
ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 2022ರಲ್ಲಿ ತೆರೆಕಂಡ, ಐತಿಹಾಸಿಕ ಕಥಾಹಂದರದ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಆ ಸಮಯದಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಧರಿಸಿದ್ದ ನಕಲಿ ಮೀಸೆ ಭಾರಿ ಟೀಕೆಗೆ ಗುರಿಯಾಗಿತ್ತು. ಈಗ ಸುಮಾರು 4 ವರ್ಷಗಳ ನಂತರ ಅಕ್ಷಯ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಕ್ಷಯ್, ನಕಲಿ ಮೀಸೆ ಬಳಸಲು ಇದ್ದ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಸಿನಿಮಾಕ್ಕಾಗಿ ಅಕ್ಷಯ್ ಕುಮಾರ್ ಹೆಚ್ಚು ಸಮಯ ಮೀಸಲಿಡುವುದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಏಕಕಾಲಕ್ಕೆ ಹಲವು ಸಿನಿಮಾಗಳಲ್ಲಿ, ಹಲವು ಲುಕ್‌ಗಳಲ್ಲಿ ಕೆಲಸ ಮಾಡುತ್ತಿರುತ್ತೇನೆ. ಉದಾಹರಣೆಗೆ, ಈಗ ನಾನು ಗಡ್ಡ ಬಿಟ್ಟಿದ್ದೇನೆ. ಇದನ್ನು ಬೆಳೆಸಲು ನನಗೆ ಆರು ವಾರಗಳು ಬೇಕಾಯಿತು ಮತ್ತು ಆ ಸಮಯದಲ್ಲಿ ನಾನು ಯಾವುದೇ ಕೆಲಸ ಮಾಡಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, ‘ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಕಥೆಗೆ ಒಂದು ವಿಶಿಷ್ಟವಾದ ಮೀಸೆಯ ಅವಶ್ಯಕತೆಯಿತ್ತು. ಆದರೆ ಅಂತಹ ಮೀಸೆ ನನ್ನ ಮುಖದ ಮೇಲೆ ಸಹಜವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ಹಾಗಾಗಿ ನಕಲಿ ಮೀಸೆ ಬಳಸಬೇಕಾಯಿತು. ಅದು ನೋಡಲು ಚೆನ್ನಾಗಿರಲಿಲ್ಲ ಅಥವಾ ಜನರಿಗೆ ಇಷ್ಟವಾಗಿಲ್ಲದಿರಬಹುದು. ಆದರೆ ಅಂತಿಮವಾಗಿ ಇದು ಕೇವಲ ಅಭಿನಯವಷ್ಟೇ’ ಎಂದಿದ್ದಾರೆ.
ಚಿತ್ರದ ಲುಕ್ ಬಗ್ಗೆ ಅಸಮಾಧಾನಗೊಂಡಿದ್ದ ಅಭಿಮಾನಿಗಳ ಬಗ್ಗೆ ಅಕ್ಷಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ‘ಒಂದೊಮ್ಮೆ ಜನರಿಗೆ ಆ ಲುಕ್ ಇಷ್ಟವಾಗದಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಕೆಲವು ಬಾರಿ ಅಂತಹ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಆದರೆ ಅದು ವಿಫಲವಾದರೆ ನಾವೇ ಜವಾಬ್ದಾರರು’ ಎಂದು ಅವರು ನೇರವಾಗಿ ಹೇಳಿದ್ದಾರೆ. ನಕಲಿ ಮೀಸೆಯ ಕಾರಣಕ್ಕೆ ಅವರು ಜನರಲ್ಲಿ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ
‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ 2022ರ ಜೂನ್ 3ರಂದು ಬಿಡುಗಡೆ ಆಗಿತ್ತು. ಚಂದ್ರಪ್ರಕಾಶ್ ದ್ವಿವೇದಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅಂದಾಜು 175 ಕೋಟಿ ರೂಪಾಯಿ ಬಜೆಟ್ನಲ್ಲಿ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ನಿರ್ಮಾಣ ಮಾಡಿತ್ತು. ಆದರೆ ವಿಶ್ವಾದ್ಯಂತ ಆ ಸಿನಿಮಾ ಗಳಿಸಿದ್ದು ಕೇವಲ 90 ಕೋಟಿ ರೂಪಾಯಿ ಮಾತ್ರ. ಆ ಸಿನಿಮಾದಲ್ಲಿ ಮಾನುಷಿ ಚಿಲ್ಲರ್, ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.