ಸೆಲೆಬ್ರಿಟಿಗಳ ದುನಿಯಾದಲ್ಲಿ ಡಿವೋರ್ಸ್ (Divorce) ಎಂಬುದು ತುಂಬ ಕಾಮನ್ ಎಂಬಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಸ್ಟಾರ್ ದಂಪತಿಗಳು ವಿಚ್ಛೇದನ ಪಡೆದು ಸುದ್ದಿ ಆಗಿದ್ದಾರೆ. ಡಿವೋರ್ಸ್ ಪಡೆದ ಬಳಿಕ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಕೂಡ ಚರ್ಚೆಯ ವಿಷಯ ಆಗುತ್ತದೆ. ನಟಿ ದಿಯಾ ಮಿರ್ಜಾ (Dia Mirza) ಅವರು ಕೂಡ ಕಳೆದ ವರ್ಷ ಎರಡನೇ ಮದುವೆ ಆದರು. ಮೊದಲ ಪತಿ ಸಾಹಿಲ್ ಸಂಘ ಜೊತೆ ಅವರು 2014ರಲ್ಲಿ ಮದುವೆ ಆಗಿದ್ದರು. 2019ರಲ್ಲಿ ಅವರು ವಿಚ್ಛೇದನ ಪಡೆದರು. ನಂತರ ಅವರು ವೈಭವ್ ರೇಖಿ (Vaibhav Rekhi) ಜೊತೆ ಹೊಸ ಜೀವನ ಆರಂಭಿಸಿದರು. 2021ರ ಫೆಬ್ರವರಿಯಲ್ಲಿ ಅವರ ಮದುವೆಯು ಆಪ್ತರ ಸಮ್ಮುಖದಲ್ಲಿ ನೆರವೇರಿತು. ವಿಶೇಷ ಏನೆಂದರೆ ವೈಭವ್ ರೇಖಿ ಅವರು ಮೊದಲ ಪತ್ನಿಯ ಮಗಳಾದ ಸಮೈರಾ ರೇಖಿ ಜೊತೆ ದಿಯಾ ಮಿರ್ಜಾ ಅವರು ಅತ್ಯಂತ ಆತ್ಮೀಯವಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನೇಕ ಫೋಟೋಗಳಿವೆ. ಇಂದು (ಮಾ.30) ಸಮೈರಾ ರೇಖಿಯ ಜನ್ಮದಿನ. ಈ ಪ್ರಯುಕ್ತ ದಿಯಾ ಮಿರ್ಜಾ ಅವರು ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅವರು ಬರೆದುಕೊಂಡಿರುವ ವಿಶೇಷ ಸಾಲುಗಳು ಗಮನ ಸೆಳೆಯುತ್ತಿವೆ.
ಎರಡನೇ ಮದುವೆ ಆದವರು ಗಂಡನ/ಹೆಂಡತಿಯ ಮಾಜಿ ಲೈಫ್ ಪಾರ್ಟ್ನರ್ ಜೊತೆ ಅಥವಾ ಅವರ ಮಕ್ಕಳ ಜೊತೆ ಒಳ್ಳೆಯ ಸಂಬಂಧ ಹೊಂದಿರುವುದು ವಿರಳ. ಆದರೆ ದಿಯಾ ಮಿರ್ಜಾ ಅವರು ಈ ವಿಚಾರದಲ್ಲಿ ಅನೇಕರ ಮೆಚ್ಚುಗೆ ಗಿಟ್ಟಿಸುತ್ತಿದ್ದಾರೆ. ಗಂಡನ ಮೊದಲ ಪತ್ನಿಯ ಮಗಳು ಸಮೈರಾ ಇಂದು 13ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಆಕೆಯ ಹುಟ್ಟುಹಬ್ಬಕ್ಕೆ ದಿಯಾ ಮಿರ್ಜಾ ವಿಶ್ ಮಾಡಿ ಗಮನ ಸೆಳೆದಿದ್ದಾರೆ.
‘ಅತ್ಯಮೂಲ್ಯವಾದ ಹುಡುಗಿಯೇ ನಿನಗೆ 13ನೇ ವರ್ಷದ ಜನ್ಮದಿನದ ಶುಭಾಶಗಳು. ನನಗಾಗಿ ನಿನ್ನ ಮನೆಯ ಮತ್ತು ಹೃದಯದ ಬಾಗಿಲನ್ನು ತೆರೆದಿದ್ದಕ್ಕಾಗಿ ಧನ್ಯವಾದಗಳು. ನೀನು ನನ್ನ ಪಾಲಿಗೆ ತುಂಬ ಸ್ಪೆಷಲ್. ಬದುಕಿನ ಇನ್ನುಳಿದ ಕಾಲವನ್ನು ನಿನ್ನ ಜೊತೆ ಕಲಿಯುತ್ತ, ಬೆಳೆಯುತ್ತ ಕಳೆಯಲು ನಾನು ಕಾದಿದ್ದೇನೆ. ನಿನ್ನನ್ನು ನಾನು ಪ್ರೀತಿಸುತ್ತೇನೆ. ನಿನ್ನ ಪ್ರೀತಿ ಮತ್ತು ಬೆಳಕನ್ನು ಹರಡುತ್ತಾ ಇರು’ ಎಂದು ದಿಯಾ ಮಿರ್ಜಾ ಬರೆದುಕೊಂಡಿದ್ದಾರೆ.
ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ಮದುವೆ ಆದಾಗ ಆ ಸಮಾರಂಭದಲ್ಲಿ ಸಮೈರಾ ಕೂಡ ಭಾಗವಹಿಸಿದ್ದಳು. ಮಲತಾಯಿಗಾಗಿ ಪ್ರೀತಿ ಸಂದೇಶದ ಬೋರ್ಡ್ ಹಿಡಿದು ಸಂಭ್ರಮಿಸಿದ್ದಳು. ಆ ವಿಡಿಯೋಗಳು ಸಖತ್ ವೈರಲ್ ಆಗಿತ್ತು. ಈ ಮದುವೆಯ ಬಗ್ಗೆ ವೈಭವ್ ರೇಖಿ ಅವರ ಮಾಜಿ ಹೆಂಡತಿ ಸುನೈನಾ ರೇಖಿ ಖುಷಿಯಿಂದಲೇ ಮಾತನಾಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.
‘ದಿಯಾ ಮತ್ತು ವೈಭವ್ಗೆ ಮದುವೆಯ ಶುಭಾಶಯಗಳು. ನನಗೆ ಅನೇಕರು ಮೆಸೇಜ್ ಮಾಡುತ್ತಿದ್ದಾರೆ. ನೀವು ಮತ್ತು ಮಗಳು ಸಮೈರಾ ಹೇಗಿದ್ದೀರಿ ಅಂತ ಕೇಳುತ್ತಿದ್ದಾರೆ. ಈ ರೀತಿ ಪ್ರೀತಿ ಮತ್ತು ಕಾಳಜಿ ತೋರಿಸುತ್ತಿರುವುದಕ್ಕಾಗಿ ಮೊದಲಿಗೆ ಧನ್ಯವಾದಗಳು. ನಾನು ಚೆನ್ನಾಗಿ ಇದ್ದೇನೆ. ನಾನು ಮಾತ್ರವಲ್ಲ, ನನ್ನ ಮಗಳು ಕೂಡ ಚೆನ್ನಾಗಿ ಇದ್ದಾಳೆ. ಮದುವೆಯಲ್ಲಿ ಆಕೆ ಹೂವು ಎಸೆಯುತ್ತಿರುವ ವಿಡಿಯೋ ನೋಡಿದೆ. ಅವಳು ಹೆಚ್ಚು ಎಗ್ಸೈಟ್ ಆಗಿದ್ದಾಳೆ’ ಎಂದು ಸುನೈನಾ ಹೇಳಿದ್ದರು.
ದಿಯಾ ಮಿರ್ಜಾ ಮತ್ತು ವೈಭವ್ ರೇಖಿಗೆ 2021ರ ಜೂನ್ ತಿಂಗಳಲ್ಲಿ ಗಂಡು ಮಗು ಜನಿಸಿತು. ಇದು ಪ್ರೀಮೆಚ್ಯೂರ್ ಬೇಬಿ ಆಗಿರುವುದರಿಂದ ಹೆಚ್ಚಿನ ಕಾಳಜಿ ವಹಿಸಲಾಯಿತು. ಪುತ್ರನ ಫೋಟೋಗಳನ್ನು ಕೂಡ ದಿಯಾ ಮಿರ್ಜಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತ ಇರುತ್ತಾರೆ.
ಇದನ್ನೂ ಓದಿ:
‘ಡಿವೋರ್ಸ್ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್ ಖಾನ್
ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್