ಬಾಲಿವುಡ್‌ನ ಬ್ಯುಸಿ ನಟರಲ್ಲಿ ಅಕ್ಷಯ್ ಕುಮಾರ್ (Akshay Kumar) ಒಬ್ಬರು. ಅವರ ನಟನೆಯ ಚಿತ್ರಗಳು ಬಿಗ್ ಬಜೆಟ್‌ನಲ್ಲಿ ತಯಾರಾದರೂ ಕೂಡ ಅಕ್ಷಯ್ ಇತರ ನಟರಂತೆ ಒಂದೇ ಚಿತ್ರಕ್ಕೆ ಹಲವು ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ. ಏನಿಲ್ಲವೆಂದರೂ ವರ್ಷಕ್ಕೆ ಅವರ ಮೂರು ಚಿತ್ರಗಳು ರಿಲೀಸ್ ಆಗುತ್ತವೆ. ಇದೇ ಕಾರಣಕ್ಕೆ ನಿರ್ಮಾಪಕರಿಗೂ ಅಕ್ಷಯ್ ಅಚ್ಚುಮೆಚ್ಚು. ಬಾಕ್ಸಾಫೀಸ್ ಕಲೆಕ್ಷನ್ ನಲ್ಲೂ ಅಕ್ಷಯ್ ಚಿತ್ರಗಳು ಹಿಂದೆ ಬೀಳುವುದಿಲ್ಲ. ಅವರ ಹಿಂದಿನ ಚಿತ್ರ ‘ಸೂರ್ಯವಂಶಿ’ ಕೊವಿಡ್ ನಡುವೆಯೂ 200 ಕೋಟಿ ರೂಗೂ ಅಧಿಕ ಹಣವನ್ನು ಗಳಿಸಿತ್ತು. ಇದೀಗ ಅಕ್ಷಯ್ ಹೊಸ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಇದೇ ವೇಳೆ ಅವರು ತಾವೇಕೆ ಸಿನಿಮಾ ಮಾಡುತ್ತಿರುವುದು ಎಂಬುದರ ಬಗ್ಗೆ ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. 54 ವರ್ಷದ ಅಕ್ಷಯ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಅವರ ಮುಂದಿನ ಚಿತ್ರ ‘ಬಚ್ಚನ್ ಪಾಂಡೆ’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.
ಬೆಳಗ್ಗೆ ಮುಂಚೆಯೇ ಶೂಟಿಂಗ್ ಗೆ ತೆರಳುವುದು ತಮಗಿಷ್ಟ ಎಂದು ಹೇಳಿಕೊಂಡಿರುವ ಅಕ್ಷಯ್, ಪ್ರತಿ ಭಾನುವಾರ ಬಿಡುವು ಪಡೆಯುತ್ತಾರಂತೆ. ಪ್ರತಿದಿನವೂ ಕೆಲಸ ಮಾಡುವುದರಿಂದ ಸಹಜವಾಗಿಯೇ ಹಲವು ಚಿತ್ರಗಳು ಬೆನ್ನಿಗಿರುತ್ತವೆ ಎಂದಿದ್ದಾರೆ ಅಕ್ಷಯ್. ತಾನೇಕೆ ಸಿನಿಮಾ ಮಾಡುತ್ತೇನೆ ಎಂದು ವಿವರಿಸಿದ ಅಕ್ಷಯ್, “ಕೊವಿಡ್ ಸಂದರ್ಭದಲ್ಲಿಯೂ ಎಲ್ಲರೂ ಕೆಲಸ ಮಾಡಿದ್ದಾರೆ. ಕಾರಣ, ಎಲ್ಲರಿಗೂ ಹಣದ ಅವಶ್ಯಕತೆ ಇದೆ. ನನಗೆ ಜೀವನದಲ್ಲಿ ಎಲ್ಲವೂ ಇದೆ. ಒಳ್ಳೆಯ ಬದುಕನ್ನು ನಡೆಸುತ್ತಿದ್ದೇನೆ. ಆರಾಮವಾಗಿ ಮನೆಯಲ್ಲಿ ಕುಳಿತೂ ದಿನಗಳನ್ನು ಕಳೆಯಬಹುದು. ಆದರೆ ಹಾಗೆ ಮಾಡಿದರೆ ಕೆಲಸ ಮಾಡಬೇಕು, ಹಣ ಗಳಿಸಬೇಕು ಎಂದು ಅಂದುಕೊಂಡವರ ಕತೆ ಏನು?” ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, “ನಾನೀಗ ಹಣಕ್ಕಾಗಿ ಅಲ್ಲ, ಆಸಕ್ತಿಯ ಕಾರಣದಿಂದ ಸಿನಿಮಾ ಮಾಡುತ್ತಿದ್ದೇನೆ. ನನಗೆ ಯಾವಾಗ ಆಸಕ್ತಿ ಹೊರಟುಹೋಗುತ್ತದೋ ಆಗ ಕೆಲಸ ನಿಲ್ಲಿಸುತ್ತೇನೆ” ಎಂದು ಅಕ್ಷಯ್ ಹೇಳಿದ್ದಾರೆ.
ಮಾರ್ಚ್ 18ರಂದು ‘ಬಚ್ಚನ್ ಪಾಂಡೆ’ ರಿಲೀಸ್ ಆಗಲಿದೆ. ‘ಜಿಗರ್ಥಂಡ’ ಚಿತ್ರದ ರಿಮೇಕ್ ‘ಬಚ್ಚನ್ ಪಾಂಡೆ’ ಎನ್ನಲಾಗಿದೆ. ಹಿಂದಿಗೆ ಅನುಗುಣವಾಗಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಚಿತ್ರವನ್ನು ಫರ್ಹಾದ್ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಕೃತಿ ಸನೋನ್ ಮೊದಲಾದ ತಾರೆಯರು ‘ಬಚ್ಚನ್ ಪಾಂಡೆ’ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.
ಅಕ್ಷಯ್ ಬತ್ತಳಿಕೆಯಲ್ಲಿ ಸಾಲು ಸಾಲು ಚಿತ್ರಗಳಿವೆ. ‘ರಕ್ಷಾ ಬಂಧನ್’, ‘ರಾಮಸೇತು’, ‘ಮಿಷನ್ ಸಿಂಡ್ರೆಲ್ಲಾ’, ‘ಗೂರ್ಖಾ’, ‘ಓ ಮೈ ಗಾಡ್ 2’ ಮೊದಲಾದ ಚಿತ್ರಗಳು ಅನೌನ್ಸ್ ಆಗಿದ್ದು, ಹಲವು ಚಿತ್ರಗಳ ಕೆಲಸಗಳು ನಡೆಯುತ್ತಿವೆ. ಅಮೆಜಾನ್ ಸೀರೀಸ್ ಆದ ‘ದಿ ಎಂಡ್’ನಲ್ಲೂ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:
‘ರಾಧೆ ಶ್ಯಾಮ್’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್; ಈಗಾಗಲೇ ಹರಿದು ಬಂದಿದ್ದು ಎಷ್ಟು ಕೋಟಿ ರೂಪಾಯಿ?