ಅಕ್ಷಯ್ ಕುಮಾರ್ (Akshay Kumar) ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ನೋಡಲು ಅವರ ಅಭಿಮಾನಿಗಳು ಕಾದಿದ್ದಾರೆ. ಜೂನ್ 3ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರವನ್ನು ವೀಕ್ಷಿಸಿದ್ದಾರೆ. ದೆಹಲಿಯಲ್ಲಿ ಗಣ್ಯರಿಗಾಗಿ ಬುಧವಾರ (ಜೂನ್ 1) ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ತಮ್ಮ ಎಂದಿನ ರಾಜಕೀಯ ಕೆಲಸಗಳಿಗೆ ಬಿಡುವು ನೀಡಿದ್ದ ಅಮಿತ್ ಶಾ ಅವರು ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದರು. ಅವರ ಜೊತೆಗೆ ಕುಟುಂಬದ ಸದಸ್ಯರು ಕೂಡ ಹಾಜರಾಗಿದ್ದರು. ಸಿನಿಮಾ ನೋಡಿದ ಬಳಿಕ ತಮ್ಮ ಅನಿಸಿಕೆ ಹಂಚಿಕೊಂಡರು. ಅಲ್ಲದೇ, ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ನಾಯಕಿ ಮಾನುಶಿ ಚಿಲ್ಲರ್ಗೆ ಹೇಳಿದ ಡೈಲಾಗ್ ಅನ್ನು ತಮ್ಮ ಪತ್ನಿಗೆ ಹೇಳುವ ಮೂಲಕ ಅಮಿತ್ ಶಾ (Amit Shah) ಎಲ್ಲರ ಗಮನ ಸೆಳೆದರು. ಆ ಕುರಿತು ಇಲ್ಲಿದೆ ಮಾಹಿತಿ..
ದೇಶ ಭಕ್ತಿ ಕಥಾಹಂದರ ಇರುವ ಸಿನಿಮಾಗಳನ್ನು ಮಾಡುವಲ್ಲಿ ಅಕ್ಷಯ್ ಕುಮಾರ್ ಫೇಮಸ್. ಈ ಬಾರಿ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿಯೂ ಅವರು ಅಂಥದ್ದೇ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಐತಿಹಾಸಿಕ ಕಥೆ ಇರುವ ಈ ಚಿತ್ರವನ್ನು ನೋಡಿ ಅಮಿತ್ ಶಾ ಮೆಚ್ಚಿಕೊಂಡಿದ್ದಾರೆ. ‘ಸುಮಾರು 13 ವರ್ಷಗಳ ಬಳಿಕ ನಾನು ನನ್ನ ಕುಟುಂಬದವರ ಜೊತೆ ಕುಳಿತು ಸಿನಿಮಾ ನೋಡಿದೆ. ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಥಿಯೇಟರ್ನ ಕೊನೇ ಸಾಲಿನಲ್ಲಿ ನಾವು ಕುಳಿತಿದ್ದೆವು. ನಮ್ಮ ಕುಟುಂಬಕ್ಕೆ ಇದು ಸ್ಪೆಷಲ್ ದಿನ’ ಎಂದು ಅಮಿತ್ ಶಾ ಹೇಳಿದ್ದಾರೆ.
‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ‘ಚಲಿಯೇ ಹುಕುಂ’ ಎಂದು ನಾಯಕಿಗೆ ಡೈಲಾಗ್ ಹೊಡೆಯುತ್ತಾರೆ. ಈ ಸಿನಿಮಾದ ವಿಶೇಷ ಪ್ರದರ್ಶನದ ಬಳಿಕ ಮಾತನಾಡಿ ಮುಗಿಸಿದ ಅಮಿತ್ ಶಾ ಕೂಡ ತಮ್ಮ ಪತ್ನಿ ಸೋನಲ್ ಶಾ ಕಡೆಗೆ ನೋಡುತ್ತಾ ‘ಚಲಿಯೇ ಹುಕುಂ’ ಎಂದು ಹೇಳಿದರು. ಆಗ ಸೋನಲ್ ಅವರು ನಗು ಚೆಲ್ಲಿದರು. ಅಲ್ಲಿದ್ದ ಇತರರು ಕೂಡ ನಕ್ಕರು.
‘ಇತಿಹಾಸದ ವಿದ್ಯಾರ್ಥಿ ಆದ ನಾನು ಈ ಸಿನಿಮಾ ನೋಡಿ ಕೇವಲ ಎಂಜಾಯ್ ಮಾಡಲಿಲ್ಲ. ಭಾರತೀಯರಿಗೆ ಈ ಚಿತ್ರ ಎಷ್ಟು ಮುಖ್ಯ ಎಂಬುದನ್ನು ಕೂಡ ಅರ್ಥ ಮಾಡಿಕೊಂಡೆ’ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:38 pm, Thu, 2 June 22