‘ದೃಶ್ಯಂ 3’ ಚಿತ್ರದಲ್ಲಿ ಜೈದೀಪ್ ಪಾತ್ರಕ್ಕೆ ದೊಡ್ಡ ಟ್ವಿಸ್ಟ್

ದೃಶ್ಯಂ 3 ಚಿತ್ರದಿಂದ ಅಕ್ಷಯ್ ಖನ್ನಾ ನಿರ್ಗಮನವು ದೊಡ್ಡ ವಿವಾದ ಸೃಷ್ಟಿಸಿದೆ. ನಿರ್ಮಾಪಕ ಕುಮಾರ್ ಮಂಗತ್, ಅಕ್ಷಯ್ ವೃತ್ತಿಪರರಲ್ಲ ಎಂದು ಕಾನೂನು ನೋಟಿಸ್ ನೀಡಿದ್ದಾರೆ. ನಿರ್ದೇಶಕ ಅಭಿಷೇಕ್ ಪಾಠಕ್, ಜೈದೀಪ್ ಅಹ್ಲಾವತ್ ಹೊಸ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ, ಅಕ್ಷಯ್ ಬದಲಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ದೃಶ್ಯಂ 3’ ಚಿತ್ರದಲ್ಲಿ ಜೈದೀಪ್ ಪಾತ್ರಕ್ಕೆ ದೊಡ್ಡ ಟ್ವಿಸ್ಟ್
ಜೈದೀಪ್-ಅಕ್ಷಯ್
Edited By:

Updated on: Dec 31, 2025 | 8:38 AM

‘ಧುರಂಧರ್’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಕ್ಷಯ್ ಖನ್ನಾ ‘ದೃಶ್ಯಂ 3’ ಚಿತ್ರದಿಂದ ಹಿಂದೆ ಸರಿದರು. ಶೂಟಿಂಗ್ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ಚಿತ್ರದಿಂದ ಹೊರ ನಡೆದ ನಂತರ ನಿರ್ಮಾಪಕ ಕುಮಾರ್ ಮಂಗತ್ ಅಕ್ಷಯ್ ಮೇಲೆ ಕೋಪ ಹೊರಹಾಕಿದ್ದರು. ಅಕ್ಷಯ್ ಅವರನ್ನು ‘ವೃತ್ತಿಪರರಲ್ಲದ ವ್ಯಕ್ತಿ’ ಎಂದು ಟೀಕಿಸಿದರು. ಅಕ್ಷಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವರು ನೋಟಿಸ್ ಸಹ ನೀಡಿದ್ದಾರೆ. ಈಗ ಚಿತ್ರದಲ್ಲಿ ಅಕ್ಷಯ್ ಬದಲಿಗೆ ನಟ ಜೈದೀಪ್ ಅಹ್ಲಾವತ್ ಅವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂಪೂರ್ಣ ವಿವಾದದ ನಡುವೆ, ಚಿತ್ರದ ನಿರ್ದೇಶಕ ಅಭಿಷೇಕ್ ಪಾಠಕ್ ಪ್ರತಿಕ್ರಿಯಿಸಿದ್ದಾರೆ.

ಜೈದೀಪ್ ಅಹ್ಲಾವತ್ ಅವರಿಗೆ ಚಿತ್ರದಲ್ಲಿ ಮಹತ್ವದ ಪಾತ್ರ ನೀಡಲಾಗಿದ್ದರೂ, ಅವರು ಅಕ್ಷಯ್ ಖನ್ನಾ ಬದಲಿಗೆ ಬಂದಿಲ್ಲ ಎಂದು ಅಭಿಷೇಕ್ ಪಾಠಕ್ ಹೇಳಿದ್ದಾರೆ . ಜೈದೀಪ್ ಗಾಗಿ ಹೊಸ ಪಾತ್ರವನ್ನು ಬರೆಯಲಾಗಿದೆ. ಈ ಸಮಯದಲ್ಲಿ, ಅಕ್ಷಯ್ ಖನ್ನಾ ನಿರ್ಗಮನದ ಬಗ್ಗೆ ಅಜಯ್ ದೇವಗನ್ ಅವರ ಪ್ರತಿಕ್ರಿಯೆಯನ್ನು ಅಭಿಷೇಕ್ ಬಹಿರಂಗಪಡಿಸಿದರು.

‘ಅವರು (ಅಜಯ್) ಸಂಪೂರ್ಣ ನಿರ್ಧಾರವನ್ನು ನನಗೆ ವಹಿಸಿದ್ದಾರೆ. ಇದು ನನ್ನ, ಅಕ್ಷಯ್ ಖನ್ನಾ ಮತ್ತು ನಿರ್ಮಾಣದ ನಡುವಿನ ಸಮಸ್ಯೆ. ಶೂಟಿಂಗ್‌ಗೆ ಕೇವಲ ಐದು ದಿನಗಳ ಮೊದಲು ಅಕ್ಷಯ್ ಚಿತ್ರವನ್ನು ತೊರೆದರು. ಎಲ್ಲವನ್ನೂ ತಿಳಿದು ಅವರು ಹೀಗೆ ಮಾಡಿದರು’ ಎಂದಿದ್ದಾರೆ ಅಭಿಷೇಕ್.

‘ನನ್ನ ಚಿತ್ರ ಎಲ್ಲಿಂದ ಮುಗಿಯಿತೋ ಅಲ್ಲಿಂದ ಆರಂಭವಾಗುತ್ತದೆ. ನಾನು ಈಗಾಗಲೇ ಅವರಿಗೆ ವಿಗ್ ಬಗ್ಗೆ ವಿವರಿಸಿದ್ದೆ. ಅಕ್ಷಯ್ ಕೂಡ ಅದಕ್ಕೆ ಒಪ್ಪಿಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಅವರು ಮತ್ತೆ ಅದೇ ಬೇಡಿಕೆಯೊಂದಿಗೆ ನನ್ನ ಬಳಿಗೆ ಬಂದರು. ಇದು ಅಸಾಧ್ಯವಾದ ಮಾತಾಗಿತ್ತು’ ಎಂದಿದ್ದಾರೆ ಅಭಿಷೇಕ್.

ಇದನ್ನೂ ಓದಿ: ‘ಧುರಂಧರ್’ ತಡೆಯೋರು ಯಾರೂ ಇಲ್ಲ: ಸಾವಿರ ಕೋಟಿ ರೂ. ದಾಟಿದರೂ ನಿಂತಿಲ್ಲ ಹವಾ

‘ದೃಶ್ಯಂ 3’ ಚಿತ್ರಕ್ಕೆ ಅಕ್ಷಯ್ 21 ಕೋಟಿ ಸಂಭಾವನೆ ಕೇಳಿದ್ದಾರೆಂಬ ಮಾತಿದೆ. ಈ ಬಗ್ಗೆ ಅಭಿಷೇಕ್ ಮಾತನಾಡಿದ್ದಾರೆ. ‘ನಿರ್ಧರಿಸಿದ ಸಂಭಾವನೆಯ ಬಗ್ಗೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ನೀವು ಈಗ ಸೂಪರ್‌ಸ್ಟಾರ್ ಆಗಿದ್ದೀರಿ ಎಂದು ಆಪ್ತರು ಅಕ್ಷಯ್​​ಗೆ ಹೇಳಿರಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.