ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಡೇಟಿಂಗ್ ಆರಂಭಿಸಿ ಅನೇಕ ವರ್ಷಗಳೇ ಕಳೆದಿವೆ. 2019ರಿಂದಲೂ ಇಬ್ಬರ ಮದುವೆ ವಿಚಾರ ಚರ್ಚೆ ಆಗುತ್ತಲೇ ಇದೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ವಿಚಾರ ಎಂದರೆ ಆಲಿಯಾ ಹಾಗೂ ರಣಬೀರ್ ರಾಜಸ್ಥಾನದಲ್ಲಿ ಮದುವೆ ಆಗಲಿದ್ದಾರೆ ಎಂಬ ಗುಸುಗುಸು ಕೇಳಿ ಬಂದಿದೆ. ಇದಕ್ಕಾಗಿ ಅವರು ಸ್ಥಳ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ರಣಬೀರ್ ಹಾಗೂ ಆಲಿಯಾ ಪ್ರೀತಿ ವಿಚಾರಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿ ವರ್ಷಗಳೇ ಕಳೆದಿವೆ. 2020ರಲ್ಲಿ ಇಬ್ಬರೂ ಮದುವೆ ಆಗುವ ಆಲೋಚನೆ ಇಟ್ಟುಕೊಂಡಿದ್ದರು. ಇವರದ್ದು ಡೆಸ್ಟಿನೇಷನ್ ಮದುವೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಕೊರೊನಾ ಇವರ ಪ್ಲ್ಯಾನ್ಅನ್ನು ತಲೆಕೆಳಗೆ ಮಾಡಿತ್ತು. ಹೀಗಿರುವಾಗಲೇ 2020ರ ಏಪ್ರಿಲ್ 30ರಂದು ರಣಬೀರ್ ತಂದೆ ರಿಷಿ ಕಪೂರ್ ಮೃತಪಟ್ಟಿದ್ದರು. ಇದು ಕಪೂರ್ ಕುಟುಂಬಕ್ಕೆ ಆಘಾತ ಉಂಟು ಮಾಡಿತ್ತು. ಹೀಗಾಗಿ, ರಣಬೀರ್ ಮದುವೆಯನ್ನು ಮುಂದೂಡಿದ್ದರು. ಈಗ ಇಬ್ಬರೂ ರಾಜಸ್ಥಾನದಲ್ಲಿ ಮದುವೆ ಆಗೋಕೆ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ.
ಮಂಗಳವಾರ (ಸೆಪ್ಟೆಂಬರ್ 28) ರಣಬೀರ್ ಕಪೂರ್ 39ನೇ ಹುಟ್ಟುಹಬ್ಬ. ಈ ದಿನವನ್ನು ವಿಶೇಷವಾಗಿ ಆಚರಿಸಲು ಆಲಿಯಾ ಹಾಗೂ ರಣಬೀರ್ ಜೋಧ್ಪುರ್ಗೆ ತೆರಳಿದ್ದಾರೆ. ಮಂಗಳವಾರ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ನಡೆಯಲಿದೆ. ಇದೇ ವೇಳೆ ಇಬ್ಬರೂ ಮದುವೆ ಏರ್ಪಡಿಸೋಕೆ ಸೂಕ್ತ ಸ್ಥಳ ಹುಡುಕುತ್ತಿದ್ದಾರೆ ಎನ್ನಲಾಗಿದೆ.
ರಣಬೀರ್ ಮದುವೆ ವಯಸ್ಸು ಈಗಾಗಲೇ ಮೀರಿದೆ. ಇವರ ಮದುವೆಗೆ ನಾನಾ ವಿಘ್ನಗಳು ಎದುರಾಗುತ್ತಲೇ ಇವೆ. ಇದರಿಂದ ಕುಟುಂಬದವರು ಕೊಂಚ ಚಿಂತೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಶೀಘ್ರವೇ ಮದುವೆ ಮಾಡಿ ಮುಗಿಸುವ ಆಲೋಚನೆ ಕುಟುಂಬದ್ದು.
ಇದನ್ನೂ ಓದಿ:3D ರಾಮಾಯಣ: ರಾಮನ ಪಾತ್ರಕ್ಕೆ ಮಹೇಶ್ ಬಾಬು ಬದಲಿಗೆ ರಣಬೀರ್ ಕಪೂರ್?
Published On - 9:46 pm, Mon, 27 September 21