ಒಂದೇ ದಿನ ಬಾಲಿವುಡ್​ನಲ್ಲಿ 3 ಸಾವು; ಆಘಾತದ ಸುದ್ದಿ ಕೇಳಿ ಕಂಬನಿ ಮಿಡಿದ ಸೆಲೆಬ್ರಿಟಿಗಳು

| Updated By: ಮದನ್​ ಕುಮಾರ್​

Updated on: Jan 21, 2022 | 12:08 PM

ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಭಾವ, ಗಾಯಕ ಶಾನ್​ ಅವರ ತಾಯಿ ಹಾಗೂ ಬಾಲಿವುಡ್​ ನಟ ಅರುಣ್​ ವರ್ಮಾ ನಿಧನರಾಗಿದ್ದಾರೆ. ಒಂದೇ ದಿನ ಈ ಮೂವರ ಸಾವು ಸಂಭವಿಸಿದೆ.

ಒಂದೇ ದಿನ ಬಾಲಿವುಡ್​ನಲ್ಲಿ 3 ಸಾವು; ಆಘಾತದ ಸುದ್ದಿ ಕೇಳಿ ಕಂಬನಿ ಮಿಡಿದ ಸೆಲೆಬ್ರಿಟಿಗಳು
ಒಂದೇ ದಿನ ಬಾಲಿವುಡ್​ನಲ್ಲಿ 3 ಸಾವು
Follow us on

2022ರ ಆರಂಭದಲ್ಲಿ ಸಾಲು ಸಾಲು ಸಾವಿನ ಸುದ್ದಿ ಕೇಳಿಬರುತ್ತಿದೆ. ಇದು ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ಕಳೆದೆರಡು ವರ್ಷಗಳಿಂದ ಕೊವಿಡ್​ ಕಾರಣಕ್ಕೆ ಸಾವು-ನೋವಿನ ಪ್ರಕರಣಗಳು ಹೆಚ್ಚು ವರದಿ ಆಗುತ್ತಿದ್ದವು. 2022ರ ವರ್ಷದಲ್ಲಾದರೂ ನೆಮ್ಮದಿ ಕಾಣಬೇಕು ಎಂದುಕೊಳ್ಳಲಾಗಿತ್ತು. ಆದರೆ ಈ ವರ್ಷಾರಂಭದಲ್ಲೇ ಕಹಿ ಸುದ್ದಿ ಕೇಳಿಬಂದಿದೆ. ‘ಮಹಾಭಾರತ’ ಸೀರಿಯಲ್​ನಲ್ಲಿ ಅರ್ಜುನನ ಪಾತ್ರ ಮಾಡಿ ಫೇಮಸ್​ ಆಗಿದ್ದ ಶಾಹೀರ್​ ಶೇಖ್​ ಅವರ ತಂದೆ ಇತ್ತೀಚೆಗಷ್ಟೇ ಕೊವಿಡ್​ನಿಂದ ಮೃತರಾದರು. ಅದರ ಬೆನ್ನಲ್ಲೇ ಇನ್ನೂ ಮೂವರು ಕೊನೆಯುಸಿರೆಳೆದಿರುವುದು ವರದಿ ಆಗಿದೆ. ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ (Ramo Dsouza) ಅವರ ಭಾವ ಜೇಸನ್​ ವಾಟ್ಕಿನ್ಸ್​, ಗಾಯಕ ಶಾನ್ (Singer Shaan)​ ಅವರ ತಾಯಿ ಸೊನಾಲಿ ಮುಖರ್ಜಿ ಹಾಗೂ ಬಾಲಿವುಡ್​ (Bollywood) ನಟ ಅರುಣ್​ ವರ್ಮಾ ಅವರು ನಿಧನರಾಗಿದ್ದಾರೆ. ಒಂದೇ ದಿನ (ಜ.20) ಈ ಮೂವರ ಸಾವು ಸಂಭವಿಸಿದೆ ಎಂಬುದು ಆಘಾತಕಾರಿ ಸಂಗತಿ. ಅರುಣ್​ ವರ್ಮಾ ಮತ್ತು ಸೊನಾಲಿ ಮುಖರ್ಜಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರೆ, ಜೇಸನ್​ ವಾಟ್ಕಿನ್ಸ್​ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಜೇಸನ್​ ವಾಟ್ಕಿನ್ಸ್​:

ಗುರುವಾರ (ಜ.20) ಮುಂಬೈನ ನಿವಾಸದಲ್ಲಿ ಜೇಸನ್​ ವಾಟ್ಕಿನ್ಸ್​ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಘಟನೆ ನಡೆದಾಗ ರೆಮೋ ಡಿಸೋಜಾ ಮತ್ತು ಅವರ ಪತ್ನಿ ಲಿಸೆಲ್ಲೆ ಅವರು ಗೋವಾದಲ್ಲಿದ್ದರು. ಜೇಸನ್​ ವಾಟ್ಕಿನ್ಸ್​ ಅವರು ಕೆಲವು ಅನಾರೋಗ್ಯದ ಸಮಸ್ಯೆಗಳಿಂದ ಬೇಸತ್ತಿದ್ದರು ಎನ್ನಲಾಗಿದೆ. ಆ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ. ಆದರೆ ಯಾವುದೇ ಸೂಸೈಡ್​ ನೋಟ್​ ಪತ್ತೆ ಆಗಿಲ್ಲ.

​ಶಾನ್​ ತಾಯಿ ನಿಧನಕ್ಕೆ ಕೈಲಾಶ್​ ಖೇರ್​ ಸಂತಾಪ:

ಖ್ಯಾತ ಗಾಯಕ ಶಾನ್​ ಅವರ ತಾಯಿ ಸೊನಾಲಿ ಮುಖರ್ಜಿ ನಿಧನರಾದ ಸುದ್ದಿಯನ್ನು ಗಾಯಕ ಕೈಲಾಶ್​ ಖೇರ್​ ಅವರು ಖಚಿತಪಡಿಸಿದ್ದಾರೆ. ‘ಶಾನ್​ ತಾಯಿ ಕೊನೆಯುಸಿರೆಳೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಶಾನ್​ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಶಿವ ನೀಡಲಿ’ ಎಂದು ಕೈಲಾಶ್​ ಖೇರ್​ ಟ್ವೀಟ್​ ಮಾಡಿದ್ದಾರೆ.

ಅನಾರೋಗ್ಯದಿಂದ ಅರುಣ್​ ವರ್ಮಾ ವಿಧಿವಶ:

ಹಿರಿಯ ನಟ ಅರುಣ್​ ವರ್ಮಾ ಅವರಿಗೆ 62 ವರ್ಷ ವಯಸ್ಸಾಗಿತ್ತು. ಸಲ್ಮಾನ್​ ಖಾನ್​ ಅಭಿನಯದ ‘ಕಿಕ್​’, ‘ಮುಜ್ಸೆ ಶಾದಿ ಕರೋಗೆ’ ಮುಂತಾದ ಸಿನಿಮಾಗಳಲ್ಲಿ ಅರುಣ್​ ವರ್ಮಾ ನಟಿಸಿದ್ದರು. ಅವರಿಗೆ ಬ್ರೇನ್​ ಸ್ಟ್ರೋಕ್​ ಆಗಿತ್ತು. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಅವರು ಬದುಕುಳಿಯಲಿಲ್ಲ. ಕಿಡ್ನಿ ವೈಫಲ್ಯ ಕೂಡ ಅವರ ನಿಧನಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:

‘ಮಹಾಭಾರತ​’ ಸೀರಿಯಲ್​ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್​ ತಂದೆ ಕೊವಿಡ್​ನಿಂದ ನಿಧನ

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು