
ಬಾಲಿವುಡ್‌ನ ಹಿರಿಯ ನಟ, ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ಕುರಿತು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹ ಹಾಗೂ ವದಂತಿಗಳಿಗೆ ಸ್ವತಃ ಬಿಗ್ ಬಿ ಅವರು ಭಾನುವಾರ (ಮೇ 24) ಪೂರ್ಣ ವಿರಾಮ ಇಟ್ಟಿದ್ದಾರೆ. 83 ವರ್ಷದ ಅಮಿತಾಭ್ ಬಚ್ಚನ್ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳು ಹರಿದಾಡಿದ ಬೆನ್ನಲ್ಲೇ, ಅವರು ಮುಂಬೈನ ತಮ್ಮ ನಿವಾಸದ ಹೊರಗೆ ಬಂದು ಎಂದಿನಂತೆ ಅಭಿಮಾನಿಗಳಿಗೆ ದರ್ಶನ (Sunday Darshan) ನೀಡುವ ಮೂಲಕ ತಾವು ಸಂಪೂರ್ಣ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ಕುರ್ತಾ ಪೈಜಾಮ ಧರಿಸಿ ಬಂದಿದ್ದ ಅಮಿತಾಭ್ ಬಚ್ಚನ್, ತಮ್ಮನ್ನು ನೋಡಲು ಕಾದು ನಿಂತಿದ್ದ ಜನಸಾಗರವನ್ನು ಕಂಡು ಹಸನ್ಮುಖಿಯಾಗಿ ಕೈಮುಗಿದು ವಂದಿಸಿದರು. ಅಲ್ಲದೆ, ನೆರೆದಿದ್ದ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ತಮ್ಮ ಮೇಲಿನ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಇದಕ್ಕಾಗಿಯೇ ವಿಶೇಷವಾಗಿ ನಿರ್ಮಿಸಲಾದ ವೇದಿಕೆಯ ಮೇಲೆ ನಿಂತು ಸುಮಾರು ಹತ್ತು ನಿಮಿಷಗಳ ಕಾಲ ಅತ್ಯಂತ ಚಟುವಟಿಕೆಯಿಂದ ಅಭಿಮಾನಿಗಳಿಗೆ ಬಿಗ್ ಬಿ ಕೈಬೀಸಿದರು. ಈ ದೃಶ್ಯಗಳನ್ನು ಕಂಡು ಅಭಿಮಾನಿಗಳ ಆನಂದ ಮುಗಿಲು ಮುಟ್ಟಿತ್ತು.
ಆದರೆ, ಮುಂಬೈನ ಕಠಿಣ ಬಿಸಿಲು ಮತ್ತು ತಾಪಮಾನದ ನಡುವೆ ಅಮಿತಾಭ್ ಬಚ್ಚನ್ ಅವರನ್ನು ನೋಡಲು ಗಂಟೆಗಟ್ಟಲೆ ಕಾಯುತ್ತಿದ್ದ ಅಭಿಮಾನಿಯೊಬ್ಬರು ತೀವ್ರ ಆಯಾಸದಿಂದ ಪ್ರಜ್ಞೆ ತಪ್ಪಿ ಬಿದ್ದ ಘಟನೆಯೂ ನಡೆಯಿತು. ತಕ್ಷಣವೇ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅವರು ಶೀಘ್ರದಲ್ಲೇ ಚೇತರಿಸಿಕೊಂಡರು. ಉಳಿದಂತೆ ಎಲ್ಲವೂ ಸರಿಯಾಗಿಯೇ ನಡೆಯಿತು.
ಕೋವಿಡ್ ಲಾಕ್‌ಡೌನ್ ಅವಧಿಯನ್ನು ಹೊರತುಪಡಿಸಿದರೆ, ಅಮಿತಾಭ್ ಬಚ್ಚನ್ ಅವರು ಕಳೆದ ಹಲವು ವರ್ಷಗಳಿಂದ ಪ್ರತಿ ಭಾನುವಾರ ತಪ್ಪದೇ ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡಿದ್ದರಿಂದ, ಈ ಭಾನುವಾರ ಅವರು ಅಭಿಮಾನಿಗಳ ಮುಂದೆ ಬರುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಆರೋಗ್ಯವಂತರಾಗಿ, ಮುಗುಳ್ನಗೆಯೊಂದಿಗೆ ಹೊರಬಂದ ಬಿಗ್ ಬಿ ಅವರು ವದಂತಿ ಹರಡುತ್ತಿದ್ದವರಿಗೆ ತಮ್ಮ ನಗುವಿನ ಮೂಲಕವೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಕೊನೆಗೂ ಆರಂಭ ಆಯ್ತು ‘ಕಲ್ಕಿ’ ಸೀಕ್ವೆಲ್; ಫೋಟೋ ಹಂಚಿಕೊಂಡ ಅಮಿತಾಭ್
ವಯಸ್ಸು 83 ಆಗಿದ್ದರೂ ಕೂಡ ಅಮಿತಾಭ್ ಬಚ್ಚನ್ ಅವರು ಉತ್ಸಾಹ ಕಳೆದುಕೊಂಡಿಲ್ಲ. ಈಗಲೂ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಾರೆ. ಸಿನಿಮಾ, ಜಾಹೀರಾತು, ಕಿರುತೆರೆ ಶೋಗಳ ಚಿತ್ರೀಕರಣದಲ್ಲಿ ಅವರು ತೊಡಗಿಕೊಳ್ಳುತ್ತಾರೆ. ಈ ಮೂಲಕ ಅವರು ಬೇರೆ ಎಲ್ಲರಿಗೂ ಮಾದರಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.