ಐಟಮ್ ಸಾಂಗ್ಗೆ ಹೆಜ್ಜೆ ಹಾಕಲಿದ್ದಾರೆ ರಣಬೀರ್ ಕಪೂರ್
2018ರಲ್ಲಿ ತೆರೆಕಂಡ ‘ಸಂಜು’ ಚಿತ್ರವೇ ಕೊನೆ. ಇದಾದ ನಂತರ ರಣಬೀರ್ ಕಪೂರ್ ನಟನೆಯ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ.
ಐಟಮ್ ಸಾಂಗ್ನಲ್ಲಿ ಹೀರೋಗಳಿಗಿಂತ ಹೀರೋಯಿನ್ಗಳು ಹೆಜ್ಜೆ ಹಾಕಿದರೆ ಬೇಡಿಕೆ ಹೆಚ್ಚು. ಇದೇ ಕಾರಣಕ್ಕೆ ಚಿತ್ರತಂಡದವರು ಹಾಟ್ ನಟಿಯರನ್ನು ಕರೆತಂದು, ಅವರಿಂದ ಐಟಮ್ ಸಾಂಗ್ ಮಾಡಿಸಿ ಸಿನಿಮಾದಲ್ಲಿ ಎಲ್ಲಾದರೂ ಒಂದು ಕಡೆ ತುರುಕುತ್ತಾರೆ. ಬಾಲಿವುಡ್, ಟಾಲಿವುಡ್ ಸೇರಿ ಎಲ್ಲಾ ಕಡೆಗಳಲ್ಲೂ ಇದು ನಡೆದೇ ಇದೆ. ಕೆಲವೇ ಕೆಲವು ವಿಶೇಷ ಹಾಡುಗಳಲ್ಲಿ ಹೀರೋಗಳು ಡ್ಯಾನ್ಸ್ ಮಾಡಿದ್ದಾರೆ. ಅದೇ ರೀತಿ ಈಗ ರಣಬೀರ್ ಕಪೂರ್ ಕೈಯಲ್ಲಿ ವಿಶೇಷ ಡ್ಯಾನ್ಸ್ ಮಾಡೋಕೆ ಸಿದ್ಧತೆ ನಡೆದಿದೆ.
2018ರಲ್ಲಿ ತೆರೆಕಂಡ ‘ಸಂಜು’ ಚಿತ್ರವೇ ಕೊನೆ. ಇದಾದ ನಂತರ ರಣಬೀರ್ ಕಪೂರ್ ನಟನೆಯ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ. ರಣಬೀರ್ ಹಾಗೂ ಆಲಿಯಾ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಈಗಾಗಲೇ ತೆರೆಗೆ ಬಂದಿರಬೇಕಿತ್ತು. ಆದರೆ, ಕೊವಿಡ್ ಒಂದು ಹಾಗೂ ಎರಡನೇ ಅಲೆಯಿಂದ ಸಿನಿಮಾ ಕೆಲಸಗಳು ಮತ್ತು ಸಿನಿಮಾ ರಿಲೀಸ್ ದಿನಾಂಕ ಎರಡೂ ವಿಳಂಬವಾಗಿದೆ. ಇದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರಮೂಡಿಸಿದೆ. ಹೀಗಿರುವಾಗಲೇ ಬಾಲಿವುಡ್ ಅಂಗಳದಿಂದ ಹೊಸ ಅಪ್ಡೇಟ್ ಒಂದು ಕೇಳಿ ಬರುತ್ತಿದೆ.
ವಿಕ್ಕಿ ಕೌಶಲ್ ‘ಮಿಸ್ಟರ್. ಲೆಲೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಸದ್ಯ, ಈ ವಿಚಾರ ಚರ್ಚೆಯಲ್ಲಿದ್ದು, ಶೀಘ್ರವೇ ಘೋಷಣೆ ಆಗಲಿದೆ. ಆರಂಭದಲ್ಲಿ ಈ ಆಫರ್ಅನ್ನು ಸಲ್ಮಾನ್ ಖಾನ್ಗೆ ನೀಡಿತ್ತು ಚಿತ್ರತಂಡ. ಆದರೆ, ರಣಬೀರ್ ಹೆಸರನ್ನು ಸಲ್ಲು ಸೂಚಿಸಿದ್ದಾರೆ. ಈ ಮೂಲಕ ರಣಬೀರ್ಗೆ ಈ ಆಫರ್ ನೀಡಲಾಗಿದೆ.
ರಣಬೀರ್ ಕಪೂರ್ ಡ್ಯಾನ್ಸ್ ಚೆನ್ನಾಗಿ ಮಾಡುತ್ತಾರೆ. ಅವರು ಹೆಜ್ಜೆ ಹಾಕುವುದು ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಇನ್ನು, ‘ಸಂಜು’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜತೆ ರಣಬೀರ್ ಕೆಲಸ ಮಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಅವರು ಈ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಮೆಹಬೂಬಾ ಸ್ಟುಡಿಯೋದಲ್ಲಿ ಈ ಹಾಡನ್ನು ಶೂಟ್ ಮಾಡಲಾಗುತ್ತಿದೆ. ಗಣೇಶ್ ಆಚಾರ್ಯ ಅವರ ಕೊರೊಯೋಗ್ರಾಫಿ ಈ ಹಾಡಿಗೆ ಇರಲಿದೆ.
ವಿಕ್ಕಿ, ಕಿಯಾರಾ ಅಡ್ವಾಣಿ ಹಾಗೂ ಭೂಮಿ ಪಡ್ನೇಕರ್ ‘ಮಿಸ್ಟರ್. ಲೆಲೆ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಶಶಾಂಕ್ ಖೈತಾನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 2022ರ ಆರಂಭದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಈ ವಿಶೇಷ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಅಕ್ಕನ ಬಟ್ಟೆ ಕದ್ದು ಪ್ರೇಯಸಿಗೆ ಗಿಫ್ಟ್ ಮಾಡುತ್ತಿದ್ದ ರಣಬೀರ್ ಕಪೂರ್; ಎಲ್ಲರ ಎದುರು ಸತ್ಯ ಬಾಯ್ಬಿಟ್ಟ ರಿಧಿಮಾ