Dharmendra Passes Away: ನಟ ಧರ್ಮೇಂದ್ರ ನಿಧನ; ಜನ್ಮದಿನಕ್ಕೂ ಮೊದಲು ಕೊನೆಯುಸಿರು

Dharmendra Death: ಭಾರತೀಯ ಚಿತ್ರರಂಗದ ಪಾಲಿಗೆ ಕಹಿ ಸುದ್ದಿ ಕೇಳಿಬಂದಿದೆ. ಬಾಲಿವುಡ್​ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.

Dharmendra Passes Away: ನಟ ಧರ್ಮೇಂದ್ರ ನಿಧನ; ಜನ್ಮದಿನಕ್ಕೂ ಮೊದಲು ಕೊನೆಯುಸಿರು
Dharmendra
Updated By: ರಾಜೇಶ್ ದುಗ್ಗುಮನೆ

Updated on: Nov 24, 2025 | 2:10 PM

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ನಟ ಧರ್ಮೇಂದ್ರ (Dharmendra) ಅವರು ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ನವೆಂಬರ್ 24) ನಿಧನರಾಗಿದ್ದಾರೆ. 89 ವರ್ಷ ವಯಸ್ಸಿನ ಧರ್ಮೇಂದ್ರ ಅವರಿಗೆ ಈ ತಿಂಗಳ ಆರಂಭದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ತರಲಾಯಿತು. ಆದರೆ, ಇಂದು ಅವರು ನಿಧನರಾಗಿದ್ದಾರೆ. ಡಿಸೆಂಬರ್ 8ರಂದು ಜನ್ಮದಿನ ಆಚರಿಸಿಕೊಳ್ಳಬೇಕಿತ್ತು.

ಇತ್ತೀಚೆಗಷ್ಟೇ ಧರ್ಮೇಂದ್ರ ಅವರು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಆ ಬಳಿಕ ಕೆಲವೇ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಸೋಮವಾರ (ನವೆಂಬರ್ 10) ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದು ತಿಳಿದು ಅಭಿಮಾನಿಗಳಿಗೆ ಆತಂಕ ಆಗಿತ್ತು. ನಂತರ ಅವರನ್ನು ಕುಟುಂಬದವರು ಮನೆಗೆ ಕರೆತಂದಿದ್ದರು.

ಭಾರತೀಯ ಚಿತ್ರರಂಗಕ್ಕೆ ಧರ್ಮೇಂದ್ರ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಅವರು 6 ದಶಕಗಳ ಕಾಲ ಸಕ್ರಿಯರಾಗಿದ್ದರು. ಇಳಿ ವಯಸ್ಸಿನಲ್ಲಿ ಕೂಡ ಅವರು ನಟಿಸುವುದು ನಿಲ್ಲಿಸಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಹ ಅವರು ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅವರ ನಿಧನದಿಂದ ಕೋಟ್ಯಂತರ ಅಭಿಮಾನಿಗಳಿಗೆ ನೋವಾಗಿದೆ.

ಇದನ್ನೂ ಓದಿ: ಈ ನಟಿಯನ್ನು ಅತಿಯಾಗಿ ಪ್ರೀತಿಸಿದ್ದ ಧರ್ಮೇಂದ್ರ; ಬ್ರೇಕಪ್ ಆಗಿದ್ದೇಕೆ?

ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಧರ್ಮೇಂದ್ರ ಅವರು ಯಶಸ್ಸು ಕಂಡಿದ್ದರು. 2004ರಿಂದ 2009ರ ತನಕ ಭಾರತೀಯ ಜನತಾ ಪಕ್ಷದಿಂದ ಅವರ ಸಂಸದನಾಗಿ ಕೆಲಸ ಮಾಡಿದ್ದರು. ಕಿರುತೆರೆ ಕಾರ್ಯಕ್ರಮಗಳ ಜಡ್ಜ್ ಆಗಿ ಕೂಡ ಅವರು ಕಾಣಿಸಿಕೊಂಡಿದ್ದರು. ಧರ್ಮೇಂದ್ರ ಅವರ ಅಗಲಿಕೆಗೆ ಸಿನಿಮಾ, ರಾಜಕೀಯ, ಕ್ರೀಡೆ ಮುಂತಾದ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:45 am, Tue, 11 November 25