‘ಮದುವೆ ಹಾಲ್ನಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡಿದ್ರು’; ತಂದೆ ಕುರಿತು ಬಯೋಪಿಕ್ ಮಾಡಲು ಮುಂದಾದ ದೀಪಿಕಾ
ದೀಪಿಕಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರಕಾಶ್ ಪಡುಕೋಣೆಯನ್ನು ತುಂಬಾನೇ ಹತ್ತಿರದಿಂದ ನೋಡಿರುವುದಕ್ಕೆ ಸಿನಿಮಾದ ಕಥೆಯನ್ನು ದೀಪಿಕಾ ಅವರೇ ಬರೆಯಬಹುದು ಎನ್ನಲಾಗುತ್ತಿದೆ.
ಹಿಂದಿ ಸೇರಿದಂತೆ ಬಹುತೇಕ ಚಿತ್ರರಂಗದಲ್ಲಿ ಬಯೋಪಿಕ್ (Biopic) ಮಾಡುವ ಟ್ರೆಂಡ್ ಆರಂಭವಾಗಿದೆ. ಕ್ರೀಡಾ ಪಟುಗಳು, ರಾಜಕಾರಣಿಗಳು, ಸಿನಿಮಾ ಮಂದಿ ಸೇರಿ ದೊಡ್ಡ ಸಾಧನೆ ಮಾಡಿದವರ ಕುರಿತು ಬಯೋಪಿಕ್ ಮಾಡಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ಕುರಿತ ‘ಥಲೈವಿ’ ಸೇರಿ ಸಾಕಷ್ಟು ಬಯೋಪಿಕ್ಗಳು ಬಿಡುಗಡೆ ಆಗಿವೆ. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುವುದರಲ್ಲಿದೆ. ದೀಪಿಕಾ ಪಡುಕೋಣೆ (Deepika Padukone) ಅವರು ತಂದೆ ಪ್ರಕಾಶ್ ಪಡುಕೋಣೆ ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ಪ್ರಕಾಶ್ ಪಡುಕೋಣೆ (Prakash Padukone) ಬ್ಯಾಡ್ಮಿಂಟನ್ ಆಟಗಾರನಾಗಿದ್ದರು. ವಿಶ್ವಮಟ್ಟದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಈ ಬಗ್ಗೆ ದೀಪಿಕಾಗೆ ಹೆಮ್ಮೆ ಇದೆ. ಅವರು ಮಾಡಿದ ಸಾಧನೆ, ಅವರು ಕ್ರೀಡಾ ಜಗತ್ತಿಗೆ ನೀಡಿದ ಕೊಡುಗೆ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದನ್ನು ಜಗತ್ತಿನ ಮುಂದೆ ತೆರೆದಿಡಬೇಕು ಎಂಬುದು ದೀಪಿಕಾ ಆಸೆ. ಹೀಗಾಗಿ, ಅವರು ತಂದೆ ಕುರಿತು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.
‘1983ರಲ್ಲಿ ಟೀಂ ಇಂಡಿಯಾ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಇದರಿಂದ ಭಾರತದ ಕೀರ್ತಿ ಹೆಚ್ಚಿತ್ತು. ಅದಕ್ಕೂ ಮೊದಲು ಕ್ರೀಡೆಯ ವಿಚಾರದಲ್ಲಿ ವಿಶ್ವದ ಮ್ಯಾಪ್ನಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದು ನನ್ನ ತಂದೆ. ಪ್ರಕಾಶ್ ಪಡುಕೋಣೆ 1981ರಲ್ಲಿ ಬ್ಯಾಡ್ಮಿಂಟನ್ನಲ್ಲಿ ವರ್ಡ್ ಚಾಂಪಿಯನ್ಶಿಪ್ ಗೆದ್ದಿದ್ದರು’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ ದೀಪಿಕಾ ಪಡುಕೋಣೆ.
‘ನಮ್ಮ ತಂದೆಗೆ ಬ್ಯಾಂಡ್ಮಿಟನ್ಅನ್ನು ಕಲ್ಯಾಣ ಮಂಟಪದ ಹಾಲ್ನಲ್ಲಿ ಹೇಳಿಕೊಡಲಾಗಿತ್ತು. ಅದುವೇ ನಮ್ಮ ತಂದೆಯ ಬ್ಯಾಡ್ಮಿಂಟನ್ ಕೋರ್ಟ್. ತಮ್ಮ ಅನಾನುಕೂಲತೆಗಳನ್ನೇ ಅನುಕೂಲತೆಯನ್ನಾಗಿ ಮಾಡಿಕೊಂಡರು ನನ್ನ ತಂದೆ. ಇಂದಿನ ಭಾರತದ ಕ್ರೀಡಾಪಟುಗಳು ಹೊಂದಿರುವ ಸೌಕರ್ಯಗಳು ಅಂದು ನನ್ನ ಅಪ್ಪನಿಗೆ ಸಿಕ್ಕಿದ್ದರೆ ಅವರು ಇನ್ನೂ ಯಶಸ್ಸು ಕಾಣುತ್ತಿದ್ದರು’ ಎಂದಿದ್ದಾರೆ ದೀಪಿಕಾ.
ದೀಪಿಕಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರಕಾಶ್ ಪಡುಕೋಣೆಯನ್ನು ತುಂಬಾನೇ ಹತ್ತಿರದಿಂದ ನೋಡಿರುವುದಕ್ಕೆ ಸಿನಿಮಾದ ಕಥೆಯನ್ನು ದೀಪಿಕಾ ಅವರೇ ಬರೆಯಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ತೆರೆಗೆ ಬಂದ ‘83’ ಸಿನಿಮಾಗೆ ದೀಪಿಕಾ ಕೂಡ ಬಂಡವಾಳ ಹೂಡಿದ್ದರು. ಪ್ರಕಾಶ್ ಪಡುಕೋಣೆ ಕುರಿತ ಬಯೋಪಿಕ್ಅನ್ನು ದೀಪಿಕಾ ಅವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ ನಟನೆಯ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಪ್ರಭಾಸ್-ಅಮಿತಾಭ್ ಬಚ್ಚನ್ ಅಭಿನಯದ ‘ಪ್ರಾಜೆಕ್ಟ್ ಕೆ’ ಚಿತ್ರಕ್ಕೂ ದೀಪಿಕಾ ಹೀರೋಯಿನ್. ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ದೀಪಿಕಾ ಸಿನಿಮಾವನ್ನು ಅನೇಕರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೊಟ್ಟಿದ್ದಾರೆ.
ಇದನ್ನೂ ಓದಿ: Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..
‘ಸಿನಿಮಾ ರಿಲೀಸ್ ಡೇಟ್ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?