ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಇತ್ತೀಚಿನ ವರ್ಷಗಳಲ್ಲಿ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವ ವಿಧಾನ ಸಂಪೂರ್ಣ ಬದಲಾಗಿದೆ. ಬಯೋಪಿಕ್ (Biopic), ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸಿನಿಮಾಗಳಲ್ಲಿ ನಟಿಸೋಕೆ ಅಕ್ಷಯ್ ಕುಮಾರ್ ಮೊದಲ ಆದ್ಯತೆ ನೀಡುತ್ತಾರೆ. ಹಲವು ಬಯೋಪಿಕ್ಗಳಲ್ಲಿ ಅವರು ಈಗಾಗಲೇ ನಟಿಸಿದ್ದಾರೆ. ಈಗ ಅವರು ಮತ್ತೊಂದು ಬಯೋಪಿಕ್ನಲ್ಲಿ ನಟಿಸೋಕೆ ರೆಡಿ ಆಗುತ್ತಿದ್ದಾರೆ ಎನ್ನುವ ಮಾತು ಜೋರಾಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎನ್ನುವ ಕುತೂಹಲ ಮೂಡಿದೆ.
ಸೂರ್ಯ ಹೀರೋ ಆಗಿ ನಟಿಸಿದ್ದ, ಸುಧಾ ಕೊಂಗರ ನಿರ್ದೇಶನದ ತಮಿಳು ‘ಸೂರರೈ ಪೊಟ್ರು’ ಸಿನಿಮಾ ಕೊವಿಡ್ ಕಾರಣದಿಂದ 2020ರಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಆಸ್ಕರ್ ರೇಸ್ಗೂ ಈ ಸಿನಿಮಾ ಆಯ್ಕೆ ಆಗಿತ್ತು. ಕನ್ನಡಿಗ ಗೋಪಿನಾಥ್ ಜೀವನದ ಕಥೆ ಆಧರಿಸಿ ‘ಸೂರರೈ ಪೊಟ್ರು’ ತೆರೆಗೆ ಬಂದಿತ್ತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಕಡಿಮೆ ದರದಲ್ಲಿ ಸಾಮಾನ್ಯ ವ್ಯಕ್ತಿಗಳೂ ವಿಮಾನದಲ್ಲಿ ಸಂಚರಿಸಬೇಕು ಎಂದು ಕನಸು ಹೊತ್ತು ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಆರಂಭಿಸಿದ ಕನ್ನಡಿಗ ಗೋಪಿನಾಥ್ ಜೀವನದ ಕಥೆ ‘ಸೂರರೈ ಪೊಟ್ರು’. ಈ ಬಯೋಪಿಕ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈಗ ಈ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆ.
‘ಸೂರರೈ ಪೊಟ್ರು’ ಹಿಂದಿಗೆ ರಿಮೇಕ್ ಆಗುತ್ತಿರುವ ವಿಚಾರ ಹಲವು ಸಮಯದಿಂದ ಸುದ್ದಿಯಲ್ಲಿದೆ. ಈ ಮೊದಲು ಅಜಯ್ ದೇವಗನ್, ಹೃತಿಕ್ ರೋಷನ್, ಜಾನ್ ಅಬ್ರಾಹಂ ಮೊದಲಾದ ಹೆಸರು ಕೇಳಿ ಬಂದಿತ್ತು. ಈಗ ಅಕ್ಷಯ್ ಕುಮಾರ್ ಹೆಸರು ಮುನ್ನೆಲೆಗೆ ಬಂದಿದೆ. ಸೂರ್ಯ ಮಾಡಿದ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
‘ಸೂರರೈ ಪೊಟ್ರು’ ಹಿಂದಿ ರಿಮೇಕ್ನ ಕಥೆ ಉತ್ತರ ಭಾರತದ ಹಿನ್ನೆಲೆ ಹೊಂದಿರಲಿದೆಯಂತೆ. ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನ ಮಾಡಿದ್ದ ಈ ಚಿತ್ರವನ್ನು ಹಿಂದಿಯಲ್ಲೂ ಅವರೇ ನಿರ್ದೇಶನ ಮಾಡಲಿದ್ದಾರೆ. ಅಕ್ಷಯ್ ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸಗಳು ಮುಗಿದ ಬಳಿಕ ಈ ಚಿತ್ರದಲ್ಲಿ ಅವರು ಬ್ಯುಸಿ ಆಗಲಿದ್ದಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಅವರು ರಜೆಯ ಮಜಾ ಸವಿದಿದ್ದರು. ಮಗಳ ಜೊತೆ ರಣಥಂಬೋರ್ ರಾಷ್ಟ್ರೀಯ ಉದ್ಯಾನಕ್ಕೆ ಅವರು ಭೇಟಿ ನೀಡಿದ್ದು, ಅಲ್ಲಿನ ಪ್ರಾಣಿಗಳನ್ನು ಮುದ್ದಿಸಿದ್ದರು. ಮಗಳು ನಿತಾರಾ ಜೊತೆ ಸೇರಿಕೊಂಡು ಪ್ರಾಣಿಗಳಿಗೆ ಆಹಾರ ತಿನಿಸುತ್ತಿರುವ ವಿಡಿಯೋವನ್ನು ಅವರು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು. ‘ಈ ಮಣ್ಣಿನ ವಾಸನೆ, ಗೋವುಗಳಿಗೆ ಆಹಾರ ನೀಡೋದು, ಮರಗಳಿಂದ ಬೀಸುವ ತಂಗಾಳಿ.. ಇವುಗಳ ಅನುಭವನ್ನು ಮಕ್ಕಳಿಗೆ ನೀಡುವುದರಲ್ಲಿ ಏನೋ ಒಂಥರಾ ಖುಷಿ ಇದೆ. ನಾಳೆ ಆಕೆಗೆ ಕಾಡಿನಲ್ಲಿ ಹುಲಿ ಕಾಣಿಸಿದರೆ ಇನ್ನೂ ಸಂತೋಷವಾಗಲಿದೆ. ಸುಂದರವಾದ ರಣಥಂಬೋರ್ ಉದ್ಯಾನಕ್ಕೆ ಭೇಟಿ ನೀಡಿದ್ದೇವೆ. ಈ ರೀತಿಯ ಅದ್ಭುತವಾದ ಸ್ಥಳಗಳನ್ನು ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು’ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದರು.
ಇದನ್ನೂ ಓದಿ: ಅಕ್ಷಯ್ ಕುಮಾರ್ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ
175 ಕೋಟಿ ರೂ. ಎದುರಿಗಿಟ್ಟರೂ ಆಫರ್ ಒಪ್ಪಲಿಲ್ಲ ಅಕ್ಷಯ್ ಕುಮಾರ್; ಇದು ‘ಬಚ್ಚನ್ ಪಾಂಡೆ’ ತಾಕತ್ತು