ಸೆಲೆಬ್ರಿಟಿಗಳಿಗೆ ಟ್ರೋಲ್ (Troll) ಕಾಟ ತಪ್ಪಿದ್ದಲ್ಲ. ಸದಾ ಕಾಲ ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಳ್ಳುವ ನಟ-ನಟಿಯರು ಎಷ್ಟು ಹುಷಾರಾಗಿದ್ದರೂ ಒಂದಿಲ್ಲೊಂದು ತಪ್ಪು ಕಂಡು ಹಿಡಿದು ಟ್ರೋಲ್ ಮಾಡಲಾಗುತ್ತದೆ. ಅದರಲ್ಲೂ ಈಗಿನ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ತಾರೆಯರಿಗೆ ಟ್ರೋಲ್ನದ್ದೇ ಕಿರಿಕಿರಿ. ಕೆಲವೊಮ್ಮೆ ಏನೂ ತಪ್ಪು ಮಾಡದೇ ಇದ್ದರೂ ಕೂಡ ಜನರಿಂದ ನೆಗೆಟಿವ್ ಕಮೆಂಟ್ಗಳನ್ನು ಸ್ವೀಕರಿಸಬೇಕಾಗುತ್ತದೆ. ಈಗ ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಅದೇ ರೀತಿ ಟಾರ್ಗೆಟ್ ಮಾಡಲಾಗಿದೆ. ಇತ್ತೀಚೆಗೆ ಅವರು ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ ಮತ್ತು ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಅವು ವೈರಲ್ ಆಗುತ್ತಿದ್ದಂತೆಯೇ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆಡೆಗೆ ತೆರಳುತ್ತಿರುವುದಕ್ಕೂ ರಣಬೀರ್ ಕಪೂರ್-ಆಲಿಯಾ ಭಟ್ ಮದುವೆಗೂ (Alia Bhatt Ranbir Kapoor Marriage) ಲಿಂಕ್ ಇದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈಗ ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅವರು ಹಸೆಮಣೆ ಏರುತ್ತಿದ್ದಾರೆ. ಇಂದು (ಏ.14) ಮುಂಬೈನಲ್ಲಿ ಅದ್ದೂರಿಯಾಗಿ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಈ ಸಂದರ್ಭಕ್ಕೆ ಸರಿಯಾಗಿ ನಟಿ ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆ ಕಡೆಗೆ ತೆರಳಿರುವುದು ಜನರ ಅನುಮಾನಕ್ಕೆ ಕಾರಣ ಆಗಿದೆ.
ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರು ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದರು. ನಂತರ ಅವರ ಸಂಬಂಧ ಬ್ರೇಕಪ್ನಲ್ಲಿ ಅಂತ್ಯವಾಯ್ತು. ಈಗ ಮಾಜಿ ಪ್ರಿಯಕರನ ಮದುವೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆ ಊರಿಗೆ ತೆರಳಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ದೀಪಿಕಾ ಓರ್ವ ಸ್ಟಾರ್ ನಟಿ. ಅವರಿಗೆ ಸಿನಿಮಾ ಮಾತ್ರವಲ್ಲದೇ ಹಲವು ಕೆಲಸಗಳು ಇರುತ್ತವೆ. ಆದರೆ ಯಾವ ಕಾರಣಕ್ಕಾಗಿ ಅವರು ಈಗ ಮುಂಬೈನಿಂದ ಹೊರಗೆ ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ದೀಪಿಕಾ ಪಡುಕೋಣೆ ಕಡೆಯಿಂದ ಪ್ರತಿಕ್ರಿಯೆ ಬರುವುದಕ್ಕೂ ಮುನ್ನವೇ ಜನರು ಬಗೆಬಗೆಯಲ್ಲಿ ನೆಗೆಟಿವ್ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ‘ರಣಬೀರ್ ಕಪೂರ್ ಹೊಸ ಜೀವನ ಕಟ್ಟಿಕೊಳ್ಳುತ್ತಿರುವುದು ದೀಪಿಕಾಗೆ ಇಷ್ಟ ಇಲ್ಲ. ಹೊಟ್ಟೆ ಕಿಚ್ಚಿನಿಂದಾಗಿ ಅವರು ಅವರು ಮುಂಬೈ ಬಿಟ್ಟು ಹೋಗುತ್ತಿದ್ದಾರೆ’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಸಿಲ್ಲಿ ಕಮೆಂಟ್ಗಳಿಗೆ ಪ್ರತಿಕ್ರಿಯೆ ನೀಡಲು ದೀಪಿಕಾ ಅವರಿಗೆ ಟೈಮ್ ಇಲ್ಲ. ತಮ್ಮ ಪಾಡಿಗೆ ಅವರು ಕೆಲಸದ ಕಡೆಗೆ ಗಮನ ಹರಿಸಿದ್ದಾರೆ.
ಮಾಜಿ ಬಾಯ್ಫ್ರೆಂಡ್ ಮದುವೆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಸೈಲೆಂಟ್ ಆಗಿದ್ದಾರೆ. ರಣಬೀರ್-ಆಲಿಯಾ ವಿವಾಹಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಕೇವಲ ಒಂದೇ ಒಂದು ಲೈಕ್ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಹೌದು, ‘ಬ್ರಹ್ಮಾಸ್ತ್ರ’ ನಿರ್ದೇಶಕ ಅಯಾನ್ ಮುಖರ್ಜಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಲಿಯಾ-ರಣಬೀರ್ಗೆ ಶುಭಾಶಯ ಕೋರಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ದೀಪಿಕಾ ಪಡುಕೋಣೆ ಲೈಕ್ ಮಾಡಿದ್ದಾರೆ ಅಷ್ಟೇ. ಈ ವಿಚಾರ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.
ಇದನ್ನೂ ಓದಿ:
ಮದುವೆ ವಿಚಾರ ಖಚಿತಪಡಿಸಿದ ಆಲಿಯಾ ಭಟ್; ಒಂದೇ ಕಮೆಂಟ್ ಮೂಲಕ ಎಲ್ಲವೂ ಬಹಿರಂಗ
ಮುಂಬೈಗೆ ತೆರಳಿ ಆಲಿಯಾಗೆ ಶುಭ ಹಾರೈಸಲಿದೆ ‘ಆರ್ಆರ್ಆರ್’ ತಂಡ; ಬುಕ್ ಆಯ್ತು ವಿಶೇಷ ವಿಮಾನ