ದುಡಿಸಿಕೊಂಡು ಹಣ ಕೊಟ್ಟಿಲ್ಲ: ಖ್ಯಾತ ನಟನ ಮೇಲೆ ನರ್ತಕರಿಂದ ಆರೋಪ
ಖ್ಯಾತ ನಟ, ಗಾಯಕ ದಿಲ್ಜೀತ್ ದೊಸ್ಸಾಂಜ್ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಇತ್ತೀಚೆಗಷ್ಟೆ ಯಶಸ್ವಿ ವರ್ಲ್ಡ್ ಟೂರ್ ಮುಗಿಸಿ ಬಂದಿರುವ ದಿಲ್ಜೀತ್ ದೊಸ್ಸಾಂಜ್ ಲೈವ್ ಕಾನ್ಸರ್ಟ್ಗಳಲ್ಲಿ ಬಳಸಿಕೊಂಡಿರುವ ದೇಸಿ ನೃತ್ಯಗಾರರಿಗೆ ಹಣ ನೀಡಿಲ್ಲವಂತೆ.
ಪಂಜಾಬಿ ಗಾಯಕ ದಿಲ್ಜಿತ್ ದುಸ್ಸಾಂಜ್ ಇತ್ತೀಚೆಗೆ ಬಾಲಿವುಡ್ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ತಮ್ಮ ಹಿಂದಿನ ಪಂಜಾಬಿ ಗಾಯಕರೆನ್ನೆಲ್ಲ ಹಿಂದಿಕ್ಕಿರುವ ದಿಲ್ಜಿತ್ ದೊಸ್ಸಾಂಗ್ ವಿದೇಶಗಳ ಪ್ರತಿಷ್ಠಿತ ಆಡಿಟೋರಿಯಮ್ಗಳಲ್ಲಿ ಲೈವ್ ಪ್ರದರ್ಶ ನೀಡಿ ಬಂದಿದ್ದಾರೆ. ಭಾರತದ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಪಂಜಾಬಿ ಗಾಯಕ ಎನಿಸಿಕೊಂಡಿದ್ದಾರೆ ದಿಲ್ಜಿತ್ ದೊಸ್ಸಾಂಜ್. ಇತ್ತೀಚೆಗಷ್ಟೆ ಅತ್ಯಂತ ಶೋ ಮುಗಿಸಿಕೊಂಡು ವಾಪಸ್ಸಾಗಿರುವ ದಿಲ್ಜಿತ್ ಮೇಲೆ ಅವರೊಟ್ಟಿಗೆ ತೆರಳಿದ್ದ ನರ್ತಕರ ತಂಡ ಗಂಭೀರ ಆರೋಪ ಮಾಡಿದೆ. ಕೆಲಸ ಮಾಡಿಸಿಕೊಂಡು ತಮಗೆ ಹಣ ಕೊಟ್ಟಿಲ್ಲವೆಂದು ಆರೋಪ ಮಾಡಲಾಗಿದೆ.
‘ದಿಲ್ಲುಮಿನಾಟಿ’ ಹೆಸರಿನ ಟೂರ್ ಅನ್ನು ದಿಲ್ಜೀತ್ ದೊಸ್ಸಾಂಜ್ ಆಯೋಜಿಸಿದ್ದರು. ತಂಡವನ್ನು ಕಟ್ಟಿಕೊಂಡು ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ದಿಲ್ಜೀತ್ ಲೈವ್ ಪ್ರದರ್ಶನ ನೀಡಿದರು. ದಿಲ್ಜೀತ್ರ ಕಾನ್ಸರ್ಟ್ಗಳಿಗೆ ದಾಖಲೆ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು. ಹಲವು ಪ್ರತಿಷ್ಠಿತ ಆಡಿಟೋರಿಯಮ್ಗಳಲ್ಲಿ ದಿಲ್ಜೀತ್ ಹಾಡಿದ್ದರು. ಈ ಟೂರ್ಗೆ ಆಯ ದೇಶದ ಭಾರತೀಯ ಮೂಲದ ಡ್ಯಾನ್ಸರ್ಗಳನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಇವರ್ಯಾರಿಗೂ ಹಣ ಕೊಟ್ಟಿಲ್ಲ ಎಂದು ದಿಲ್ಜೀತ್ ಮೇಲೆ ಆರೋಪ ಕೇಳಿ ಬಂದಿದೆ.
ಲಾಸ್ ಏಂಜಲ್ಸ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ರಜತ್ ರಾಕಿ ಭಟ್ಟ, ದಿಲ್ಜೀತ್ ದೊಸ್ಸಾಂಜ್ ವಿರುದ್ಧ ಆರೋಪ ಮಾಡಿದ್ದಾರೆ. ದೇಸಿ ಕಲಾವಿದರನ್ನು ತಮ್ಮ ಲೈವ್ ಕಾನ್ಸರ್ಟ್ಗೆ ಬಳಸಿಕೊಂಡಿದ್ದರು. ಆದರೆ ಅವರಿಗೆ ಹಣ ನೀಡಲಾಗಿಲ್ಲ ಎಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಜತ್, ‘ಭಾರತೀಯ ಕಲಾವಿದ ದಿಲ್ಜೀತ್, ವಿಶ್ವಮಟ್ಟದಲ್ಲಿ ಹೃದಯ ಗೆದ್ದಿರುವುದು ಖುಷಿ ತಂದಿದೆಯಾದರೂ ದೇಸಿ ಪ್ರತಿಭೆಗಳಿಗೆ ಅವರಿಗೆ ಕೊಡಬೇಕಾದ ಮೌಲ್ಯ ಕೊಡದೇ ಇರುವುದು ಬೇಸರ ತಂದಿದೆ’ ಎಂದಿದ್ದಾರೆ.
ಇದನ್ನೂ ಓದಿ:‘ಪತ್ನಿಯನ್ನು ಪ್ರೀತಿಸುತ್ತೇನೆ ಅನ್ನೋದು ಬಾಲಿವುಡ್ ಮಂದಿ ಹೇಳೋ ದೊಡ್ಡ ಸುಳ್ಳು’
‘ದಿಲ್ಜಿತ್ ದೊಸ್ಸಾಂಜ್ ಕಾನ್ಸರ್ಟ್ನಲ್ಲಿ ನೃತ್ಯ ಮಾಡಿದ ಯಾವುದೇ ದೇಸಿ ನೃತ್ಯಗಾರರಿಗೆ ಹಣ ನೀಡಲಾಗಿಲ್ಲ. ಅವರೆಲ್ಲ ಉಚಿತವಾಗಿ ನೃತ್ಯ ಪ್ರದರ್ಶನ ನೀಡಬೇಕು ಎಂದು ದಿಲ್ಜಿತ್ ದೊಸ್ಸಾಂಜ್ ನಿರೀಕ್ಷೆ ಮಾಡಿದ್ದರು’ ಎಂದಿದ್ದಾರೆ ರಜತ್ ರಾಕಿ ಭಟ್ಟ. ‘ದೇಸಿ ನೃತ್ಯವು ಒಂದು ಉದ್ಯಮವಾಗಿ ಕಲಾವಿದರ ಹೊಟ್ಟೆ ತುಂಬಿಸುತ್ತಿದೆ. ಇಡೀ ಮನೊರಂಜನಾ ಉದ್ಯಮದ ಪರಿಸರದಲ್ಲಿ ದೇಸಿ ನೃತ್ಯ ಮಹತ್ವದ ಪಾತ್ರ ವಹಿಸಿದೆ. ನೃತ್ಯ ಸಂಯೋಜನೆ, ವೇದಿಕೆಯ ಪ್ರದರ್ಶನಗಳು, ಸಂಗೀತ ವೀಡಿಯೊಗಳು, ರೀಲ್‌ಗಳು, ಹಾಡುಗಳ ಬಿಡುಗಡೆ, ಪ್ರಮೋಷನ್ಗಳಲ್ಲಿ ದೇಸಿ ನೃತ್ಯಗಾರರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ದೇಸಿ ಡ್ಯಾನ್ಸರ್ ಕೊರಳಿನ ಮೇಲೆ ಹೆಜ್ಜೆ ಇಡುವ ಮೂಲಕ ಈ ಕಲಾವಿದರು ಉಸಿರುಗಟ್ಟುವಂತೆ ಮಾಡಿ ದೇಸಿ ನೃತ್ಯ ಸಂಸ್ಕೃತಿಯನ್ನು ಮಣ್ಣಿನಲ್ಲಿ ಸೇರಿಸಲಾಗುತ್ತಿದೆ’ ಎಂದಿದ್ದಾರೆ ರಜತ್ ರಾಕಿ.
‘ದಿಲ್ಜೀತ್ ದೊಸ್ಸಾಂಜ್, ನೀವು ದೊಡ್ಡ ಕಲಾವಿದರಾಗಿ ಬೆಳೆಯುತ್ತಿರುವುದು ನಮಗೆಲ್ಲ ಖುಷಿ ತಂದಿದೆ. ಆದರೆ ನೀವು ದೇಸಿ ಕಲಾವಿದರನ್ನು ಸಹ ಕಲಾವಿದರೆಂದು ಗುರುತಿಸಿ ಅವರಿಗೆ ಸಿಗಬೇಕಾದ ಮನ್ನಣೆಯನ್ನು ನೀಡಿದರೆ ಇನ್ನೂ ಹೆಚ್ಚು ಖುಷಿಯಾಗುತ್ತದೆ’ ಎಂದಿದ್ದಾರೆ.
ದಿಲ್ಜೀತ್ ದೊಸ್ಸಾಂಜ್, ಬಾಲಿವುಡ್ನ ‘ಗುಡ್ ನ್ಯೂಜ್’, ‘ಕ್ರೂವ್’ ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಚಮ್ಕೀಲಾ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖ್ಯಾತ ಗಾಯಕರೂ ಆಗಿರುವ ದಿಲ್ಜೀತ್, ಇತ್ತೀಚೆಗಷ್ಟೆ ಅಂಬಾನಿ ಪ್ರೀ ವೆಡ್ಡಿಂಗ್ನಲ್ಲಿ ಲೈವ್ ಪ್ರದರ್ಶನ ನೀಡಿದ್ದರು. ಅವರ ಗಾಯಕ ಬಹುವಾಗಿ ಗಮನ ಸೆಳೆಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Fri, 19 July 24