‘ಉಚಿತ ಟೀ, ಸಮೋಸಾ ಕೊಡ್ತೀವಿ, ಸಿನಿಮಾ ನೋಡೋಕೆ ಬನ್ನಿ’: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಹೀನಾಯ ಸ್ಥಿತಿ

|

Updated on: Jul 14, 2024 | 7:00 PM

‘ಸರ್ಫಿರಾ’ ಸಿನಿಮಾ ಜುಲೈ 12ರಂದು ಬಿಡುಗಡೆ ಆಯಿತು. ಅಕ್ಷಯ್​ ಕುಮಾರ್​ ನಟನೆಯ ಈ ಸಿನಿಮಾ ಫ್ಲಾಪ್​ ಆಗಿದೆ. ಮೊದಲ ದಿನ 2.50 ಕೋಟಿ ರೂ. ಹಾಗೂ ಎರಡನೇ ದಿನ 4.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸ್ಟಾರ್​ ನಟರ ಸಿನಿಮಾಗೆ ಇದು ಅತಿ ಕಳಪೆ ನಂಬರ್​. ಹಾಗಾಗಿ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಪ್ರೇಕ್ಷಕರಿಗೆ ಟೀ ಮತ್ತು ಸಮೋಸಾದ ಆಸೆ ತೋರಿಸಲಾಗಿದೆ.

‘ಉಚಿತ ಟೀ, ಸಮೋಸಾ ಕೊಡ್ತೀವಿ, ಸಿನಿಮಾ ನೋಡೋಕೆ ಬನ್ನಿ’: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಹೀನಾಯ ಸ್ಥಿತಿ
ಅಕ್ಷಯ್​ ಕುಮಾರ್​, ಸಮೋಸಾ, ಟೀ
Follow us on

ನಟ ಅಕ್ಷಯ್​ ಕುಮಾರ್​ ಅವರು ಸತತ ಸೋಲುಗಳನ್ನು ಕಾಣುತ್ತಿದ್ದಾರೆ. ಕಥೆ ಮತ್ತು ಪಾತ್ರಗಳ ತಪ್ಪಾದ ಆಯ್ಕೆಯಿಂದಾಗಿ ಅವರಿಗೆ ಈ ಸ್ಥಿತಿ ಬಂದಿದೆ. ಅಕ್ಷಯ್​ ಕುಮಾರ್​ ನಟಿಸಿದ ‘ಸರ್ಫಿರಾ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಕಳಪೆ ಕಲೆಕ್ಷನ್ ಮಾಡುತ್ತಿದೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಆದ ಈ ಚಿತ್ರ ಹೀನಾಯವಾಗಿ ಸೋತಿದೆ. ಹಾಗಾಗಿ ಪ್ರೇಕ್ಷಕರನ್ನು ಸೆಳೆಯಲು ಉಚಿತ ಟೀ ಮತ್ತು ಸಮೋಸಾ ನೀಡಲು ಮಲ್ಟಿಪ್ಲೆಕ್ಸ್​ನವರು ನಿರ್ಧರಿಸಿದ್ದಾರೆ. ಸಿನಿಮಾ ಸೋತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಮೊದಲ ದಿನ ಸ್ಟಾರ್​ ಸಿನಿಮಾಗಳು ಸಿಕ್ಕಾಪಟ್ಟೆ ಕಲೆಕ್ಷನ್​ ಮಾಡಬೇಕು. ಆದರೆ ‘ಸರ್ಫಿರಾ’ ಸಿನಿಮಾ ಮೊದಲ ದಿನವಾದ ಜುಲೈ 12ರಂದು ಕೇವಲ 2.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಎರಡನೇ ದಿನ 4.50 ಕೋಟಿ ರೂಪಾಯಿ ಗಳಿಸಿತು. ಹೇಗಾದರೂ ಮಾಡಿ ಭಾನುವಾರ (ಜುಲೈ 14) ಸಿನಿಮಾದ ಕಲೆಕ್ಷನ್​ ಹೆಚ್ಚಿಸಬೇಕು ಎಂಬುದು ಚಿತ್ರತಂಡದ ಗುರಿ. ಅದಕ್ಕಾಗಿ ಮಲ್ಟಿಪ್ಲೆಕ್ಸ್​ನವರು ಪ್ರೇಕ್ಷಕರಿಗೆ ಟೀ, ಸಮೋಸಾದ ಆಸೆ ತೋರಿಸಿದ್ದಾರೆ.

‘ಪಿವಿಆರ್​ ಐನಾಕ್ಸ್​’ ಮಲ್ಟಿಪ್ಲೆಕ್ಸ್​ ಕಡೆಯಿಂದ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿದೆ. ‘ಸರ್ಫಿರಾ ಸಿನಿಮಾ ನೋಡಲು ಬರುವವರಿಗೆ 2 ಸಮೋಸಾ, ಒಂದು ಟೀ ಹಾಗೂ ಒಂದು ಲಗೇಜ್​ ಟ್ಯಾಗ್​ ಉಚಿತವಾಗಿ ನೀಡಲಾಗುತ್ತದೆ’ ಎಂದು ತಿಳಿಸಲಾಗಿದೆ. ಅಕ್ಷಯ್​ ಕುಮಾರ್​ ಅವರ ಸಿನಿಮಾಗೆ ಇಂಥ ಸ್ಥಿತಿ ಬಂದಿರುವುದು ನಿಜಕ್ಕೂ ಹೀನಾಯ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಸಿನಿಮಾಗಳನ್ನು ನಿರ್ಮಿಸಿ, ಆಸ್ತಿ ಕಳೆದುಕೊಂಡ ನಿರ್ಮಾಪಕ

‘ಸರ್ಫಿರಾ’ ಸಿನಿಮಾಗೆ ಸುಧಾ ಕೊಂಗರಾ ಅವರು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಇದು ತಮಿಳಿನ ‘ಸೂರರೈ ಪೋಟ್ರು’ ಸಿನಿಮಾದ ಹಿಂದಿ ರಿಮೇಕ್​. ತಮಿಳಿನ ಆ ಸಿನಿಮಾ ಈ ಮೊದಲೇ ಹಿಂದಿಗೆ ಡಬ್​ ಆಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಅದನ್ನು ಮತ್ತೆ ಹಿಂದಿಗೆ ರಿಮೇಕ್​ ಮಾಡಿದ್ದೇ ದೊಡ್ಡ ತಪ್ಪು. ಈಗಾಗಲೇ ಸಿನಿಮಾದ ಕಥೆ ಎಲ್ಲರಿಗೂ ಗೊತ್ತಿರುವುದರಿಂದ ‘ಸರ್ಫಿರಾ’ ಸಿನಿಮಾ ನೋಡಲು ಪ್ರೇಕ್ಷಕರು ಆಸಕ್ತಿ ತೋರಿಸಿಲ್ಲ.

ಇದು ರಿಯಲ್​ ಲೈಫ್​ ಘಟನೆಯನ್ನು ಆಧರಿಸಿದ ಸಿನಿಮಾ. ಇದರಲ್ಲಿ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ ಅವರ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡಿದ್ದಾರೆ. ಪರೇಶ್​ ರಾವಲ್​, ದಿಶಾ ಮದನ್​, ಪ್ರಕಾಶ್​ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಕಾಲಿವುಡ್​ ನಟ ಸೂರ್ಯ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ವಿಫಲವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.