ಚಿತ್ರರಂಗಕ್ಕೆ ಕೊರೊನಾ ಹೊಡೆತ; ಕೇವಲ ಬಾಲಿವುಡ್​ಗೇ ಸಾವಿರಾರು ಕೋಟಿ ನಷ್ಟ: ಇಲ್ಲಿದೆ ಪೂರ್ಣ ಲೆಕ್ಕಾಚಾರ

ಚಿತ್ರರಂಗಕ್ಕೆ ಕೊರೊನಾ ಹೊಡೆತ; ಕೇವಲ ಬಾಲಿವುಡ್​ಗೇ ಸಾವಿರಾರು ಕೋಟಿ ನಷ್ಟ: ಇಲ್ಲಿದೆ ಪೂರ್ಣ ಲೆಕ್ಕಾಚಾರ
ಪ್ರಾತಿನಿಧಿಕ ಚಿತ್ರ

Bollywood: ಈ ವರ್ಷ ಕೊವಿಡ್ ಬಂದಿದ್ದರಿಂದ ಬಾಲಿವುಡ್​ನಲ್ಲಿ ಚಿತ್ರಗಳ ಬಿಡುಗಡೆ ತಡವಾಗಿದೆ. ಅಲ್ಲದೇ ಚಿತ್ರೀಕರಣಗಳೂ ಮುಂದೂಡಲ್ಪಟ್ಟಿವೆ. ಇದರಿಂದ ಬಾಲಿವುಡ್ ಈ ತ್ರೈಮಾಸಿಕದಲ್ಲಿ ಅಂದಾಜು ₹ 1,500 ಕೋಟಿ ನಷ್ಟ ಅನುಭವಿಸಲಿವೆ ಎನ್ನುತ್ತವೆ ವರದಿಗಳು.

TV9kannada Web Team

| Edited By: shivaprasad.hs

Jan 18, 2022 | 7:00 AM

ಕೊರೊನಾ ಹೊಡೆತದಿಂದ ಎಲ್ಲಾ ಉದ್ಯಮಗಳು ನಷ್ಟು ಅನುಭವಿಸುತ್ತಿವೆ. ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಕೇವಲ ಬಾಲಿವುಡ್ ಚಿತ್ರಗಳೇ ವಾರ್ಷಿಕ ಸುಮಾರು ₹ 4,000 ಕೋಟಿಗೂ ಅಧಿಕ ಬಾಕ್ಸಾಫೀಸ್ ವಹಿವಾಟು ಮಾಡುತ್ತಿದ್ದವು ಎನ್ನುತ್ತಾರೆ ತಜ್ಞರು. ಆದರೆ ಕೊರೊನಾದಿಂದ ಕಳೆದ ಎರಡು ವರ್ಷಗಳಲ್ಲಿ ಚಿತ್ರರಂಗ ನಲುಗಿ ಹೋಗಿದೆ. ಹಾಗಾದರೆ ಬಾಲಿವುಡ್​ನಲ್ಲಿ ಆದ ಒಟ್ಟಾರೆ ನಷ್ಟವೆಷ್ಟು? ಇದರ ಪರಿಣಾಮ ಏನಾಗಿದೆ ಎನ್ನುವುದನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆ ಕುರಿತ ಮಾಹಿತಿ ಇಲ್ಲಿದೆ. ಎಲ್ಲವೂ ಸರಿಯಿದ್ದಿದ್ದರೆ 2022ರಲ್ಲಿ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ತೆರೆಕಂಡಿರಬೇಕಿತ್ತು. ಅದು ಈ ವರ್ಷದ ಮೊದಲ ಬಿಗ್ ಬಜೆಟ್ ಚಿತ್ರವಾಗಿತ್ತು. ಇದರ ಬೆನ್ನಲ್ಲೇ ‘ಆರ್​​ಆರ್​​ಆರ್​’, ‘ರಾಧೆಶ್ಯಾಮ್’, ‘ಪೃಥ್ವಿರಾಜ್’ ಚಿತ್ರಗಳೂ ತೆರೆಕಾಣಬೇಕಿತ್ತು. ಇವೆಲ್ಲವೂ ಈಗ ಮುಂದೂಡಲ್ಪಟ್ಟಿವೆ. ನಿರ್ಮಾಪಕರು ಹಾಗೂ ಬಾಕ್ಸಾಫೀಸ್ ತಜ್ಞರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಕೇವಲ ಬಾಲಿವುಡ್ ಗಲ್ಲಾಪೆಟ್ಟಿಗೆಯ ವ್ಯವಹಾರವೇ ಸಾವಿರಾರು ಕೋಟಿ. ಇದೀಗ ಕೊರೊನಾ ಮೂರನೇ ಅಲೆ ಮತ್ತೆ ಎಲ್ಲವನ್ನೂ ಸ್ಥಗಿತಗೊಳಿಸಿದೆ. ಈ ಕುರಿತು ಮಾತನಾಡಿರುವ ವ್ಯಾಪಾರ ತಜ್ಞ ಜೋಗಿಂದರ್ ತುತೇಜಾ, ಪ್ರತಿ ವರ್ಷ ಗಲ್ಲಾಪೆಟ್ಟಿಗೆಯಿಂದ ಏನಿಲ್ಲವೆಂದರೂ ₹ 4,000 ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಬಾಕ್ಸಾಫೀಸ್​ನಲ್ಲಿ ಪ್ರತಿ ತ್ರೈಮಾಸಿಕ ಅಂದಾಜು ₹ 1000 ಕೋಟಿ ನಷ್ಟವಾಗುತ್ತಿದೆ ಎಂದಿದ್ದಾರೆ. ಮತ್ತೋರ್ವ ತಜ್ಞ ಗಿರೀಶ್ ಜೋಹರ್, ಸುಮಾರು ₹ 1,500 ಕೋಟಿ ನಷ್ಟವಾಗುತ್ತಿದೆ ಎಂದಿದ್ದಾರೆ. ಹಬ್ಬಗಳು ಹಾಗೂ ವೀಕೆಂಡ್​ ಕರ್ಫ್ಯೂಗಳಿಂದ ಮತ್ತಷ್ಟು ನಷ್ಟ ಹೆಚ್ಚಿದೆ ಎನ್ನುತ್ತಾರೆ ಅವರು.

ಚಿತ್ರ ಬಿಡುಗಡೆಯ ನಂತರದ ಲೆಕ್ಕ ಇವಾದರೆ ನಿರ್ಮಾಣ ಹಂತದಲ್ಲಿರುವ ಚಿತ್ರಗಳು ತಡವಾಗುತ್ತಿರುವುದರಿಂದ ಏರುತ್ತಿರುವ ನಷ್ಟದ್ದು ಬೇರೆಯದೇ ಲೆಕ್ಕ. ‘ಮೆರ್ರಿ ಕ್ರಿಸ್‌ಮಸ್’, ‘ಪಠಾಣ್’, ‘ಟೈಗರ್ 3’, ‘ಲೈಗರ್’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳ ಹೊರಾಂಗಣ ಚಿತ್ರೀಕರಣದಲ್ಲಿ ವ್ಯತ್ಯಯವಾಗಿದೆ. ಮುಂಬೈ ಹಾಗೂ ದೇಶಾದ್ಯಂತ ಹೇರಿರುವ ನಿಯಮಗಳು ಹೊರಾಂಗಣ ಚಿತ್ರೀಕರಣದ ಮೇಲೆ ಗಾಢ ಪರಿಣಾಮ ಬೀರಿದೆ. ಇದರಿಂದ ವೇಳಾಪಟ್ಟಿಯನ್ನು ಮುಂದೂಡಬೇಕಾಗಿದೆ. ಇದರಿಂದ ಚಿತ್ರದ ಕಾಲಮಿತಿ ಹಾಗೂ ಬಜೆಟ್ ಏರಿಕೆಯಾಗುತ್ತದೆ. ಇದರಿಂದ ನಿರ್ಮಾಪಕರಿಗೆ ಮತ್ತಷ್ಟು ಹೊರೆ ಬೀಳುತ್ತದೆ ಎನ್ನುತ್ತಾರೆ ‘ಮಿಷನ್ ಮಜ್ನು’ ನಿರ್ಮಾಪಕ ಅಮರ್ ಬುಟಾಲಾ.

ಈ ವರ್ಷದ ಕತೆ ಏನು? ಮೇಲೆ ತಿಳಿಸಿದಂತೆ ಪ್ರತಿ ತ್ರೈಮಾಸಿಕದಲ್ಲಿ ಅಂದಾಜು ಕನಿಷ್ಠ ಸಾವಿರ ಕೋಟಿ ವ್ಯವಹಾರ ನಡೆಯುತ್ತಿತ್ತು. ಆದರೆ 2019ರ ನಂತರ ಪರಿಸ್ಥಿತಿಗಳು ಮೊದಲಿನ ಹಾಗಿಲ್ಲ. ಈ ಕುರಿತು ಮಾತನಾಡಿರುವ ನಿರ್ಮಾಪಕ ಶಿಬಾಶಿಶ್ ಸರ್ಕಾರ್, ‘‘ಈ ಹಿಂದೆ ನೂರಾರು ಕೋಟಿ ವ್ಯವಹಾರವಾಗುತ್ತಿತ್ತು. ಈಗ ಆ ಅಂಕಿಅಂಶಗಳು ಅರ್ಥ ಕಳೆದುಕೊಂಡಿವೆ. 2022ರ ಮೊದಲ ತ್ರೈಮಾಸಿಕ ಈಗಾಗಲೇ ಹೋಗಿದೆ ಎಂದೇ ಭಾವಿಸಬೇಕು. ಏಪ್ರಿಲ್ ನಂತರ ಚಿತ್ರರಂಗದ ವ್ಯವಹಾರಗಳು ಮೊದಲಿನಂತೆ ಪ್ರಾರಂಭವಾಗಬಹುದು ಎಂದಿದ್ದಾರೆ. ಈ ಮೂಲಕ ಈ ವರ್ಷದ ಮೊದಲ ತ್ರೈಮಾಸಿಕ ನಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.

ನಿರ್ದೇಶಕ ಅನೀಸ್ ಬಾಜ್ಮಿ ‘ಇಲ್ಲಿಯವರೆಗೆ ನಷ್ಟ ಅನುಭವಿಸಿದ್ದೇವೆ ಮತ್ತು ಅದು ಮುಂದುವರೆಯಲಿದೆ’ ಎಂದಿದ್ದಾರೆ.  ಡೆಲಾಯ್ಟ್ ಇಂಡಿಯಾದ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ನ ಮುಖ್ಯಸ್ಥ ಜೆಹಿಲ್ ಥಕ್ಕರ್ ಪ್ರಕಾರ, ‘‘ಬಂಡವಾಳದ ಹರಿವಿನಲ್ಲಿ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗುತ್ತಿದೆ. ಅಲ್ಲದೇ ಚಿತ್ರೀಕರಣದ ಮುಂದೂಡುವಿಕೆ ಮೊದಲಾದ ಕಾರಣಗಳಿಂದ ಈ ನಷ್ಟ ಮತ್ತಷ್ಟು ಏರುತ್ತಿದೆ. ಇವುಗಳಿಂದ ನಷ್ಟವಾಗುವುದನ್ನು ಖಚಿತವಾಗಿ ಲೆಕ್ಕಹಾಕುವುದು ಅಸಾಧ್ಯವೇ ಸರಿ’’ ಎಂದಿದ್ದಾರೆ. ಈ ಮೂಲಕ ಅಂಕಿಅಂಶಗಳು ಅಂದಾಜನ್ನು ಸೂಚಿಸಬಹುದೇ ಹೊರತು ನಿಜದ ನಷ್ಟದ ಪ್ರಮಾಣ ಮತ್ತಷ್ಟಿದೆ ಎಂದಿದ್ದಾರೆ ಅವರು.

ದಕ್ಷಿಣದ ಚಿತ್ರರಂಗದ ಕತೆಯೂ ಇದಕ್ಕೆ ಭಿನ್ನವಾಗಿಲ್ಲ. ಬಾಲಿವುಡ್​ಗೆ ಪೈಪೋಟಿ ನೀಡುವಂತೆ ಇಲ್ಲಿ ಚಿತ್ರಗಳು ತಯಾರಾಗುತ್ತಿವೆ. ಆದ್ದರಿಂದ ನಷ್ಟದ ಪ್ರಮಾಣ ಇಲ್ಲೂ ಹೆಚ್ಚೇ ಇದೆ. ಇನ್ನಾದರೂ ಪರಿಸ್ಥಿತಿ ಸುಧಾರಿಸಲಿ ಎಂಬ ಆಶಯ ಚಿತ್ರರಂಗದ್ದು.

ಇದನ್ನೂ ಓದಿ:

ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ

Deepika Padukone: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಾಲ್ಯ ಹೇಗಿತ್ತು? ಇಲ್ಲಿವೆ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada