ಅಕ್ಷಯ್​ ಕುಮಾರ್​ ಸಿನಿಮಾಗಳನ್ನು ನಿರ್ಮಿಸಿ, ಆಸ್ತಿ ಕಳೆದುಕೊಂಡ ನಿರ್ಮಾಪಕ

‘ಬೆಲ್​ಬಾಟಂ’, ‘ಕಟ್​ಪುಟ್ಲಿ’, ‘ಮಿಷನ್ ರಾಣಿಗಂಜ್​’, ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗಳ ಸೋಲಿನ ಬಳಿಕ ಅವರಿಗೆ 250 ಕೋಟಿ ರೂಪಾಯಿ ಸಾಲ ಆಗಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..

ಅಕ್ಷಯ್​ ಕುಮಾರ್​ ಸಿನಿಮಾಗಳನ್ನು ನಿರ್ಮಿಸಿ, ಆಸ್ತಿ ಕಳೆದುಕೊಂಡ ನಿರ್ಮಾಪಕ
ಅಕ್ಷಯ್​ ಕುಮಾರ್​, ವಶು ಭಗ್ನಾನಿ, ಜಾಕಿ ಭಗ್ನಾನಿ
Follow us
| Updated By: ಮದನ್​ ಕುಮಾರ್​

Updated on: Jun 24, 2024 | 2:34 PM

ಬಾಲಿವುಡ್​ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಪೂಜಾ ಎಂಟರ್​ಟೇನ್ಮೆಂಟ್​’ (Pooja Entertainment) ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 1995ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಈ ನಿರ್ಮಾಣ ಸಂಸ್ಥೆಯು ಹಲವು ಹಿಟ್​ ಸಿನಿಮಾಗಳಿಗೆ ಬಂಡವಾಳ ಹೂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆಗೆ ಅದೃಷ್ಟ ಕೈಕೊಟ್ಟಿದೆ. ‘ಪೂಜಾ ಎಂಟರ್​ಟೇನ್ಮೆಂಟ್​’ ಮಾಲಿಕರಾದ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರು ಸಾಲದ ಸುಳಿಯಲ್ಲಿ ಮುಳುಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಅಕ್ಷಯ್​ ಕುಮಾರ್​ (Akshay Kumar) ನಟನೆಯ ಸಿನಿಮಾಗಳು! ಅಚ್ಚರಿ ಎನಿಸಿದರೂ ಇದು ಸತ್ಯ. ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗಳಿಗೆ ಹಣ ಹೂಡಿದ್ದ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ (Jackky Bhagnani) ಅವರು ಭಾರಿ ನಷ್ಟ ಅನುಭವಿಸಿದ್ದಾರೆ.

ಮೂಲಗಳ ಪ್ರಕಾರ, ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಒಟ್ಟು ಸಾಲ 250 ಕೋಟಿ ರೂಪಾಯಿ ಮೀರಿದೆ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸಂಬಳ ನೀಡಲು ಕೂಡ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ಮುಂಬೈನಲ್ಲಿ ಇರುವ 7 ಮಹಡಿ ಕಟ್ಟಡವನ್ನು ಮಾರಿಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೇ ಸುದ್ದಿ ಆಗಿದೆ. ಶೇಕಡ 80ರಷ್ಟು ಕೆಲಸಗಾರರನ್ನು ಮನೆಗೆ ಕಳಿಸಿದ್ದಾರೆ. ಸಾಲು ಸಾಲು ಸಿನಿಮಾಗಳು ಸೋತಿದ್ದರಿಂದಲೇ ಈ ಪರಿಸ್ಥಿತಿ ಬಂದಿದೆ.

ಒಂದು ಕಾಲದಲ್ಲಿ ಅಕ್ಷಯ್​ ಕುಮಾರ್​ ಅವರ ಸಿನಿಮಾಗಳ ಮೇಲೆ ಬಂಡವಾಳ ಹೂಡಿದರೆ, ಯಾವುದೇ ಕಾರಣಕ್ಕೂ ನಷ್ಟ ಆಗುವುದಿಲ್ಲ ಎಂಬ ನಂಬಿಕೆ ಎಲ್ಲ ನಿರ್ಮಾಪಕರಿಗೆ ಇತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಅಕ್ಷಯ್​ ಕುಮಾರ್​ ಅಭಿನಯಿಸಿದ ಹಲವು ಸಿನಿಮಾಗಳು ಸೋಲು ಕಂಡಿವೆ. ಹಾಗಿದ್ದರೂ ಕೂಡ ಅವರ ಮೇಲೆ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರು ನೂರಾರು ಕೋಟಿ ರೂಪಾಯಿ ಸುರಿದು ನಷ್ಟ ಮಾಡಿಕೊಂಡಿದ್ದಾರೆ.

2021ರಲ್ಲಿ ಬಿಡುಗಡೆ ಆದ ‘ಬೆಲ್​ ಬಾಟಂ’ ಸಿನಿಮಾಗೆ ಬಂಡವಾಳ ಹೂಡಿದ್ದು ಇದೇ ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆ. ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾ ಸೋಲು ಅನುಭವಿಸಿತು. ನಂತರ ಅಕ್ಷಯ್​ ಕುಮಾರ್​ ನಟನೆಯ ‘ಕಟ್​ಪುಟ್ಲಿ’ ಸಿನಿಮಾಗೆ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಬಂಡವಾಳ ಹೂಡಿದರು. ನೇರವಾಗಿ ಒಟಿಟಿಯಲ್ಲಿ ತೆರೆಕಂಡ ಆ ಸಿನಿಮಾ ಕೂಡ ಸದ್ದು ಮಾಡಲಿಲ್ಲ. ಆದರೂ ಅಕ್ಷಯ್​ ಕುಮಾರ್​ ಮೇಲೆ ನಂಬಿಕೆ ಇಡುವುದನ್ನು ಈ ನಿರ್ಮಾಪಕರು ನಿಲ್ಲಿಸಲಿಲ್ಲ. ಅದರಿಂದ ಭಾರಿ ದೊಡ್ಡ ನಷ್ಟ ಆಯಿತು.

ಇದನ್ನೂ ಓದಿ: ಸ್ಫೂರ್ತಿದಾಯಕ ಕಥೆ ನೀಡಿದ್ದಕ್ಕೆ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ಗೆ ಅಕ್ಷಯ್​ ಕುಮಾರ್​ ಧನ್ಯವಾದ

ನೈಜ ಘಟನೆ ಆಧಾರಿತ ‘ಮಿಷನ್​ ರಾಣಿಗಂಜ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ನಟಿಸಿದರು. ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಕೂಡ ಮತ್ತದೇ ‘ಪೂಜಾ ಎಂಟರ್​ಟೇನ್ಮೆಂಟ್​’. ಆ ಸಿನಿಮಾ ಕೂಡ ಸೋಲು ಅನುಭವಿಸಿತು. ಆಗಲಾದರೂ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಎಚ್ಚೆತ್ತುಕೊಳ್ಳಬಹುದಿತ್ತು. ಆದರೆ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಹಣ ಹೂಡುವ ಮೂಲಕ ದೊಡ್ಡ ತಪ್ಪು ಮಾಡಿದರು.

ಸಿಕ್ಕಾಪಟ್ಟೆ ಅದ್ದೂರಿಯಾಗಿ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾವನ್ನು ನಿರ್ಮಾಣ ಮಾಡಲಾಯಿತು. ಅಂದಾಜು 350 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸುರಿಯಲಾಯಿತು. ಅಕ್ಷಯ್​ ಕುಮಾರ್​, ಟೈಗರ್ ಶ್ರಾಫ್​, ಪೃಥ್ವಿರಾಜ್​ ಸುಕುಮಾರನ್​ ಮುಂತಾದವರು ನಟಿಸಿದ್ದ ಈ ಸಿನಿಮಾ ಭಾರಿ ಅದ್ದೂರಿಯಾಗಿ ಮೂಡಿಬಂದಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಹೀನಾಯವಾಗಿ ಸೋತಿತು. ಅಷ್ಟು ದೊಡ್ಡ ಹೊಡೆತ ಬಿದ್ದಿದ್ದರಿಂದ ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆ ಚೇತರಿಸಿಕೊಳ್ಳುವುದು ಕಷ್ಟ ಆಯಿತು.

ಇದನ್ನೂ ಓದಿ: 250 ಕೋಟಿ ರೂ. ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಗಂಡ; ಆಸ್ತಿ ಮಾರಾಟ

ಇದರ ನಡುವೆ ಟೈಗರ್​ ಶ್ರಾಫ್​ ಅವರಿಂದಲೂ ‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಗೆ ನಷ್ಟ ಆಗಿದೆ. ಆ್ಯಕ್ಷನ್​ ಹೀರೋ ಆಗಿ ಗುರುತಿಸಿಕೊಂಡ ಈ ನಟನ ಮೇಲೆ ನಂಬಿಕೆ ಇಟ್ಟು ‘ಗಣಪತ್​’ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಲಾಗಿತ್ತು. ಆದರೆ ನಿರ್ಮಾಪಕರ ನಿರೀಕ್ಷೆ ಸುಳ್ಳಾಯಿತು. 2023ರಲ್ಲಿ ತೆರೆಕಂಡ ಈ ಸಿನಿಮಾ ಕೂಡ ಬಾಕ್ಸ್​ ಆಫೀಸ್​ನಲ್ಲಿ ಕಳಪೆ ಪ್ರದರ್ಶನ ನೀಡಿತು. ಈ ಎಲ್ಲ ಕಾರಣಗಳಿಂದಾಗಿ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರು ಆಸ್ತಿ ಮಾರಿಕೊಂಡಿದ್ದಾರೆ.

ಜಾಕಿ ಭಗ್ನಾನಿ ಅವರನ್ನು ನಟಿ ರಕುಲ್ ಪ್ರೀತ್​ ಸಿಂಗ್​ ಮದುವೆ ಆಗಿದ್ದಾರೆ. 2024ರ ಫೆಬ್ರವರಿಯಲ್ಲಿ ಅವರು ಹಸೆಮಣೆ ಏರಿದ್ದರು. ಆದರೆ ಈಗ ಅವರ ಕುಟುಂಬದಲ್ಲಿ ಹಣಕಾಸಿನ ತೊಂದರೆ ಎದುರಾಗಿದೆ. ಸ್ಟಾರ್​ ನಟರನ್ನು ನಂಬಿ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಸಿನಿಮಾ ಮಾಡಿದ್ದಕ್ಕೆ 250 ಕೋಟಿ ರೂಪಾಯಿಗೂ ಅಧಿಕ ಸಾಲ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ