
‘ಧುರಂಧರ್ 2’ (Dhurandhar 2) ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬರುತ್ತಿರುವಾಗ ಚಿತ್ರಕ್ಕೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಕಥೆ ಕದ್ದಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಸಿನಿಮಾದ ಹಾಡೊಂದಕ್ಕೆ ಕತ್ತರಿ ಬೀಳುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಆ ಹಾಡನ್ನು ಉಳಿಸಿಕೊಳ್ಳಬೇಕು ಎಂದಾದರೆ ಇವರು ದೊಡ್ಡ ಮೊತ್ತ ಪಾವತಿಸಬೇಕಾಗಿ ಬರಹುದು ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ್ 2’ ಸಿನಿಮಾನ ಆದಿತ್ಯ ಧಾರ್ ಹಾಗೂ ಜಿಯೋ ಸ್ಟುಡಿಯೋ ಒಟ್ಟಾಗಿ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಅನೇಕ ಹಳೆಯ ಹಾಡುಗಳನ್ನು ಬಳಕೆ ಮಾಡಲಾಗಿದೆ. ಈ ಸಿನಿಮಾದಲ್ಲಿ ‘ರಂಗ್ ದೆ ಲಾಲ್’ ಎಂಬ ಹಾಡಿದೆ. ಈ ಚಿತ್ರದ ಮೂಲ ಹಾಡು ‘ತ್ರಿದೇವ್’ನಲ್ಲಿ ಬಳಕೆ ಆಗಿತ್ತು ಎನ್ನಲಾಗಿದೆ. ಈ ಹಾಡನ್ನು ಆನಂದ್ ಭಕ್ಷಿ, ಕಲ್ಯಾಣ್, ಆನಂದ್ ಕಂಪೋಸ್ ಮಾಡಿದ್ದರು. ಈ ಹಾಡನ್ನು ಅಮಿತ್ ಕುಮಾರ್ ಹಾಗೂ ಸಪ್ನಾ ಮುಖರ್ಜಿ ಹಾಡಿದ್ದರು.
ಈಗ ತ್ರಿಮೂರ್ತಿ ಫಿಲ್ಮ್ಸ್ ಅವರು ಈ ಹಾಡಿನ ಹಕ್ಕು ತಮ್ಮದು ಎಂದು ಪ್ರತಿಪಾದಿಸಿದ್ದಾರೆ. ‘ರಂಗ್ ದೇ ಲಾಲ್’ ಹಾಡು ನಮ್ಮ ಹಾಡಿಗೆ ಹೋಲಿಕೆ ಆಗುತ್ತದೆ ಎಂಬುದು ಕಂಪನಿಯ ಆರೋಪ. ಸರಿಯಾದ ಒಪ್ಪಿಗೆ ಪಡೆಯದೇ ಈ ಹಾಡನ್ನು ಬಳಕೆ ಮಾಡಲಾಗಿದೆ ಎಂಬುದು ತ್ರಿಮೂರ್ತಿ ಫಿಲ್ಮ್ಸ್ ಆರೋಪ.
ತ್ರಿಮೂರ್ತಿ ಫಿಲ್ಮ್ಸ್ ಸದ್ಯ ಈ ಹಾಡನ್ನು ಬಳಕೆ ಮಾಡದಂತೆ ಆದೇಶ ನೀಡಬೇಕು ಎಂದು ಕೋರ್ಟ್ ಬಳಿ ಕೋರಿದೆ ಎನ್ನಲಾಗಿದೆ. ಜೊತೆಗೆ ಈ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಿದ್ದಕ್ಕೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದೆ. ಒಂದೊಮ್ಮೆ ‘ಧುರಂಧರ್ 2’ ತಂಡದ ತಪ್ಪು ಕಂಡು ಬಂದು ಈ ಬಗ್ಗೆ ಆದೇಶ ಹೊರಡಿಸಿದರೆ ಸಿನಿಮಾಗೆ ಸಾಕಷ್ಟು ನಷ್ಟ ಉಂಟಾಗಲಿದೆ.
ಇದನ್ನೂ ಓದಿ: ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್
ಈ ಮೊದಲು ‘ಧುರಂಧರ್ 2’ ವಿರುದ್ಧ ಕಥೆ ಕದ್ದ ಆರೋಪ ಬಂದಾಗ ಇದನ್ನು ನಿರ್ದೇಶಕ ಆದಿತ್ಯ ಧಾರ್ ಅವರು ನಿರಾಕರಿಸಿದ್ದರು. ಈಗ ಈ ಆರೋಪವನ್ನು ತಂಡ ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Thu, 9 April 26