‘ಧುರಂಧರ್’ ಸಿನಿಮಾಗೆ 90 ಕೋಟಿ ರೂಪಾಯಿ ನಷ್ಟ ಆಗಿದ್ದು ಯಾಕೆ?

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾವನ್ನು ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ. ಹಾಗಿದ್ದರೂ ಕೂಡ ಈ ಸಿನಿಮಾ ಜಾಗತಿಕ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಂದು ವೇಳೆ ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ‘ಧುರಂಧರ್’ ಬಿಡುಗಡೆ ಆಗಿದ್ದರೆ ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚುತ್ತಿತ್ತು.

‘ಧುರಂಧರ್’ ಸಿನಿಮಾಗೆ 90 ಕೋಟಿ ರೂಪಾಯಿ ನಷ್ಟ ಆಗಿದ್ದು ಯಾಕೆ?
Dhurandhar Movie Still

Updated on: Dec 31, 2025 | 6:04 PM

ಅಕ್ಷಯ್ ಖನ್ನಾ, ರಣವೀರ್ ಸಿಂಗ್ (Ranveer Singh) ಮುಂತಾದವರು ನಟಿಸಿರುವ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್ 1100 ಕೋಟಿ ರೂಪಾಯಿ ಮೀರಿದೆ. ನಿರ್ಮಾಪಕರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ಆಗಿದೆ. ಇಂದಿಗೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಲೇ ಇದೆ. ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾ 800 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಹಾಗಿದ್ದರೂ ಕೂಡ ‘ಧುರಂಧರ್’ (Dhurandhar) ಸಿನಿಮಾಗೆ 90 ಕೋಟಿ ರೂಪಾಯಿ ಹೆಚ್ಚುವರಿ ಲಾಭ ಮಿಸ್ ಆಗಿದೆ. ಅದು ಹೇಗೆ ಎಂಬುದನ್ನು ವಿತರಕರು ವಿವರಿಸಿದ್ದಾರೆ.

ಬಾಲಿವುಡ್ ಸಿನಿಮಾಗಳಿಗೆ ವಿಶ್ವಾದ್ಯಂತ ಮಾರುಕಟ್ಟೆ ಇದೆ. ಮಿಡಲ್ ಈಸ್ಟ್ ದೇಶಗಳಲ್ಲಿ ಹಿಂದಿ ಸಿನಿಮಾಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ಆದರೆ ‘ಧುರಂಧರ್’ ಸಿನಿಮಾವನ್ನು ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ. ಅದರಿಂದಾಗಿ ಈ ಚಿತ್ರಕ್ಕೆ ಆಗಬೇಕಿದ್ದ ಹೆಚ್ಚುವರಿ 90 ಕೋಟಿ ರೂಪಾಯಿಗಳು ನಷ್ಟ ಆಗಿವೆ ಎಂಬುದು ವಿತರಕರ ಲೆಕ್ಕಾಚಾರ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ‘ಧುರಂಧರ್’ ಸಿನಿಮಾದಲ್ಲಿ ತೋರಿಸಲಾಗಿದೆ. ಪಾಕಿಸ್ತಾನ ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ಎಳೆಎಳೆಯಾಗಿ ಈ ಸಿನಿಮಾದಲ್ಲಿ ಬಿಡಿಸಿ ಇಡಲಾಗಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸಲಾಗಿದೆ. ಧರ್ಮದ ಕುರಿತ ವಿಚಾರಗಳು ಪ್ರಸ್ತಾಪ ಆಗಿರುವುದರಿಂದ ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಸಿನಿಮಾ ಬ್ಯಾನ್ ಆಗಿದೆ.

ಲೆಬೆನಾನ್, ಸಿರಿಯಾ, ಇಸ್ರೇಲ್, ಜೋರ್ಡನ್, ಸೌದಿ ಅರೇಬಿಯಾ, ಯೆಮನ್, ಓಮನ್, ಬರ್ಹೇನ್, ಖತಾರ್, ಯುನೈಟೆಡ್ ಅರಬ್ ಎಮಿರೈಟ್ಸ್, ಕುವೈತ್, ಇರಾಕ್, ಇರಾನ್ ದೇಶಗಳಲ್ಲಿ ‘ಧುರಂಧರ್​’ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಪಾಕಿಸ್ತಾನದಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಪೈರಸಿ ಮೂಲಕ ಅಲ್ಲಿನ ಜನರು ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಅನಾಯಾಸವಾಗಿ ಭಾರತದಲ್ಲೇ 800 ಕೋಟಿ ರೂಪಾಯಿ ಗಳಿಸಲಿದೆ ‘ಧುರಂಧರ್’

ಅಕ್ಷಯ್ ಖನ್ನಾ ಅವರು ‘ಧುರಂಧರ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರೂ ಕೂಡ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಸಾರಾ ಅರ್ಜುನ್ ಅವರು ನಾಯಕಿಯಾಗಿ ಮಿಂಚಿದ್ದಾರೆ. ಭಾರತೀಯ ಗೂಢಚಾರಿ ಪಾತ್ರದಲ್ಲಿ ರಣವೀರ್ ಸಿಂಗ್ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಬಿಡುಗಡೆಯಾಗಿ 27 ದಿನಗಳು ಕಳೆದರೂ ಹೌಸ್​ಫುಲ್ ಪ್ರದರ್ಶನ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.