ನಟ ಸೋನು ಸೂದ್ ಅವರು ಕೊವಿಡ್ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರನ್ನು ದೇವರಂತೆ ಅನೇಕರು ಪೂಜಿಸುತ್ತಿದ್ದಾರೆ. ಈಗ ನಟನಿಗೆ ಸಂಕಷ್ಟ ಒಂದು ಎದುರಾಗಿದೆ. ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಸೋನು ಸೂದ್ಗೆ ಸಂಬಂಧಿಸಿದ ಆರು ಪ್ರದೇಶಗಳಲ್ಲಿ ಸರ್ವೇ ನಡೆಸಿದ್ದಾರೆ. ಸದ್ಯ, ಈ ವಿಚಾರ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಅವ್ಯವಹಾರ ನಡೆದಿರುವ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ಬಂದಿದೆ. ಈ ಕಾರಣಕ್ಕೆ ಸೋನು ಸೂದ್ ಹಾಗೂ ಅವರಿಗೆ ಸೇರಿದ 6 ಲೊಕೇಷನ್ಗಳಲ್ಲಿ ಐಟಿ ಇಲಾಖೆ ಸರ್ವೇ ನಡೆಸಿದೆ. ಇದು ಪ್ರಾಥಮಿಕ ತನಿಕೆ ಆಗಿದೆ.
ಸೋನು ಸೂದ್ ಅವರು ಕಳೆದ ವರ್ಷ ಸಂಕಷ್ಟಕ್ಕೆ ಸಿಲುಕಿದ್ದರು. ಮುಂಬೈ ಮಹಾನಗರ ಪಾಲಿಕೆ ನಟನ ವಿರುದ್ಧ ದೂರೊಂದನ್ನು ದಾಖಲು ಮಾಡಿತ್ತು. ಜುಹುದಲ್ಲಿರುವ ಆರು ಅಂತಸ್ತಿನ ಕಟ್ಟಡವನ್ನು ಅವರು ಹೋಟೆಲ್ ಆಗಿ ಬದಲಾಯಿಸಿದ್ದರು. ಆದರೆ, ಇದಕ್ಕೆ ಅವರು ಯಾವುದೇ ಒಪ್ಪಿಗೆ ಪಡೆದಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಆಗಿತ್ತು.
ಬಹುಭಾಷಾ ನಟ ಸೋನು ಸೂದ್ ಅವರನ್ನು ಜನರೆಲ್ಲ ರಿಯಲ್ ಹೀರೋ ಎಂದು ಒಪ್ಪಿಕೊಂಡಿದ್ದಾರೆ. ಸಿನಿಮಾ ಪರದೆ ಮೇಲೆ ಖಳನಾಯಕನಾಗಿ ಕಾಣಿಸಿಕೊಳ್ಳುವ ಅವರು ನಿಜಜೀವನದಲ್ಲಿ ಲಕ್ಷಾಂತರ ಜನರ ಪಾಲಿಗೆ ಆಪ್ತರಕ್ಷಕನಾಗಿದ್ದಾರೆ. ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಮುಡಿಪಿಟ್ಟು ಬಡವರ, ಸಂಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಂತಿದ್ದಾರೆ. ತೀವ್ರ ಕಷ್ಟಕಾಲದಲ್ಲಿ ಅವರಿಂದ ಸಹಾಯ ಪಡೆದುಕೊಂಡವರು ತಮ್ಮ ಮನೆಗಳಲ್ಲಿ ಸೋನು ಸೂದ್ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಸೋನು ಸೂದ್ ಅವರಿಂದ ಸಹಾಯ ಪಡೆದ ಅನೇಕರು ಋಣ ಹೇಗೆ ತೀರಿಸಬೇಕು ಎಂಬುದು ತಿಳಿಯದೇ ತಮ್ಮ ಮಕ್ಕಳಿಗೆ ಅವರದೇ ಹೆಸರಿಟ್ಟಿದ್ದಾರೆ. ಇನ್ನೂ ಕೆಲವರು ಅಂಗಡಿ ಹೆಸರನ್ನು ಬದಲಾಯಿಸಿದ್ದಾರೆ. ಅವರೆಲ್ಲರಿಗೂ ಈ ಸುದ್ದಿ ಕೇಳಿ ಬೇಸರವಾಗಿದೆ.
ಇದನ್ನೂ ಓದಿ: ‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್
ಸೋನು ಸೂದ್ ಏರ್ಲಿಫ್ಟ್ ಮಾಡಿದ್ದ ಹಿತೇಶ್ ಶರ್ಮಾ ನಿಧನ; ಭಾವಪೂರ್ಣ ಪೋಸ್ಟ್ ಮೂಲಕ ಮಕ್ಕಳಲ್ಲಿ ಕ್ಷಮೆ ಕೇಳಿದ ಸೋನು
Published On - 4:45 pm, Wed, 15 September 21