‘ದಿ ಬ್ಯಾಡ್ಸ್ ಆಫ್ ಬಾಲಿವುಡ್ ಸೀಸನ್ 2’ ಮೂಲಕ ಮತ್ತೆ ಬರಲು ರೆಡಿ ಆದ ಆರ್ಯನ್ ಖಾನ್

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ವೆಬ್ ಸರಣಿಯ ಎರಡನೇ ಭಾಗ ಶೀಘ್ರದಲ್ಲೇ ಬರಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಹಿಟ್ ಆದ ಈ ಸರಣಿಯ ಮುಂದಿನ ಭಾಗದ ಶೂಟಿಂಗ್ 2027ರ ಮಾರ್ಚ್‌ನಿಂದ ಆರಂಭವಾಗಲಿದೆ. ಹಳೆಯ ತಾರಾಗಣವೇ ಮತ್ತೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

‘ದಿ ಬ್ಯಾಡ್ಸ್ ಆಫ್ ಬಾಲಿವುಡ್ ಸೀಸನ್ 2’ ಮೂಲಕ ಮತ್ತೆ ಬರಲು ರೆಡಿ ಆದ ಆರ್ಯನ್ ಖಾನ್
ಆರ್ಯನ್

Updated on: Sep 24, 2026 | 7:26 AM

ಮುಖ್ಯಾಂಶಗಳು

  • ನೆಟ್‌ಫ್ಲಿಕ್ಸ್‌ನಲ್ಲಿ ಧೂಳೆಬ್ಬಿಸಿದ ಆರ್ಯನ್ ಖಾನ್ ಡೈರೆಕ್ಷನ್
  • 2027ರ ಮಾರ್ಚ್‌ನಿಂದ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್ 2’ ಶೂಟಿಂಗ್ ಆರಂಭ
  • ಮತ್ತೆ ಸಿನಿಮಾ ರಂಗದ ಕರಾಳ ಮುಖ ಅನಾವರಣ?

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಪ್ರೇಕ್ಷಕರಿಂದ ಈ ಸರಣಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಮೊದಲ ಸೀಸನ್ ಸೂಪರ್ ಹಿಟ್ ಆದ ಬೆನ್ನಲ್ಲೇ, ಈಗ ಎರಡನೇ ಸೀಸನ್ ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಮೊದಲ ಸೀಸನ್ ಇಷ್ಟಪಟ್ಟವರಿಗೆ ಈ ಸುದ್ದಿ ಸಕತ್ ಕುತೂಹಲ ಮೂಡಿಸಿದೆ.

ಈ ವೆಬ್ ಸರಣಿಯ ಮೊದಲ ಭಾಗವು ಒಂದು ಸಸ್ಪೆನ್ಸ್ ಹಂತದಲ್ಲಿ ಕೊನೆಗೊಂಡಿತ್ತು. ಹೀಗಾಗಿ ಎರಡನೇ ಸೀಸನ್ ಬರುವುದು ಮೊದಲೇ ಖಚಿತವಾಗಿತ್ತು. ವೆರೈಟಿ ಇಂಡಿಯಾ ವರದಿಯ ಪ್ರಕಾರ, ‘ದಿ ಬ್ಯಾಡ್ಸ್ ಆಫ್ ಬಾಲಿವುಡ್ 2’ ಚಿತ್ರೀಕರಣವು 2027ರ ಮಾರ್ಚ್ ತಿಂಗಳಿನಿಂದ ಶುರುವಾಗಲಿದೆ. ಮೊದಲ ಸೀಸನ್‌ನಲ್ಲಿದ್ದ ಎಲ್ಲ ಪ್ರಮುಖ ಕಲಾವಿದರು ಈ ಹೊಸ ಭಾಗದಲ್ಲೂ ಮುಂದುವರಿಯಲಿದ್ದಾರೆ.

ಮೊದಲ ಸೀಸನ್‌ನ ಕಥೆಯು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುವ ಆಸ್ಮಾನ್ ಎಂಬ ಯುವಕನ ಸುತ್ತ ಕಥೆ ಸಾಗಿತ್ತು. ಸ್ಟಾರ್ ನಟನ ಮಗಳನ್ನು ಪ್ರೀತಿಸಿದಾಗ ಆತನ ವೃತ್ತಿಜೀವನದಲ್ಲಿ ಹಲವು ಸಂಕಷ್ಟಗಳು ಎದುರಾಗುತ್ತವೆ. ಏಳು ಸಂಚಿಕೆಗಳ ಈ ಸರಣಿಯು ಸಿನಿಮಾ ಜಗತ್ತಿನ ಕಟ್ಟುಕಥೆಗಳು, ಹಾಸ್ಯ, ಅಫೇರ್, ಆ್ಯಕ್ಷನ್ ದೃಶ್ಯಗಳಿಂದ ಪ್ರೇಕ್ಷಕರನ್ನು ರಂಜಿಸಿತ್ತು.

ಈ ವೆಬ್ ಸರಣಿಯಲ್ಲಿ ಲಕ್ಷ್ಯ, ಬಾಬಿ ಡಿಯೋಲ್, ಸಹೇರ್ ಬಾಂಬಾ, ರಾಘವ್ ಜುಯಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಅನ್ಯಾ ಸಿಂಗ್, ಮೋನಾ ಸಿಂಗ್, ಮನೋಜ್ ಪಹ್ವಾ, ಮನೀಶ್ ಚೌಧರಿ ಹಾಗೂ ರಜತ್ ಬೇಡಿ ಕೂಡ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದರು. ಇವರ ಪೈಕಿ ಬಹುತೇಕರು ಎರಡನೇ ಭಾಗದಲ್ಲಿ ಇರಲಿದ್ದಾರೆ. ಪ್ರಸ್ತುತ ಈ ಸರಣಿಯ ಎರಡನೇ ಭಾಗದ ಸ್ಕ್ರಿಪ್ಟ್ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ: ನೂಕುನುಗ್ಗಲಿನಲ್ಲಿ ಸಿಲುಕಿ ಒದ್ದಾಡಿದ ಆರ್ಯನ್ ಖಾನ್; ವಿಡಿಯೋ ವೈರಲ್

ಆರ್ಯನ್ ಖಾನ್ ಅವರ ಚೊಚ್ಚಲ ನಿರ್ದೇಶನವೇ ಇಷ್ಟೊಂದು ಜನಪ್ರಿಯತೆ ಗಳಿಸಿದ್ದು ಸಣ್ಣ ವಿಷಯವಲ್ಲ. ಬಾಲಿವುಡ್‌ನ ಒಳಗಿನ ಸತ್ಯಗಳನ್ನು ವಿಭಿನ್ನವಾಗಿ ತೋರಿಸಿದ ರೀತಿ ಜನರಿಗೆ ಇಷ್ಟವಾಗಿದೆ. ಇದೀಗ ಎರಡನೇ ಭಾಗದ ಕಥೆ ಹೇಗಿರಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:25 am, Thu, 24 September 26

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us