
ಕೇಂದ್ರ ಸರ್ಕಾರವು ಸಿಬಿಎಫ್ಸಿ ಅಥವಾ ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಇಂದು (ಸೆಪ್ಟೆಂಬರ್ 16) ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಈ ತಕ್ಷಣದಿಂದ ಜಾರಿಗೆ ಬರುವಂತೆ 18 ಸದಸ್ಯರ ಹೊಸ ತಂಡವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹೊಸ ಪಟ್ಟಿಯಲ್ಲಿ ವಿವಿಧ ಚಿತ್ರರಂಗದ ಗಣ್ಯರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಅದರಲ್ಲೂ ಬಾಲಿವುಡ್ಗೆ ಸಂಬಂಧಿಸಿದವರ ಸಂಖ್ಯೆ ಹೆಚ್ಚಾಗಿದೆ. ಪಟ್ಟಿಯಲ್ಲಿ ಒಬ್ಬ ಕರ್ನಾಟಕದ ಕಲಾವಿದರಿಗೂ ಅವಕಾಶ ನೀಡಲಾಗಿದೆ.
ಖ್ಯಾತ ನಟ ಸುನಿಲ್ ಶೆಟ್ಟಿ, ನಟಿ ಪ್ರೀತಿ ಜಿಂಟಾ, ನಟ ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಖ್ಯಾತ ನಿರ್ದೇಶಕ ಪ್ರಿಯದರ್ಶನ್, ಪ್ರೊಸೆನ್ಜಿತ್ ಚಟರ್ಜಿ ಸೇರಿದಂತೆ 18 ಸದಸ್ಯರೊಂದಿಗೆ ಕೇಂದ್ರ ಸರ್ಕಾರವು ಸೆನ್ಸಾರ್ ಮಂಡಳಿಯನ್ನು ಪುನರ್ರಚಿಸಿದೆ. ಈ ಹೊಸ ಸದಸ್ಯರ ಅಧಿಕಾರ ಅವಧಿಯು ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ. ಎರಡರಲ್ಲಿ ಯಾವುದು ಮೊದಲು ಘಟಿಸುತ್ತದೆಯೋ ಅದನ್ನು ಮಾನ್ಯ ಮಾಡಲಾಗುತ್ತದೆ.
ಈ ಪಟ್ಟಿಯಲ್ಲಿ ಬೆಂಗಳೂರಿನ ಹೆಮ್ಮೆಯ ಸಂಗೀತ ಕಲಾವಿದ ರಿಕ್ಕಿ ಕೇಜ್ ಅವರ ಹೆಸರು ಇದೆ. ಮೂರು ಗ್ರ್ಯಾಮಿ ಪ್ರಶಸ್ತಿಗಳು ಸೇರಿದಂತೆ ಹಲವು ಅಂತರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ರಿಕ್ಕಿ ಕೇಜ್ ಅವರು ಸಿಬಿಎಫ್ಸಿ ಸದಸ್ಯರಾಗಿದ್ದಾರೆ. ಇವರ ಜೊತೆಗೆ ನಿರ್ದೇಶಕಿ ಪಲ್ಲವಿ ಜೋಶಿ, ನಟಿ ರೂಪಾಲಿ ಗಂಗೂಲಿ, ಚಲನಚಿತ್ರ ನಿರ್ದೇಶಕ ನೀಲಾ ಮಾಧಬ್ ಪಾಂಡಾ, ನಟಿ ನಿಶಿಂಧಾ ವಾಡ್, ಗಾಯಕ ಹಂಸರಾಜ್ ಹಂಸ ಮತ್ತು ನಿರ್ದೇಶಕ ವಾಮನ್ ಕೇಂದ್ರೆ, ವಿನೋದ್ ಅನುಪಮ್, ಅಭಿಷೇಕ್ ಜೈನ್, ಸುಪ್ರಿಯಾ ಯರ್ಲಗಡ್ಡ, ಯತೀಂದ್ರ ಮಿಶ್ರಾ ಮತ್ತು ರಮೇಶ್ ಪಟಾಂಜೆ ಕೂಡ ಸೇರಿದ್ದಾರೆ.
ಇದನ್ನೂ ಓದಿ:ಸೈಮಾ ಪ್ರಶಸ್ತಿ ಪಡೆದ ಖುಷಿಯಲ್ಲಿ ನಟಿ ಆಶಿಕಾ ರಂಗನಾಥ್
ಭಾರತದಲ್ಲಿ ಚಲನಚಿತ್ರಗಳಿಗೆ ಸಾರ್ವಜನಿಕ ಪ್ರದರ್ಶನಕ್ಕಾಗಿ ಪ್ರಮಾಣಪತ್ರ ನೀಡುವ ಜವಾಬ್ದಾರಿಯನ್ನು ಸಿಬಿಎಫ್ಸಿ ಹೊಂದಿದೆ. ಸರ್ಕಾರವು 2026ರ ಮೇ ತಿಂಗಳಲ್ಲಿ ಶಶಿ ಶೇಖರ್ ವೆಂಪತಿ ಅವರನ್ನು ಮೂರು ವರ್ಷಗಳ ಅವಧಿಗೆ CBFC ಅಧ್ಯಕ್ಷರನ್ನಾಗಿ ನೇಮಿಸಿತ್ತು. ಪ್ರಸೂನ್ ಜೋಶಿ ಅವರು ಪ್ರಸಾರ ಭಾರತೀಯ ಅಧ್ಯಕ್ಷರಾಗಿ ನೇಮಕಗೊಂಡು ಹುದ್ದೆಯಿಂದ ಕೆಳಗಿಳಿದ ನಂತರ, ಶಶಿ ಶೇಖರ್ ವೆಂಪತಿ ಆ ಸ್ಥಾನವನ್ನು ವಹಿಸಿಕೊಂಡಿದ್ದರು. ಇತ್ತೀಚಿನ ಅಧಿಸೂಚನೆಯ ಪ್ರಕಾರ ಅಧ್ಯಕ್ಷರ ಹುದ್ದೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಸಿಬಿಎಫ್ಸಿ ಹಾಗೂ ಸಿನಿಮಾ ನಿರ್ದೇಶಕರುಗಳ ಮಧ್ಯೆ ಸಾಕಷ್ಟು ತಿಕ್ಕಾಟಗಳು ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿದೆ. ಸಿಬಿಎಫ್ಸಿಯು ಅತಿಯಾದ ಸೆನ್ಸಾರ್ಶಿಪ್ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನಿರಾಕರಿಸಿದಾಗ ರಾಜಕೀಯದ ಆರೋಪವೂ ಸಹ ಕೇಳಿ ಬಂದಿತ್ತು. ಇದರ ನಡುವೆ ಇದೀಗ ಸದಸ್ಯರ ಬದಲಾವಣೆ ಆಗಿರುವುದು ಕುತೂಹಲ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ