ಹಿಗ್ಗಾಮುಗ್ಗಾ ಟ್ರೋಲ್ ಆದರೂ ಬುದ್ಧಿ ಕಲಿಯದ ‘ಧುರಂಧರ್’ ಗಾಯಕಿ; ವೇದಿಕೆಯಲ್ಲಿ ಮತ್ತೆ ಕಳ್ಳಾಟ

‘ಧುರಂಧರ್’ ಸಿನಿಮಾದ ಹಾಡುಗಳ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರು ಟೀಕೆಗೆ ಗುರಿಯಾಗಿದ್ದಾರೆ. ವೇದಿಕೆಯಲ್ಲಿ ಲಿಪ್ ಸಿಂಕ್ ಮಾಡಿದ್ದಕ್ಕಾಗಿ ಅವರು ಈ ಮೊದಲು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಆದರೂ ಸಹ ತಮ್ಮ ವರ್ತನೆ ಬದಲಾಯಿಸಿಕೊಂಡಿಲ್ಲ. ಹೈದರಾಬಾದ್​ನಲ್ಲಿ ಕೂಡ ಅವರು ಲಿಪ್ ಸಿಂಕ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.

ಹಿಗ್ಗಾಮುಗ್ಗಾ ಟ್ರೋಲ್ ಆದರೂ ಬುದ್ಧಿ ಕಲಿಯದ ‘ಧುರಂಧರ್’ ಗಾಯಕಿ; ವೇದಿಕೆಯಲ್ಲಿ ಮತ್ತೆ ಕಳ್ಳಾಟ
Jasmine Sandlas

Updated on: Jun 29, 2026 | 2:58 PM

ಮುಖ್ಯಾಂಶಗಳು

  • ಪದೇ ಪದೇ ಲಿಪ್ ಸಿಂಕ್ ಮಾಡಿ ಟ್ರೋಲ್ ಆಗುತ್ತಿರುವ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್.
  • ಹೈದರಾಬಾದ್ ಕಾರ್ಯಕ್ರಮಕ್ಕೆ 3 ಗಂಟೆ ತಡವಾಗಿ ಬಂದರೂ ಕ್ಷಮೆಯಾಚನೆ ಮಾಡಿಲ್ಲ.
  • ಇಂಥ ಶೋ ಆಯೋಜಿಸಿದವರ ವಿರುದ್ಧ ಜನಾಕ್ರೋಶ. ‘ಧುರಂಧರ್’ ಗಾಯಕಿ ಟ್ರೋಲ್.

ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ (Jasmine Sandlas) ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 27ರಂದು ಹೈದರಾಬಾದ್‌ನ ‘ಕ್ವೇಕ್ ಅರೆನಾ’ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಜಾಸ್ಮಿನ್ ಅವರು ನಿಗದಿತ ಸಮಯಕ್ಕಿಂತ ಬರೋಬ್ಬರಿ 3 ಗಂಟೆ ತಡವಾಗಿ ವೇದಿಕೆ ಏರಿದ್ದಲ್ಲದೆ, ಲೈವ್ ಶೋನಲ್ಲಿ ಹಾಡುವ ಬದಲು ಲಿಪ್-ಸಿಂಕ್ (Lip Sync) ಮಾಡಿದ್ದಾರೆ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅಭಿಮಾನಿಯೊಬ್ಬರು, ‘ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಆದರೆ ಈ ಶೋ ನನ್ನನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದೆ. ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಶೋಗೆ ಜಾಸ್ಮಿನ್ ಬಂದಿದ್ದು ರಾತ್ರಿ 11.20ಕ್ಕೆ! ಮೂರು ಗಂಟೆ ತಡವಾಗಿ ಬಂದರೂ ಅವರು ಅಭಿಮಾನಿಗಳಲ್ಲಿ ಯಾವುದೇ ಕ್ಷಮೆ ಕೇಳಲಿಲ್ಲ. ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಅದಾದ ಮೇಲೆ ಲೈವ್ ಕಾರ್ಯಕ್ರಮದಲ್ಲಿ ಬಂದು ಲಿಪ್-ಸಿಂಕ್ ಮಾಡಿದರು. ಕೊನೆಯಲ್ಲಿ ಯಾರಿಗೂ ಧನ್ಯವಾದ ಅಥವಾ ಸಾರಿ ಹೇಳದೆ ದಿಢೀರನೆ ವೇದಿಕೆಯಿಂದ ನಿರ್ಗಮಿಸಿದರು’ ಎಂದು ಬೇಸರ ಹೊರಹಾಕಿದ್ದಾರೆ.

ಕೇವಲ ಗಾಯಕಿ ಮಾತ್ರವಲ್ಲದೆ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಸ್ಥೆಯ ವಿರುದ್ಧವೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ತಡವಾಗುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಮತ್ತು ಅಲ್ಲಿನ ನಿರ್ವಹಣಾ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

‘ನಾವು ರಾತ್ರಿ 8ರಿಂದ 11.30ರವರೆಗೆ ಕಾದು ಸುಸ್ತಾಗಿ ವಾಪಸ್ ಬಂದೆವು. ನಮಗೆ ದೂರದ ಊರಿಗೆ ಪ್ರಯಾಣಿಸಬೇಕಿತ್ತು. ಇಂಥ ಈವೆಂಟ್‌ಗಳು ಜನರನ್ನು ವಂಚಿಸುವ ಹೊಸ ದಾರಿಯಾಗಿವೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಜಾಸ್ಮಿನ್ ಅವರ ಹಳೆಯ ವಿಡಿಯೋಗಳನ್ನು ಪ್ರಸ್ತಾಪಿಸಿ, ‘ಅವರು ಬಹುತೇಕ ಎಲ್ಲಾ ಶೋಗಳಲ್ಲೂ ಕೇವಲ ಲಿಪ್-ಸಿಂಕ್ ಮಾತ್ರ ಮಾಡುತ್ತಾರೆ’ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ಬಯಲಾಯ್ತು ‘ಧುರಂಧರ್’ ಗಾಯಕಿಯ ಕಳ್ಳಾಟ; ಭಾರಿ ಟ್ರೋಲ್

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿವಾದ ಭಾರಿ ಸದ್ದು ಮಾಡುತ್ತಿದ್ದರೂ, ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಆಗಲಿ ಅಥವಾ ಕಾರ್ಯಕ್ರಮದ ಆಯೋಜಕರಾಗಲಿ ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us