂಡ’ದ ರಿಮೇಕ್ ಎನ್ನುವುದು ಖಚಿತವಾಯಿತು. ಇದಕ್ಕೆ ಟ್ರೈಲರ್ ಕೂಡ ಸಾಕ್ಷಿ ಒದಗಿಸಿದೆ. ಆದರೆ ಮೂಲ ಕತೆಗೂ ‘ಬಚ್ಚನ್ ಪಾಂಡೆ’ಗೂ ಸಾಕಷ್ಟು ವ್ಯತ್ಯಾಸವಿರುವುದೂ ಟ್ರೈಲರ್ನಲ್ಲಿ ಗೋಚರಿಸುತ್ತದೆ.
ಮೂಲ ತಮಿಳಿನಲ್ಲಿ ತೆರೆಕಂಡಿದ್ದ ‘ಜಿಗರ್ಥಂಡ’ವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದರು. ಸಿದ್ಧಾರ್ಥ್ ನಟನೆಯ ಆ ಚಿತ್ರ ದೊಡ್ಡ ಹಿಟ್ ಆಗಿದ್ದಲ್ಲದೇ ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ಇದೀಗ ಬಚ್ಚನ್ ಪಾಂಡೆಯಲ್ಲಿ ಸಿದ್ಧಾರ್ಥ್ ನಟಿಸಿದ್ದ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕೂಡ ಇದೇ ಹೆಸರಿನಲ್ಲಿ ರಿಮೇಕ್ ಆಗಿದ್ದ ಚಿತ್ರದಲ್ಲಿ ರವಿಶಂಕರ್, ರಾಹುಲ್ ನಟಿಸಿದ್ದರು. ಕನ್ನಡದಲ್ಲೂ ಚಿತ್ರ ಗೆದ್ದಿತ್ತು.
ಪ್ರಸ್ತುತ ಹಿಂದಿಯಲ್ಲಿ ತೆರೆಗೆ ಬರಲಿರುವ ‘ಬಚ್ಚನ್ ಪಾಂಡೆ’ಯನ್ನು ಪ್ರೇಕ್ಷಕರು ಹೇಗೆ ಎದುರುಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ‘ಬಚ್ಚನ್ ಪಾಂಡೆ’ ಚಿತ್ರವನ್ನು ಫರ್ಹಾದ್ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಮಾರ್ಚ್ 18ರಂದು ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ:
ನಿಜ ಜೀವನದಲ್ಲೂ ಗಂಗೂಬಾಯಿ ರೀತಿ ಬದಲಾದ ಆಲಿಯಾ; ಬಾಯ್ಫ್ರೆಂಡ್ ರಣಬೀರ್ ಕಪೂರ್ಗೆ ಕಿರಿಕಿರಿ
‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್ ಕೊಟ್ಟಿಲ್ಲ’; ಇನ್ಸೈಡ್ ಮಾಹಿತಿ ಬಹಿರಂಗ ಪಡಿಸಿದ ಧನಂಜಯ