
ನಟ ಆಮಿರ್ ಖಾನ್ (Aamir Khan) ಅವರು ಭಾರಿ ಉತ್ಸಾಹದಿಂದ ಹೊಸ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಅವರು ಮತ್ತು ಕರೀನಾ ಕಪೂರ್ ಜೋಡಿಯಾಗಿ ನಟಿಸಿರುವ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಆಗಸ್ಟ್ 11ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಆದರೆ ಕೆಲವರು ಈ ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಆಮಿರ್ ಖಾನ್ ಅವರು ಈ ಹಿಂದೆ ನೀಡಿದ್ದ ಕೆಲವು ಹೇಳಿಕೆಗಳನ್ನು ಇಟ್ಟುಕೊಂಡು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ನೆಟ್ಟಿಗರು ಅಭಿಯಾನ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ #BoycottLaalSinghChaddha ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಇದರಿಂದ ಚಿತ್ರದ ಬಾಕ್ಸ್ ಆಫೀಸ್ ಮೇಲೆ ನೆಗೆಟಿವ್ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ನಟಿ ಕರೀನಾ ಕಪೂರ್ (Kareena Kapoor Khan) ಅವರು ಈ ಮೊದಲು ನೀಡಿದ್ದ ಕೆಲವು ಹೇಳಿಕೆಗಳು ಕೂಡ ಕಾಂಟ್ರವರ್ಸಿ ಸೃಷ್ಟಿ ಮಾಡಿದ್ದವು. ಅವುಗಳನ್ನು ಜನರು ಈಗ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ಹೇಳಿಕೆಗಳನ್ನು ಮುಂದಿಟ್ಟುಕೊಂಡು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ವಿರೋಧಿಸಲಾಗುತ್ತಿದೆ. ಅಂತಿಮವಾಗಿ ಈ ವಿವಾದ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕೌತುಕ ಮೂಡಿದೆ.
ಭಾರತದಲ್ಲಿ ಅಸಹಿಷ್ಣತೆ ಇದೆ ಎಂದು ಈ ಹಿಂದೆ ಆಮಿರ್ ಖಾನ್ ಹೇಳಿದ್ದರು. ಅದೇ ರೀತಿ, ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎಂದು ಹೇಳಿಕೆ ನೀಡಿದ್ದರು. ಇಂಥ ಕೆಲವು ಹೇಳಿಕೆಗಳಿಂದ ಅವರು ನೆಟ್ಟಿಗರ ವಿರೋಧ ಕಟ್ಟಿಕೊಂಡಿದ್ದರು. ಈಗ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಆ ಹೇಳಿಕೆಗಳು ಆಮಿರ್ ಖಾನ್ಗೆ ಮುಳುವಾಗುತ್ತಿವೆ.
ಭಾನುವಾರ (ಮೇ 29) ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಚಂದನ್ ಅದ್ವೈತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಆಗಿ ಈ ಸಿನಿಮಾ ಮೂಡಿಬಂದಿದೆ. ಹಲವು ಗೆಟಪ್ಗಳಲ್ಲಿ ಆಮಿರ್ ಖಾನ್ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬನ ಎಮೋಷನಲ್ ಸ್ಟೋರಿ ಈ ಚಿತ್ರದಲ್ಲಿದೆ.
ಇದನ್ನೂ ಓದಿ: ಫ್ಯಾಮಿಲಿ ಜತೆ ಆಮಿರ್ ಖಾನ್ ಪುತ್ರಿ ಇರಾ ಖಾನ್ ಬರ್ತ್ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್ ಹೇಳಿದ್ದೇನು?
ವೈಯಕ್ತಿಕವಾಗಿ ತುಂಬ ಆಸಕ್ತಿ ತೆಗೆದುಕೊಂಡು ಆಮಿರ್ ಖಾನ್ ಅವರು ಈ ಸಿನಿಮಾ ಮಾಡಿದ್ದಾರೆ. ಮೂಲ ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಪ್’ ಈಗಾಗಲೇ ಒಟಿಟಿಯಲ್ಲಿ ಲಭ್ಯವಿದೆ. ಅದನ್ನು ನೋಡಿದ ಅನೇಕರು ‘ಲಾಲ್ ಸಿಂಗ್ ಚಡ್ಡಾ’ ಒಂದು ಕಾಪಿ ಸಿನಿಮಾ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:39 pm, Mon, 30 May 22