ಬಾಲಿವುಡ್ (Bollywood) ಸ್ಟಾರ್ ನಟ-ನಟಿಯರ ಬಗ್ಗೆ ವಿಶೇಷವಾಗಿ ಕೆಲವು ನಟಿಯರ ಬಗ್ಗೆ ನಿರ್ಮಾಪಕರು ಅಸಮಾಧಾನ ಹೊರಹಾಕಿದ್ದಾರೆ. ಕೆಲವು ಹೊಸ ಪೀಳಿಗೆ ನಟ-ನಟಿಯರಿಂದಾಗಿ ಸಿನಿಮಾ ಸೆಟ್ಗಳಲ್ಲಿ ಸಮಸ್ಯೆ ಆಗುತ್ತಿದೆ ಹಾಗೂ ಪ್ರೊಡಕ್ಷನ್ ವೆಚ್ಚ ಸಹ ಏರುತ್ತಲೇ ಸಾಗುತ್ತಿದೆ ಎಂದು ನಿರ್ಮಾಪಕರು ಅಳಲು ತೋಡಿಕೊಂಡಿದ್ದು, ದೂರು ನಿರ್ಮಾಪಕ ಒಕ್ಕೂಟ (ಪ್ರೊಡ್ಯೂಸರ್ ಗಿಲ್ಡ್) ವರೆಗೆ ಹೋಗಿದ್ದು, ಈ ಬಗ್ಗೆ ಸಭೆಯೊಂದು ಸಹ ನಡೆದಿದೆ.
ಬಾಲಿವುಡ್ನ ಕೆಲವು ನಟಿಯರು ಸಿನಿಮಾದ ನಿರ್ಮಾಣ ವೆಚ್ಚ ಏರಲು ಕಾರಣವಾಗಿದ್ದಾರಂತೆ. ನಟಿಯರು ತಮ್ಮೊಂದಿಗೆ 10-12 ಮಂದಿ ಸಿಬ್ಬಂದಿಯನ್ನು ಕರೆದುಕೊಂಡು ಬರುತ್ತಾರೆ. ಮೇಕಪ್ಗೆ ಪ್ರತ್ಯೇಕ ಸಿಬ್ಬಂದಿ, ಸೋಷಿಯಲ್ ಮೀಡಿಯಾ ಸಿಬ್ಬಂದಿ, ಕೇಶ ವಿನ್ಯಾಸಕರು, ಮ್ಯಾನೇಜರ್, ಸಹಾಯಕ-ಸಹಾಯಕಿ, ಡಯಟೀಶಿಯನ್, ಟ್ಯಾಲೆಂಟ್ ಏಜೆನ್ಸಿಯವರು ಹೀಗೆ ದೊಡ್ಡ ತಂಡವನ್ನು ತಮ್ಮೊಂದಿಗೆ ಕರೆತಂದು ಅವರ ಟಿಎ-ಡಿಎಗಳನ್ನು ನಿರ್ಮಾಪಕರ ಖಾತೆಗೆ ಸೇರಿಸುತ್ತಾರೆ. ಇದರಿಂದ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಕೆಲವು ನಟರೂ ಸಹ ತಮ್ಮೊಂದಿಗೆ ದೊಡ್ಡ ತಂಡವನ್ನೇ ಕರೆತರುತ್ತಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ರೆಡಿಯಾದ ಮತ್ತೊಬ್ಬ ಬಾಲಿವುಡ್ ಯುವನಟಿ
ಹಿಂದಿ ನಿರ್ಮಾಪಕರ ಗಿಲ್ಡ್, ತೆಲುಗು ಹಾಗೂ ತಮಿಳು ನಿರ್ಮಾಪಕರ ಗಿಲ್ಡ್ ಜೊತೆಗೆ ಬಾಲಿವುಡ್ನ ಕೆಲವು ಪ್ರಮುಖ ಟ್ಯಾಲೆಂಟ್ ಏಜೆನ್ಸಿಗಳು ಸೇರಿ ಕೆಲವು ದಿನಗಳ ಹಿಂದಷ್ಟೆ ಸಭೆ ನಡೆಸಿದ್ದು, ಸಿನಿಮಾ ನಿರ್ಮಾಣದ ವೆಚ್ಚ ಏರಿಕೆ ಆಗುತ್ತಿರುವ ಜೊತೆಗೆ ನಟ-ನಟಿಯರ ಅನವಶ್ಯಕ ಖರ್ಚುಗಳ ಬಗ್ಗೆ ಚರ್ಚೆಯಾಗಿದೆ. ನಟ-ನಟಿಯರು ತಮ್ಮೊಟ್ಟಿಗೆ ಕರೆತರುವ ಸಿಬ್ಬಂದಿ ವರ್ಗದ ಖರ್ಚುಗಳು, ನಟ-ನಟಿಯರು ಸೆಟ್ನಲ್ಲಿ ಆಹಾರ ಸೇರಿದಂತೆ ಇತರೆ ವಿಷಯಗಳಿಗೆ ಇಡುವ ಬೇಡಿಕೆಗಳಿಂದ ಆಗುತ್ತಿರುವ ಖರ್ಚು ಇದರಿಂದ ಹೆಚ್ಚಾಗುತ್ತಿರುವ ನಿರ್ಮಾಣ ವೆಚ್ಚದ ಬಗ್ಗೆ ಗಂಭೀರ ಚರ್ಚೆಯೇ ನಡೆದಿದ್ದು, ಇದನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ನಟ-ನಟಿಯರ ಒಪ್ಪಂದದ ವೇಳೆಯೇ ಈ ಎಲ್ಲ ಖರ್ಚುಗಳನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬಾಲಿವುಡ್ನ ಸ್ಟಾರ್ ನಿರ್ಮಾಪಕ ಫರ್ಹಾ ಖಾನ್, ನಟಿ-ನಿರ್ಮಾಪಕಿ ಎರಡೂ ಆಗಿರುವ ಕೃತಿ ಸೆನನ್ ಇನ್ನಿತರರು ಇತ್ತೀಚೆಗೆ ನಟಿಯರಿಂದ ಹೆಚ್ಚಾಗುತ್ತಿರುವ ಅನಗತ್ಯ ಖರ್ಚಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ನಟಿಯರು ತಮ್ಮೊಂದಿಗೆ ಹತ್ತೆನ್ನೆರಡು ಜನರನ್ನು ಕೆರತಂದು ಅವರ ಖರ್ಚನ್ನು ನಿರ್ಮಾಪಕರ ಮೇಲೆ ಹೇರುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಇದೇ ಸಮಸ್ಯೆ ಇದೆ ಎನ್ನಲಾಗುತ್ತಿದೆ. ನಟಿ ಪ್ರಿಯಾಮಣಿ ಸಹ ಈ ವಿಷಯದ ಬಗ್ಗೆ ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ