ರಾಜಕಾರಣದಿಂದ ದೂರವಾಗಿ ಭಾರತೀಯ ಸಿನಿಮಾ ಕ್ಷೇತ್ರದ ಉತ್ತುಂಗಕ್ಕೇರಿದ ನಟ ಅನಂತ್ ನಾಗ್: ಇಲ್ಲಿವೆ ಕೆಲ ಇಂಟರೆಸ್ಟಿಂಗ್ ವಿಚಾರಗಳು
ಸಿನಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗ ಅನಂತ್ ನಾಗ್, ಈ ಹಿಂದೆ ರಾಜಕಾರಣಿ ಆಗಿದ್ದವರು. ಆದರೆ 2004ರಲ್ಲಿ ರಾಜಕೀಯದಿಂದ ದೂರ ನಡೆದಿದ್ದ ಅವರೀಗ ಭಾರತ ಸಿನಿಮಾ ಕ್ಷೇತ್ರದ ಉತ್ತುಂಗಕ್ಕೆ ಏರಿದ್ದಾರೆ. ಹಿರಿಯ ನಟನ ಕುರಿತ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಅನೇಕ ಸಿನಿಮಾ ಕಲಾವಿದರು ರಾಜಕೀಯ ಕ್ಷೇತ್ರ ತುಳಿದಿರುವ ಇತಿಹಾಸ ಭಾರತದಲ್ಲಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿ ತಾರೆಯರು ಈ ವಿಚಾರದಲ್ಲಿ ತುಸು ಮುಂದಿದ್ದಾರೆ. ಇಂತವರ ಸಾಲಿಗೆ ಸೇರಿದವರು ಕನ್ನಡದ ಹಿರಿಯ ನಟ ಅನಂತ್ ಕುಮಾರ್ ಕೂಡ. ಹೌದು, ತಮ್ಮ ನಟನೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಡಬಲ್ಲ ಮಾಂತ್ರಿಕ ನಟ ಅನಂತ್ ನಾಗ್ ಈ ಹಿಂದೆ ಒಬ್ಬ ರಾಜಕಾರಣಿ. ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದವರು. ಆದರೆ ಕಳೆದ 22 ವರ್ಷಗಳಿಂದ ಚುನಾವಣಾ ರಾಜಕಾರಣದಿಂದ ಇವರು ದೂರವೇ ಉಳಿದಿದ್ದು, ತಮ್ಮನ್ನು ಸಂಪೂರ್ಣವಾಗಿ ಸಿನಿಮಾಗೆ ಸಮರ್ಪಿಸಿಕೊಂಡಿದ್ದಾರೆ. ಇದರ ಪ್ರತಿಫಲ ಎಂಬಂತೆ ಭಾರತದ ಸಿನಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವರೀಗ ಭಾಜನರಾಗಿದ್ದಾರೆ.
ಆಕಸ್ಮಿಕವಾಗಿ ರಾಜಕೀಯಕ್ಕೆ ಎಂಟ್ರಿ, ರಾಮಕೃಷ್ಣ ಹೆಗಡೆಯೇ ಪ್ರೇರಣೆ
ಅನಂತ್ ನಾಗ್ ಅವರು ರಾಜಕೀಯಕ್ಕೆ ಬಂದದ್ದು ಆಕಸ್ಮಿಕವಾಗಿ. 1980ರ ದಶಕದಿಂದಲೂ ಜನತಾ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ರಾಮಕೃಷ್ಣ ಹೆಗಡೆಯಿಂದ ಪ್ರೇರಣೆ ಪಡೆದಿದ್ದರು. 1983ರ ವಿಧಾನಸಭಾ ಚುನಾವಣೆ ವೇಳೆ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿ ರಾಜಕೀಯ ಅಖಾಡಕ್ಕೆ ಧುಮುಕಿದ ಅನಂತ್ ನಾಗ್, ಅದೇ ವರ್ಷ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 1988 ರಿಂದ 1994 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ 1994ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ನಗರಾಭಿವೃದ್ಧಿ ಸಚಿವರಾಗಿ (1996–1999) ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ‘ದಾದಾ ಸಾಹೇಬ್ ಫಾಲ್ಕೆ ಸುದ್ದಿ ಕೇಳಿ ಅನಂತ್ ನಾಗ್ ನಕ್ಕಿ ಮಲಗಿದ್ರು’; ಗಾಯತ್ರಿ ಅನಂತ್ ನಾಗ್
ರಾಜಕಾರಣಬಿಟ್ಟ ಬಳಿಕ ಹಲವು ಹಿಟ್ ಚಿತ್ರಗಳಲ್ಲಿ ನಟನೆ
2004ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಥಿಸಿದ್ದ ಅನಂತ್ ನಾಗ್, ಮೂರನೇ ಸ್ಥಾನ ಪಡೆದು ಸೋಲುಂಡಿದ್ದರು. ಬಳಿಕ ರಾಜಕಾರಣದಿಂದ ದೂರವಾದ ಅವರು ಮತ್ತೆ ಸಿನಿಮಾಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ನೆನಪಿರಲಿ (2005), ಮುಂಗಾರು ಮಳೆ (2006), ಗಾಳಿಪಟ (2008), ಪಂಚರಂಗಿ (2010), ಪರಮಾತ್ಮ (2011), ಮೈನಾ, ಗೂಗ್ಲಿ, ಕಡ್ಡಿಪುಡಿ (2013), ಗಜಕೇಸರಿ (2014), ರಾಜಕುಮಾರ (2017), ಸ.ಹಿ.ಪ್ರಾ. ಶಾಲೆ ಕಾಸರಗೋಡು, ಕೆಜಿಎಫ್-1 (2018), ಗಾಳಿಪಟ-2 (2022) ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 pm, Wed, 16 September 26




